ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ಕೊತ್ತುಂಬರಿ ಸೊಪ್ಪಿನ ದರ

ಹೊಸದುರ್ಗ: ಅಂತರ್ಜಲ ಕುಸಿತ; ಸೊಪ್ಪು ಬೆಳೆಯಿಂದ ವಿಮುಖರಾದ ರೈತರು
Last Updated 7 ಜೂನ್ 2019, 16:22 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಮಾರುಕಟ್ಟೆಯಲ್ಲಿ ಗುರುವಾರ 100 ಸಿವುಡು ಕೊತ್ತುಂಬರಿ ಸೊಪ್ಪಿನ ಸಗಟು ದರ ₹ 900ಕ್ಕೆ ಏರಿದ್ದು, ಇದು ಸಾರ್ವತ್ರಿಕ ದಾಖಲೆಯಾಗಿದೆ.

ಈ ಹಿಂದೆ 100 ಸಿವುಡು ಕೊತ್ತುಂಬರಿಗೆ ₹ 700 ದರ ನಿಗದಿಯಾಗಿರುವುದು ದಾಖಲೆಯಾಗಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ಆರಂಭಗೊಳ್ಳಬೇಕಾಗಿದ್ದ ಸಂದರ್ಭದಲ್ಲೇ ₹ 200 ದರ ಏರಿಕೆ ಆಗಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ಸೊಪ್ಪಿನ ವ್ಯಾಪಾರಿಗಳು ಒಂದು ಸಿವುಡನ್ನು ₹ 10, ₹ 11ಕ್ಕೆ ಮಾರಾಟ ಮಾಡುತ್ತಿದ್ದಾರೆ. ಬೆಲೆ ಏರಿಕೆಯ ಜೊತೆಗೆ ಕೊತ್ತುಂಬರಿ ಸೊಪ್ಪಿನ ಸಿವುಡಿನ ಗಾತ್ರವೂ ಇಳಿಕೆಯಾಗಿದೆ. ಇದರಿಂದ ಒಂದು ಸಿವುಡು ಸೊಪ್ಪು ಬೇಳೆ, ತರಕಾರಿ ಸಾಂಬಾರು ಮಾಡಲಿಕ್ಕೂ ಸಾಕಾಗುವುದಿಲ್ಲ. ಸಿಹಿ ಅಥವಾ ಮಾಂಸಾಹಾರದ ಅಡುಗೆ ಮಾಡಲು ಮೂರ್ನಾಲ್ಕು ಸಿವುಡು ಖರೀದಿಸಬೇಕಾಗಿದೆ ಎನ್ನುತ್ತಾರೆ ಗೃಹಿಣಿ ನಾಗರತ್ನಾ.

ತಾಲ್ಲೂಕಿನ ಕೆಲ್ಲೋಡು, ಕಪ್ಪಗೆರೆ, ಕುರುಬರಹಳ್ಳಿ, ಕಬ್ಬಳ, ಹಾಗಲಕೆರೆ, ಕುಂದೂರು, ಬಾಗೂರು, ಮಾಡದಕೆರೆ, ಶ್ರೀರಂಗಾಪುರ, ನೀರಗುಂದ, ಮಳಲಿ ಸೇರಿ ಹಲವು ಹಳ್ಳಿಗಳಲ್ಲಿ ರೈತರು ಕೊತ್ತುಂಬರಿ ಸೊಪ್ಪು ಮತ್ತು ತರಕಾರಿ ಬೆಳೆಯುತ್ತಿದ್ದರು. ಆದರೆ, ಸತತ ಮಳೆ ಅಭಾವದಿಂದ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ನೀರು ಪೂರೈಕೆ ಮಾಡುತ್ತಿದ್ದ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ.

ನೀರಿನ ಸಮಸ್ಯೆ ಉಲ್ಬಣಿಸಿರುವುದರಿಂದ ಸೊಪ್ಪು, ತರಕಾರಿ ಬೆಳೆಯುತ್ತಿದ್ದ ಹಲವು ರೈತರು ಈ ಬೆಳೆ ಬೆಳೆಯಲು ಮುಂದಾಗುತ್ತಿಲ್ಲ. ಮತ್ತೆ ಕೆಲವರು ನೀರಿನ ಅಭಾವದ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಮಳೆಯ ಅಭಾವ ಹಾಗೂ ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಕೊತ್ತುಂಬರಿ ಸೊಪ್ಪು ಒಣಗಿ ಹೋಗುತ್ತಿದೆ. ಇದರಿಂದ ಮಾರುಕಟ್ಟೆಗೆ ಸೊಪ್ಪು ತರುತ್ತಿದ್ದ ರೈತರ ಪ್ರಮಾಣ ಕಡಿಮೆ ಆಗಿರುವುದರಿಂದ ಬೆಲೆ ಏರಿಕೆಯಾಗಿದೆ.

ಮುಂಗಾರು ಮಳೆ ಆರಂಭವಾದರೂ ತರಕಾರಿ ದರ ಮಾತ್ರ ಕಡಿಮೆಯಾಗಿಲ್ಲ ಎನ್ನುತ್ತಾರೆ ಸೊಪ್ಪು ಹಾಗೂ ತರಕಾರಿ ವ್ಯಾಪಾರಿ ಶೋಭಾ, ಶ್ರುತಿ.

*
ದರ ಏರಿಕೆ ಆಗಿರುವುದರಿಂದ ಕೊತ್ತುಂಬರಿ ಸೊಪ್ಪು ಖರೀದಿಸುವವರ ಪ್ರಮಾಣ ಕಡಿಮೆಯಾಗಿದ್ದು, ವ್ಯಾಪಾರವೂ ಕ್ಷೀಣಿಸುತ್ತಿದೆ.
– ಶೋಭಾ, ಸೊಪ್ಪಿನ ವ್ಯಾಪಾರಿ

***
ತರಕಾರಿ ದರ ಒಂದು ಕೆ.ಜಿ.ಗೆ
ಬೀನ್‌ - ₹ 80
ಕ್ಯಾರೇಟ್‌ - ₹ 80
ಮೆಣಸಿನಕಾಯಿ- ₹ 60
ಟೊಮೆಟೊ- ₹ 50
ಆಲುಗಡ್ಡೆ- ₹ 30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT