ಶುಕ್ರವಾರ, ನವೆಂಬರ್ 15, 2019
23 °C
ಪುಣೆ–ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿವೆ ಅಪಘಾತಗಳು

ಅಪಘಾತಕ್ಕೆ ರಹದಾರಿ ರಾಷ್ಟ್ರೀಯ ಹೆದ್ದಾರಿ

Published:
Updated:
Prajavani

ಚಿತ್ರದುರ್ಗ: ಸ್ಕೂಟರ್‌ನಲ್ಲಿ ಮೊಮ್ಮಕ್ಕಳನ್ನು ಕೂರಿಸಿಕೊಂಡ ಕೃಷ್ಣಾರೆಡ್ಡಿ ಶಾಲೆಯತ್ತ ಸಾಗುತ್ತಿದ್ದರು. ಚಿಕ್ಕಪೇಟೆಯಿಂದ ಹೊರಟ ದ್ವಿಚಕ್ರ ವಾಹನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟಿ ಶಾಲೆ ತಲುಪಬೇಕಿತ್ತು. ಜೆಎಂಐಟಿ ಕಾಲೇಜು ಬಳಿ ಹೆದ್ದಾರಿ ದಾಟುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಬಂದ ಖಾಸಗಿ ಬಸ್ಸು ಡಿಕ್ಕಿ ಹೊಡೆಯಿತು. 12 ವರ್ಷದ ಅಮೃತಾ ಕ್ಷಣಾರ್ಧದಲ್ಲಿ ಉಸಿರು ನಿಲ್ಲಿಸಿದಳು.

ಇದು ಈ ವರ್ಷ ಜೂನ್‌ 21ರಂದು ಬೆಳಿಗ್ಗೆ 9.15ಕ್ಕೆ ನಡೆದ ಘಟನೆ. ಅಪಘಾತದ ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಇನ್ನೂ ಜನರ ಮನಸಿನಿಂದ ಮರೆಯಾಗಿಲ್ಲ. ಇಂತಹ ಹಲವು ಅಪಘಾತಗಳು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸುತ್ತಲೇ ಇವೆ. ಜೆಎಂಐಟಿ, ಮುರುಘಾ ಮಠ, ಹೊಸಪೇಟೆ ರಸ್ತೆ, ಬಸವೇಶ್ವರ ಆಸ್ಪತ್ರೆಯ ಬಳಿ ಹೆದ್ದಾರಿಗೆ ರಸ್ತೆ ಉಬ್ಬುಗಳನ್ನು ನಿರ್ಮಿಸಿದರೂ ಅಪಘಾತ ತಡೆಯಲು ಸಾಧ್ಯವಾಗಿಲ್ಲ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಮಕಲ್‌ ಗ್ಯಾರೇಜಿನಿಂದ ಮಾದಾರ ಚನ್ನಯ್ಯ ಗುರುಪೀಠದವರೆಗೆ ನಗರದಲ್ಲಿ ಹಾದುಹೋಗಿದೆ. ನಾಮಕಲ್‌ ಗ್ಯಾರೇಜಿನವರೆಗೆ ಆರು ಪಥದಲ್ಲಿರುವ ಈ ಹೆದ್ದಾರಿ, ನಗರ ಪ್ರವೇಶಿಸಿದ ಬಳಿಕ ಚತುಷ್ಪಥವಾಗಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಹಲವು ಬಡಾವಣೆಗಳು ನಿರ್ಮಾಣವಾಗಿವೆ. ಕೈಯಲ್ಲಿ ಜೀವ ಹಿಡಿದು ಹೆದ್ದಾರಿ ದಾಟುವ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಅಪಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದು, ರಸ್ತೆ ಸುರಕ್ಷತೆಗೆ ಒತ್ತಾಯಿಸಿ ಶಾಲಾ ಮಕ್ಕಳು ಬೀದಿಗೆ ಇಳಿದು ಹೋರಾಟ ನಡೆಸಿದ್ದಾರೆ.

ಸೂಚನಾ ಫಲಕ ಇಲ್ಲ: 
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸರಕು ಸಾಗಣೆ, ಬಸ್ಸು, ಕಾರು ಸೇರಿ ಭಾರಿ ವಾಹನಗಳು ಸಾಗುತ್ತವೆ. ಇವೆಲ್ಲವೂ ನಿಗದಿತ ಮಿತಿಗಿಂತಲೂ ಹೆಚ್ಚು ವೇಗವಾಗಿ ಸಾಗುತ್ತಿರುತ್ತವೆ. ನಗರ ಪ್ರವೇಶಿಸಿದಾಗಲೂ ವೇಗದ ಮಿತಿಯನ್ನು ಪಾಲನೆ ಮಾಡದೇ ಇರುವುದು ಅಪಘಾತಕ್ಕೆ ಎಡೆಮಾಡಿಕೊಡುತ್ತಿವೆ. ನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ನಿಧಾನವಾಗಿ ಚಲಿಸುವಂತೆ ಮುನ್ನೆಚ್ಚರಿಕೆ ನೀಡುವ ಸೂಚನಾ ಫಲಕಗಳೂ ಇಲ್ಲದೇ ಇರುವುದು ಅಪಾಯಕ್ಕೆ ಕಾರಣವಾಗಿದೆ.

ಹೆದ್ದಾರಿಯ ಎರಡೂ ಬದಿಗಳಲ್ಲಿ ಹೋಟೆಲ್‌, ಶಾಲೆ–ಕಾಲೇಜು, ವಸತಿ ಗೃಹಗಳು, ಕಲ್ಯಾಣ ಮಂಪಟಗಳಿವೆ. ರಾಕ್‌ಫೋರ್ಟ್‌, ಚಿನ್ಮೂಲಾದ್ರಿ, ಜೆಎಂಐಟಿ ಎಂಜಿನಿಯರಿಂಗ್‌ ಕಾಲೇಜು, ಬಸವೇಶ್ವರ ವೈದ್ಯಕೀಯ ಕಾಲೇಜು, ಎಸ್‌ಜೆಎಂ ವಿದ್ಯಾಪೀಠದ ಶಾಲೆಗಳೂ ಹೆದ್ದಾರಿಯ ಬದಲಿಯಲ್ಲಿವೆ. ಶಾಲೆ–ಕಾಲೇಜುಗಳ ಸಮೀಪ ವಿದ್ಯಾರ್ಥಿ ಹಾಗೂ ಪೋಷಕರ ಓಡಾಟ ಹೆಚ್ಚು. ಇಂತಹ ಸ್ಥಳಗಳಲ್ಲಿ ವಾಹನಗಳ ವೇಗಕ್ಕೆ ಮಿತಿ ಹೇರುವ ವ್ಯವಸ್ಥೆಯೇ ಇಲ್ಲವಾಗಿದೆ. ಮೇಲ್ಸೇತುವೆ ಸಮೀಪ ಸೂಚನಾ ಫಲಕ ಹಾಗೂ ಪ್ರತಿಫಲನ ದೀಪಗಳನ್ನು ಅಳವಡಿಸುವಂತೆ ಆ.8ರಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಲ್ಲಿ ಚರ್ಚೆಯಾಗಿತ್ತು. ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ನೀಡಿದ್ದ ಸೂಚನೆ ಈವರೆಗೆ ಪಾಲನೆಯಾದಂತೆ ಕಾಣುತ್ತಿಲ್ಲ.

ಹೆದ್ದಾರಿ ದಾಟುವುದು ಅಸಾಧ್ಯ: 

ಹೆದ್ದಾರಿಯ ಎರಡೂ ಬದಿಗಳಲ್ಲಿ ಬಡಾವಣೆಗಳಿವೆ. ಹೆದ್ದಾರಿಯನ್ನು ದಾಟಿ ಬಡಾವಣೆಗೆ ತೆರಳುವ ಜನರು ನಿತ್ಯ ತಾಪತ್ರಯ ಅನುಭವಿಸುತ್ತಿದ್ದಾರೆ. ಒಂದೆಡೆಯಿಂದ ಮತ್ತೊಂದು ಬದಿಗೆ ಸಾಗಲು ಹೆದ್ದಾರಿಯಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲ. ಹೆದ್ದಾರಿ ದಾಟಿ ಸಾಗುವ ರಸ್ತೆಗಳ ಬಳಿ ಕೆಳಸೇತುವೆ ನಿರ್ಮಿಸಲಾಗಿದೆ. ಆದರೆ, ಅವು ಕಿ.ಮೀ.ಗೆ ಒಂದರಂತೆ ಇವೆ. ಅವೈಜ್ಞಾನಿಕವಾಗಿರುವ ಈ ವ್ಯವಸ್ಥೆಯಿಂದ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ದ್ವಿಚಕ್ರ ವಾಹನ, ಕಾರು ಹಾಗೂ ಸರಕು ಸಾಗಣೆ ವಾಹನಗಳು ಮಾತ್ರ ಹೀಗೆ ಕೆಳಸೇತುವೆ ಸುತ್ತಿ ಹೆದ್ದಾರಿಯ ಮತ್ತೊಂದು ಬದಿಗೆ ಸಾಗುತ್ತವೆ. ಆದರೆ, ಪಾದಚಾರಿಗಳು ಹೆದ್ದಾರಿ ದಾಟಲು ‘ಸ್ಕೈವಾಕ್‌’ ವ್ಯವಸ್ಥೆ ಎಲ್ಲಿಯೂ ಇಲ್ಲ. ಹೀಗಾಗಿ, ಕೆಲವರು ವಾಹನ ಸಾಗುತ್ತಿರುವಾಗಲೇ ಹೆದ್ದಾರಿ ದಾಟಲು ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕೆಳಸೇತುವೆಯ ಕಿರಿಕಿರಿ: 

ಹೆದ್ದಾರಿಗೆ ಸಂಪರ್ಕ ಕಲ್ಪಿಸಿದ ಕೆಲ ರಸ್ತೆಗಳಿಗೆ ನಗರ ವ್ಯಾಪ್ತಿಯಲ್ಲಿ ಕೆಳಸೇತುವೆ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 13 ಹಾಗೂ ಚಳ್ಳಕೆರೆ ಗೇಟ್‌ ಸಮೀಪ ನಿರ್ಮಿಸಿದ ಕೆಳಸೇತುವೆ ಮಾತ್ರ ವಿಸ್ತಾರವಾಗಿವೆ. ತುರುವನೂರು ಗೇಟ್‌, ಮುರುಘಾ ಮಠ, ಮೆದೆಹಳ್ಳಿ ಸಮೀಪದ ಕೆಳಸೇತುವೆಗಳು ಕಿರಿದಾಗಿವೆ. ಸಂಜೆ ಹಾಗೂ ಬೆಳಿಗ್ಗೆ ಈ ಕೆಳಸೇತುವೆಗಳ ಬಳಿ ಸಂಚಾರ ಸಮಸ್ಯೆ ತಲೆದೋರುತ್ತದೆ. ಹೆದ್ದಾರಿಗೆ ಪರ್ಯಾಯವಾಗಿ ಸರ್ವಿಸ್‌ ರಸ್ತೆ ಬಳಸಲು ಮುಂದಾಗುವವರ ಮನಸ್ಸನ್ನು ಈ ಸಂಚಾರ ದಟ್ಟಣೆ ಬದಲಿಸಿಬಿಡುತ್ತದೆ.

ಜೆಎಂಐಟಿ ಕಾಲೇಜು ಸಮೀಪದ ಪ್ರದೇಶವನ್ನು ರಾಷ್ಟ್ರೀಯ ಹೆದ್ದಾರಿ ಹಾಗೂ ಬಿ.ಡಿ.ರಸ್ತೆಗಳು ಸಂಪರ್ಕಿಸುತ್ತವೆ. ದಾವಣಗೆರೆ ಕಡೆಯಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಬಿ.ಡಿ.ರಸ್ತೆಗೆ ಸಂಪರ್ಕ ಪಡೆಯುವಲ್ಲಿ ತೀರಾ ಅಪಾಯಕಾರಿ. ಬಿ.ಡಿ. ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವ ಸ್ಥಳ ಅಪಘಾತ ವಲಯವಾಗಿ ಪರಿಣಮಿಸಿದೆ. ಅತಿ ಹೆಚ್ಚು ವಾಹನ ಸಂಚರಿಸುವ ಈ ಸ್ಥಳದಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸುವಂತೆ ಜನರು ಬಹುದಿನಗಳಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಆದರೆ, ಈವರೆಗೆ ಇದಕ್ಕೆ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿಲ್ಲ.

ಬಸವೇಶ್ವರ ವೈದ್ಯಕೀಯ ಕಾಲೇಜು ಮುಂಭಾಗದ ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯನ್ನು ಅಪಘಾತ ವಲಯವೆಂದು ಪರಿಗಣಿಸಲಾಗಿದೆ. ಪ್ರತಿವರ್ಷ ಇಲ್ಲಿ ಹತ್ತಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆಯಾದರೂ ಇನ್ನೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ನಗರದ ಹೊರಭಾಗದಲ್ಲಿ ಹೆದ್ದಾರಿ ನಿರ್ಮಾಣ ನಡೆಯುತ್ತಿರುವುದರಿಂದ ಇದರ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಪ್ರಾಧಿಕಾರ ಮುಂದಿಟ್ಟಿದೆ.

ಸರ್ವಿಸ್‌ ರಸ್ತೆಯೂ ಇಲ್ಲ

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಎನ್ನುವುದು ನಿಯಮ. ಸಣ್ಣ ವಾಹನ ಸಾಗಲು ಹಾಗೂ ಬೇರೆ ರಸ್ತೆಗೆ ಸಂಪರ್ಕಕಲ್ಪಿಸಲು ಈ ವ್ಯವಸ್ಥೆಯನ್ನು ಹೆದ್ದಾರಿ ಪ್ರಾಧಿಕಾರವೇ ಕಡ್ಡಾಯಗೊಳಿಸಿದೆ. ಆದರೆ, ಚಿತ್ರದುರ್ಗ ನಗರದ ಹೆದ್ದಾರಿ ಬದಿಯ ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಸರ್ವಿಸ್‌ ರಸ್ತೆಯೇ ಇಲ್ಲ.

ಪೊಲೀಸ್‌ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬಳಿ ರೈಲ್ವೆ ಮೇಲ್ಸೇತುವೆ ಇದೆ. ಇಲ್ಲಿ ಹೆದ್ದಾರಿಯ ಎರಡೂ ಬದಿಗೆ ಸರ್ವಿಸ್‌ ರಸ್ತೆ ಇಲ್ಲ. ಜೆಸಿಆರ್‌ ಕಡೆಯಿಂದ ಎಪಿಎಂಸಿ ಕಡೆಗೆ ಸಾಗುವ ವಾಹನ ಹಾಗೂ ಪಾದಚಾರಿಗಳು ಹೆದ್ದಾರಿ ಬಳಸುವುದು ಅನಿವಾರ್ಯ. ಮೆದೆಹಳ್ಳಿ ಕಡೆಯ ಸರ್ವಿಸ್ ರಸ್ತೆಯಿಂದ ಬರುವ ವಾಹನ ಸವಾರರು ಪೊಲೀಸ್‌ ಭವನದತ್ತ ಸಾಗಲು ಹೆದ್ದಾರಿ ಬಳಸಬೇಕು. ಇಲ್ಲಿ ವಿರುದ್ಧ ದಿಕ್ಕಿನಿಂದಲೂ ವಾಹನ ಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಸಮನ್ವಯದ ಕೊರತೆ

ವಾಹನ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಇದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಸೇರಿ ಹಲವರು ಸಮಿತಿಯಲ್ಲಿದ್ದಾರೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಹೆದ್ದಾರಿಯಲ್ಲಿ ಇನ್ನೂ ಸುರಕ್ಷತಾ ವ್ಯವಸ್ಥೆ ಕಾಣುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು, ತೆರವುಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೂಚನೆ ನೀಡಿದ್ದರು. ಆದರೂ, ಹೆದ್ದಾರಿಯಲ್ಲಿ ರಸ್ತೆ ಉಬ್ಬುಗಳು ಇನ್ನೂ ಇವೆ. ರಸ್ತೆ ವಿಭಜಕ ಎತ್ತರಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪೊಲೀಸ್‌ ಇಲಾಖೆ ಪತ್ರ ವ್ಯವಹಾರ ನಡೆಸಿದೆ. ಆದರೆ, ಪ್ರಾಧಿಕಾರ ಸಕಾರಾತ್ಮಕವಾಗಿ ಸ್ಪಂದಿಸಿದಂತೆ ಕಾಣುತ್ತಿಲ್ಲ. ಸುರಕ್ಷತಾ ಸಮಿತಿಯ ಸಭೆಗೂ ಪ್ರಾಧಿಕಾರದ ಅಧಿಕಾರಿಗಳು ಹಾಜರಾಗುವುದಿಲ್ಲ ಎಂಬ ಆರೋಪಗಳೂ ಇವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ವೇಗದ ಮಿತಿ ಹೇರಬೇಕು. ನಗರ ವ್ಯಾಪ್ತಿಯಲ್ಲಿ ಚಲಿಸುವಾಗಲೂ ವೇಗ ನಿಯಂತ್ರಣ ಇಲ್ಲದಿದ್ದರೆ ಅಪಘಾತಗಳು ಸಂಭವಿಸುತ್ತವೆ. ಜೆಎಂಐಟಿ ಕಾಲೇಜು ಬಳಿ ಕೆಳಸೇತುವೆ ನಿರ್ಮಿಸಬೇಕು.
–ಗಿರೀಶ್‌ ರೆಡ್ಡಿ , ಚಿತ್ರದುರ್ಗ.

ಜೆಎಂಐಟಿ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಬಳಿ ಕೆಳಸೇತುವೆ ಅಥವಾ ಸ್ಕೈವಾಕ್‌ ಇಲ್ಲ. ಜನರು ವಾಹನ ಸಂಚಾರದ ನಡುವೆ ಹೆದ್ದಾರಿ ದಾಟುವುದು ಅನಿರ್ಯವಾಗಿದೆ. ಯೋಜನೆ ರೂಪಿಸುವಾಗಲೇ ಎಚ್ಚರ ವಹಿಸಬೇಕು.
–ಡಾ.ಎಚ್‌.ಕೆ.ಎಸ್. ಸ್ವಾಮಿ ಗಾಂಧಿವಾದಿ

ಜೆಎಂಐಟಿ ಸಮೀಪ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ರಸ್ತೆ ಉಬ್ಬುಗಳನ್ನು ನಿರ್ಮಿಸಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೆದ್ದಾರಿಗೆ ಪಾದಚಾರಿ ಪ್ರವೇಶಿಸದಂತೆ ತಂತಿಬೇಲಿ ಹಾಕಲಾಗಿದೆ
–ಡಾ.ಕೆ.ಅರುಣ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರತಿಕ್ರಿಯಿಸಿ (+)