ಪವಾಡ ಪುರುಷ ಕೊಳಾಳು ಕೆಂಚಾವಧೂತರು

ಮಂಗಳವಾರ, ಜೂನ್ 25, 2019
27 °C
ಪ್ರವಾಸಿ ತಾಣವಾಗಿರುವ ಸಿದ್ದರ ವಜ್ರ

ಪವಾಡ ಪುರುಷ ಕೊಳಾಳು ಕೆಂಚಾವಧೂತರು

Published:
Updated:

ಹೊಳಲ್ಕೆರೆ: ಪವಾಡ ಪುರುಷರೆಂದೇ ಹೆಸರಾಗಿರುವ ಕೆಂಚಾವಧೂತರು ನೆಲೆಸಿದ್ದ ಹಿರಿಯೂರು ಗಡಿಯಲ್ಲಿರುವ ತಾಲ್ಲೂಕಿನ ಕೊಳಾಳು ಗ್ರಾಮ ಆಧ್ಯಾತ್ಮಿಕ ಸ್ಥಳವಾಗಿ ಪ್ರಸಿದ್ಧಿ ಪಡೆದಿದೆ. ಈ ಗ್ರಾಮ ಚಿತ್ರಹಳ್ಳಿ ಗೇಟ್, ಹೊರಕೆರೆ ದೇವರಪುರ, ಉಪ್ಪರಿಗೇನಹಳ್ಳಿ, ತೇಕಲವಟ್ಟಿ ಮಾರ್ಗದಲ್ಲಿದೆ. ಮುಂದೆ ಐಮಂಗಲ ಮತ್ತು ಹಿರಿಯೂರಿಗೆ ಸಂಪರ್ಕ ಕಲ್ಪಿಸುತ್ತದೆ. ಸುತ್ತಲೂ ಜೋಗಿಮಟ್ಟಿ ವ್ಯಾಪ್ತಿಯ ಸಾಲು ಸಾಲು ಗುಡ್ಡಗಳಿಂದ ಆವೃತವಾಗಿರುವ ಈ ಊರು ಪ್ರಕೃತಿ ಸೌಂದರ್ಯದ ತಾಣವಾಗಿದೆ.

‘ಗ್ರಾಮದಲ್ಲಿ ಹಿಂದೆ ಒಂದು ಕೊಳವಿತ್ತಂತೆ. ಅದರ ಪಕ್ಕದಲ್ಲೇ ‘ಹಾಳ್’ (ಜನವಸತಿ ಪ್ರದೇಶ) ಇದ್ದುದರಿಂದ ‘ಕೊಳಹಾಳ್’ ಎಂಬ ಹೆಸರು ಬಂತು. ಅದು ಮುಂದೆ ‘ಕೊಳಾಳು’ ಆಯಿತು’ ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ.ಕೆ.ವಿ. ಸಂತೋಷ್.

ಕೆಂಚಾವಧೂತರ ಮೂಲ ಹೆಸರು ದೊಡ್ಡ ಕೆಂಚಪ್ಪ. ಸಿದ್ಧಿ ಪುರುಷರಾದ ಇವರು 1820ರಿಂದ 1906ರ ನಡುವೆ ಜೀವಿಸಿದ್ದರು ಎಂದು ಹೇಳಲಾಗುತ್ತದೆ. ಹಠಯೋಗಿಯಾಗಿದ್ದ ಇವರ ಮೂಲಗುರು ಹಂಪಿ ಬಳಿಯ ಕಾಳಘಟ್ಟದ ರುದ್ರಾವಧೂತ ಸ್ವಾಮಿ. ಶಿಕ್ಷಣದಿಂದ ವಂಚಿತರಾಗಿದ್ದ ಕೆಂಚಪ್ಪ ಗುರುಗಳಿಂದ ದೀಕ್ಷೆ ಪಡೆದು ಅಪಾರ ಜ್ಞಾನ ಸಂಪಾದಿಸಿದರು.

ಕೊಳಾಳು ಗ್ರಾಮದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ‘ಸಿದ್ದರ ವಜ್ರ’ ಎಂಬ ಸ್ಥಳದಲ್ಲಿ ಕೆಂಚಪ್ಪ ತಪಸ್ಸು ಮಾಡುತ್ತಿದ್ದರು. ಕೆಂಚಪ್ಪ ಅವರ ಪವಾಡದಿಂದ ಅಲ್ಲಿರುವ ಬಾವಿಯಲ್ಲಿ ಇಂದಿಗೂ ನೀರು ಬತ್ತಿಲ್ಲ. ಗ್ರಾಮದಲ್ಲಿ ಅವರು ವಾಸವಿದ್ದ ಮನೆ ಇಂದಿಗೂ ಕಾಣಬಹುದು. ಆ ಮನೆಯಲ್ಲಿ ಈಗ ಅವರ ವಂಶಸ್ಥರು ವಾಸವಾಗಿದ್ದಾರೆ. ಕೆಂಚಪ್ಪ ಹಿಂದೆ ಬಳಸುತ್ತಿದ್ದ ಹಾಸಿಗೆ, ದಿಂಬು, ಬೆಳ್ಳಿ ಕಡಗ, ಬೆತ್ತ, ಜೀವನ ಸಾಕ್ಷಾತ್ಕಾರ ಮಾಡಿಸುವ ಷಟ್ಪದಿ ಪದ್ಯರೂಪದಲ್ಲಿರುವ 6 ತಾಳೆಗರಿಗಳ ಗ್ರಂಥಗಳಿವೆ. 1901ರಲ್ಲಿ ಕೆಂಚಪ್ಪನ ಹೆಸರಿಗೆ ಬಂದಿರುವ ಒಂದು ಪತ್ರ ಇದೆ. ಜತೆಗೆ 1892ರಲ್ಲಿ ಒಂದು ರೂಪಾಯಿ ಬಡ್ಡಿಯಂತೆ ₹ 50 ಸಾಲ ಮಾಡಿದ ಪತ್ರವೂ ಅವರ ವಂಶಸ್ಥರ ಬಳಿ ಇದೆ.

‘ಒಮ್ಮೆ ಸಿದ್ದಪ್ಪನ ವಜ್ರದಲ್ಲಿ ದನಕಾಯುವಾಗ ಯಾವುದೋ ಕಾರಣಕ್ಕೆ ಅಳಿಯನ ಮೇಲೆ ಕೋಪಗೊಂಡ ಕೆಂಚಪ್ಪ ಮಗಳ ಗಂಡನ ತಲೆಯನ್ನು ಕಡಿದು ಹಾಕುತ್ತಾರೆ. ಸಂಜೆ ಮನೆಗೆ ಬಂದಾಗ ವಿಷಯ ತಿಳಿದ ಮಗಳು ದುಃಖದಿಂದ ಚೀರಾಡುತ್ತಾಳೆ. ಅವಳ ನೋವನ್ನು ನೋಡಲಾಗದೆ ಕೆಂಚಪ್ಪ ತಮ್ಮ ತಪಃಶಕ್ತಿಯಿಂದ ಅಳಿಯನನ್ನು ಬದುಕಿಸುತ್ತಾರೆ’ ಎಂಬ ದಂತಕತೆ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.

‘ವೀರಶೈವನಾಗಿ ಹುಟ್ಟಿದ ಕೆಂಚಪ್ಪ ಸೇಂದಿ ಕುಡಿದು ಜಾತಿಗೆ ಕಳಂಕ ತಂದಿದ್ದಾನೆ ಎಂದು ಐಮಂಗಲ ಗ್ರಾಮದ ಬಸಪ್ಪ ಗೌಡ ಕೆಂಚಪ್ಪನನ್ನು ಮರಕ್ಕೆ ಕಟ್ಟಿಹಾಕಿ ಹೊಡೆಸುತ್ತಾನೆ. ಆಗ ಕೆಂಚಪ್ಪ ‘ಗಡಿಗೆಯಲ್ಲಿರುವುದು ಸೇಂದಿಯಲ್ಲ, ಹಾಲು’ ಎಂದು ವಾದಿಸುತ್ತಾರೆ. ಅದನ್ನು ಕಾಯಿಸಿ ಹೆಪ್ಪು ಹಾಕಿ ಮೊಸರು ಮಾಡಿ ಬೆಣ್ಣೆ ತೆಗೆದು ತೋರಿಸುತ್ತಾರೆ’ ಎಂಬ ಕತೆಯನ್ನೂ ಇಲ್ಲಿನ ಹಿರಿಯರು ಹೇಳುತ್ತಾರೆ.

ವೇದಾಂತಿ, ಶರಣ, ಪವಾಡ ಪುರುಷರಾಗಿದ್ದ ಕೆಂಚಾವಧೂತರು ಕೊಳಾಳು ಗ್ರಾಮದಲ್ಲೇ ಲಿಂಗೈಕ್ಯರಾದರು. ಗ್ರಾಮದ ಹೊರವಲಯದಲ್ಲಿ ಗದ್ದುಗೆ ಇದ್ದು, ದೇವಾಲಯ ನಿರ್ಮಿಸಲಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಕೊಳಾಳು ಕೆಂಚಾವಧೂತರ ಭಕ್ತರಿದ್ದಾರೆ. ದೇವಾಲಯದಲ್ಲಿ ನಿತ್ಯ ಪೂಜೆ, ಭಜನೆ ನಡೆಯುತ್ತವೆ. ಪ್ತಿ ಹುಣ್ಣಿಮೆಯಂದು ದೇವಿ ಮಹಾತ್ಮೆ ಪಾರಾಯಣ ನಡೆಯುತ್ತದೆ. ಹಂಪಿ ಹುಣ್ಣಿಮೆಯಂದು ಎರಡು ದಿನ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.

ಮಠದ ಆವರಣದಲ್ಲಿ ಭಕ್ತರು ಉಳಿದುಕೊಳ್ಳಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಸೋಮವಾರ ಹಾಗೂ ಹುಣ್ಣಿಮೆ, ಅಮಾವಾಸ್ಯೆಯಂದು ಮಠದಲ್ಲಿ ದಾಸೋಹದ ವ್ಯವಸ್ಥೆ ಇರುತ್ತದೆ. ಎಕ್ಕೆಹೂವಿನ ಸಂಖ್ಯೆ ಆಧರಿಸಿ ಭಕ್ತರ ಬೇಡಿಕೆ ಈಡೇರಿಕೆಯ ಬಗ್ಗೆ ಹೇಳಲಾಗುತ್ತದೆ.

ಹುಲಿಯೇ ವಾಹನ
‘ಒಮ್ಮೆ ಕೆಂಚಪ್ಪ ಕುರಿ ಕಾಯುವಾಗ ಹುಲಿಯೊಂದು ಕುರಿ ಹಿಂಡಿನ ಮೇಲೆ ದಾಳಿ ಮಾಡಲು ಬಂದಿತ್ತು. ಆಗ ಕೆಂಚಪ್ಪ ತಮ್ಮ ದಿವ್ಯಶಕ್ತಿಯಿಂದ ಹುಲಿಯನ್ನು ಪಳಗಿಸಿ ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ನಂತರ ಹುಲಿಯನ್ನೇ ತಮ್ಮ ವಾಹನ ಮಾಡಿಕೊಳ್ಳುತ್ತಾರೆ. ರಾತ್ರಿ ಚೆಕ್‌ಪೋಸ್ಟ್‌ ಬಳಿ ನಿಲ್ಲಿಸಿರುವ ವಾಹನಗಳು ಅವರ ಚಿತ್ರಗಳಲ್ಲಿ ಹುಲಿ ಪಕ್ಕದಲ್ಲಿರುವುದನ್ನು ಕಾಣಬಹುದು’ ಎನ್ನುತ್ತಾರೆ ಗ್ರಾಮದ ಹಿರಿಯರು.

*
ಕೊಳಾಳಿನಿಂದ ಸಿದ್ದರ ವಜ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕಲ್ಲು, ಮಣ್ಣಿನಿಂದ ಕೂಡಿದ ಕಚ್ಚಾ ರಸ್ತೆ ಇದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಬೇಕು.
-ಡಾ.ಕೆ.ವಿ.ಸಂತೋಷ್, ಇತಿಹಾಸ ಸಂಶೋಧಕ

*

20 ವರ್ಷಗಳಿಂದ ಕೊಳಾಳು ಕೆಂಚಜ್ಜನಿಗೆ ನಡೆದುಕೊಳ್ಳುತ್ತಿದ್ದೇನೆ. ಕೆಂಚಾವಧೂತರ ಗದ್ದುಗೆಯಲ್ಲಿ ದಿವ್ಯಶಕ್ತಿ ಅಡಗಿದೆ.
-ಅಜ್ಜಯ್ಯ, ಶಿವಪುರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !