ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಜಿಲ್ಲೆಯ ಶಾಸನ ಸಂಪತ್ತು

Published 30 ಆಗಸ್ಟ್ 2023, 11:30 IST
Last Updated 30 ಆಗಸ್ಟ್ 2023, 11:30 IST
ಅಕ್ಷರ ಗಾತ್ರ

ಪ್ರೊ.ಬಿ.ರಾಜಶೇಖರಪ್ಪ

ಚಿತ್ರದುರ್ಗ ಇತಿಹಾಸ ಧರ್ಮಗಳ ಸಂಗಮ ಸ್ಥಳವೆನಿಸಿದೆ. ಪ್ರಮುಖ ರಾಜವಂಶಗಳ ಅಧೀನ ಅರಸರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಅವರೆಲ್ಲರ ಕಾಲದ ಐತಿಹಾಸಿಕ ವಿವರ ತಿಳಿಯಲು ಸಾಧ್ಯವಾಗಿರುವುದು ಅವರ ಕಾಲದ ಶಿಲಾ ಮತ್ತು ತಾಮ್ರ ಶಾಸನಗಳಿಂದ. ಶಾಸನ ಪಿತಾಮಹರೆನಿಸಿದ ಬಿ.ಎಲ್‌.ರೈಸ್‌, ಆರ್‌.ನರಸಿಂಹಾಚಾರ್‌, ಡಾ.ಎಂ.ಎಚ್‌.ಕೃಷ್ಣ ಮುಂತಾದವರು ಈಗಾಗಲೇ ಓದಿ ಪ್ರಕಟಿಸಿರುವ ಶಾಸನಗಳು ಸುಮಾರು 700 ರಷ್ಟಿವೆ. ಆಮೇಲೆ ನಾನು ಹುಡುಕಿರುವ ಶಾಸನಗಳೇ ಸುಮಾರು 600 ರಷ್ಟಿವೆ. ಅವುಗಳಲ್ಲಿ ಜಿಲ್ಲೆಯ ಪ್ರಮುಖ ಶಾಸನಗಳನ್ನು ಪರಿಚಯಿಸಲಾಗಿದೆ.

ಉತ್ತರ ಭಾರತದ ಚಕ್ರವರ್ತಿ ಅಶೋಕನ ಕ್ರಿ.ಪೂ. 252 ರ ಮೂರು ಶಾಸನಗಳು ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿ, ಜಟಿಂಗರಾಮೇಶ್ವರ ಮತ್ತು ಸಿದ್ದಾಪುರದಲ್ಲಿವೆ. ನಾಡಿನ ಪ್ರಜೆಗಳು ಧರ್ಮಿಷ್ಠರಾಗಿರಬೇಕೆಂಬ ಅಶೋಕನ ಕಳಕಳಿಯನ್ನು ಈ ಶಾಸನಗಳು ವ್ಯಕ್ತಪಡಿಸುತ್ತವೆ. ಅವು ಬ್ರಾಹ್ಮೀ ಲಿಪಿಯಲ್ಲಿ ಪ್ರಾಕೃತ ಭಾಷೆಯಲ್ಲಿವೆ. ಅವುಗಳಲ್ಲೊಂದರಲ್ಲಿ ಬರುವ ಇಸಿಲ ಎಂಬ ಪದ ಹಳಗನ್ನಡದ ಎಸಿಲ್‌ ಎಂಬ ಪದದ ಪ್ರಾಕೃತ ರೂಪ; ಆ ಹೊತ್ತಿಗಾಗಲೆ ಕನ್ನಡ ಭಾಷೆ ಬೆಳೆಯಲಾರಂಭಿಸಿತ್ತು ಎಂದು ವಿದ್ವಾಂಸರು ತರ್ಕಿಸಿದ್ದಾರೆ.

ಚಿತ್ರದುರ್ಗದ ಚಂದ್ರವಳ್ಳಿಯ ಹುಲಿಗೊಂದಿ ಸಿದ್ಧೇಶ್ವರ ದೇವಾಲಯದ ಪಕ್ಕದ ಬಂಡೆಯಲ್ಲಿ ಕ್ರಿ.ಶ. 325 ರ ಸುಮಾರಿನ ಶಿಲಾಶಾಸನವೊಂದಿದೆ. ಅದು ಬ್ರಾಹ್ಮೀ ಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿದೆ. ಶಿಕಾರಿಪುರ ತಾಲ್ಲೂಕಿನ ತಾಳಗುಂದದಲ್ಲಿ ವಾಸವಾಗಿದ್ದ ಕದಂಬ ಕುಲದ ಬ್ರಾಹ್ಮಣ ಯುವಕ ಮಯೂರಶರ್ಮ, ಉನ್ನತ ವ್ಯಾಸಂಗಕ್ಕೆಂದು ತಮಿಳುನಾಡಿನ ಕಾಂಚೀಪುರಕ್ಕೆ ಹೋಗಿದ್ದಾಗ, ಅಲ್ಲಿಯ ಪಲ್ಲವರೊಂದಿಗೆ ಯಾವುದೋ ಕಾರಣಕ್ಕೆ ವಿರಸವಾಗಿ ಅವಮಾನಿತನಾದ. ಕನ್ನಡದ ನಮ್ಮದೇ ಒಂದು ರಾಜ್ಯ ಕಟ್ಟಿ ಅವರಿಗೆ ಸರಿಸಮವಾಗಬೇಕೆಂದು ನಿಶ್ಚಯಿಸಿದ; ತನ್ನ ಹೆಸರಲ್ಲಿ ಬ್ರಾಹ್ಮಣತ್ವ ಸೂಚಕವಾಗಿದ್ದ ಶರ್ಮ ಎಂಬುದನ್ನು ತೆಗೆದು ಹಾಕಿ, ಕ್ಷತ್ರಿಯತ್ವ ಸೂಚಕವಾದ ವರ್ಮ ಎಂಬುದನ್ನು ಸೇರಿಸಿಕೊಂಡ. ಪಲ್ಲವರನ್ನು ಮಣಿಸಲಿಕ್ಕಾಗಿ, ಚಿತ್ರದುರ್ಗದ ದಕ್ಷಿಣಕ್ಕಿರುವ ಕಾಡಿನಲ್ಲಿ ವಾಸದ ನೆಲೆಯನ್ನು ಮಾಡಿಕೊಂಡು ಇಲ್ಲಿ ಹಾಳಾಗಿದ್ದ ಕೆರೆಯನ್ನು ಜೀರ್ಣೋದ್ಧಾರ ಮಾಡಿದ ಸಂಗತಿಯನ್ನು ಆ ಶಾಸನ ಹೇಳುತ್ತದೆ. ಕನ್ನಡಿಗರಿಗೆ ಕನ್ನಡಿಗರದೇ ಆದ ಸಾಮ್ರಾಜ್ಯವೊಂದನ್ನು ಸ್ಥಾಪನೆ ಮಾಡಿದ ಮಯೂರವರ್ಮ ಇದ್ದದ್ದು ಇಲ್ಲಿ ಎಂಬುದನ್ನು ಈ ಶಾಸನ ಸಾರುತ್ತದೆ.

ಚಿತ್ರದುರ್ಗದ ಸಮೀಪದಲ್ಲಿರುವ ತಮಟಕಲ್ಲು ಗ್ರಾಮದ ಹೊಲದಲ್ಲಿರುವ ಎರಡು ದೊಡ್ಡ ಕಲ್ಲುಚಪ್ಪಡಿಗಳಲ್ಲಿರುವ ಶಾಸನಗಳು ಕ್ರಿ.ಶ. 6ನೇ ಶತಮಾನದ ಗುಣಮಧುರ ಎಂಬ ರಾಜನವು. ಒಂದು ಶಾಸನ ಕನ್ನಡ ಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿದ್ದರೆ, ಇನ್ನೊಂದು ಕನ್ನಡ ಲಿಪಿಯಲ್ಲಿ ಪೂರ್ವದ ಹಳಗನ್ನಡದ ಒಂದು ಸುಂದರ ಪದ್ಯವಾಗಿದೆ. ಈ ಪದ್ಯ ಕನ್ನಡದ ಅತ್ಯಂತ ಪ್ರಾಚೀನ ಪದ್ಯ. ಈ ರಾಜ ಮಸಿಕ್ಕಾಪುರದ ಅಧಿಪತಿಯಾಗಿದ್ದಾನೆಂದೂ, ಶೌರ್ಯದ, ತ್ಯಾಗ, ರಸಿಕತೆಗಳಿಗೆ ಹೆಸರಾಗಿದ್ದನೆಂದೂ ಹೇಳುತ್ತದೆ. ಅದೇ ಕಾಲದ ವಟ್ಟೆಳತ್ತು ಲಿಪಿಯ ತಮಿಳು ಶಾಸನ ಕೂಡ ಇಲ್ಲಿದೆ.

ಚಂದ್ರವಳ್ಳಿ ಪ್ರದೇಶದ ಉತ್ತರಕ್ಕೆ ಧವಳಪ್ಪನಗುಡ್ಡದ ಆಳೆತ್ತರದ ಬಂಡೆಗುಳಿಯಲ್ಲಿ ಕೆಂಪು ಬಣ್ಣದಲ್ಲಿ ರಚಿಸಿರುವ ಒಂದು ಶಾಸನವಿದೆ. ಅದು ಕ್ರಿ.ಶ. 5ನೇ ಶತಮಾನದ ಕನ್ನಡ ಅಕ್ಷರಗಳಲ್ಲಿರುವ ಸಂಸ್ಕೃತ ಭಾಷೆಯದು. ಅದರಲ್ಲಿ ವಿನಯವರ್ಮ ಎಂಬ ಹೆಸರು ಬರುತ್ತದೆ. ಅವನು ಅಜ್ಞಾತನಾಗಿರುವ ಒಬ್ಬ ಕದಂಬ ವಂಶದ ಅರಸನಿರಬೇಕು. ಬಾದಾಮಿ, ಕೊಪ್ಪಳ ಮುಂತಾದ ಬೆಟ್ಟ ಸ್ಥಳಗಳಲ್ಲಿ ಈಗಾಗಲೇ 6-7ನೇ ಶತಮಾನದ ಕೆಲವು ವರ್ಣಶಾಸನಗಳು ಬೆಳಕಿಗೆ ಬಂದಿದ್ದವು. ಆದರೆ, ಈ ಶಾಸನ ಅವೆಲ್ಲಕ್ಕೂ ಪೂರ್ವದ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊಳಕಾಲ್ಮುರು ಬೆಟ್ಟದ ಮೇಲಿನ ದೊಡ್ಡ ಕೆರೆಯ ನಡುವೆ ಇರುವ ಬಂಡೆಯಲ್ಲಿ ಕ್ರಿ.ಶ. 16 ನೇ ಶತಮಾನದ ಒಂದು ಶಾಸನವಿದೆ. ಇದು ಕನ್ನಡ ಅಕ್ಷರಗಳ ಸಂಸ್ಕೃತ ಶಾಸನವಾಗಿದ್ದು ಪ್ರಖ್ಯಾತ ಪ್ರಾಚೀನ ಸಂಸ್ಕೃತ ಕವಿ ಕಾಳಿದಾಸನನ್ನು ಪ್ರಶಂಸಿಸುವ ಶ್ಲೋಕ. ಇದರ ವೈಶಿಷ್ಟ್ಯವೆಂದರೆ, ಮೊದಲ ಸಾಲು ಯಾವುದೋ ಅಕ್ಷರದಿಂದ ಪ್ರಾರಂಭವಾಗಿ ಯಾವುದೋ ಅಕ್ಷರದಿಂದ ಕೊನೆಗೊಳ್ಳುತ್ತದೆ. ಹಾಗೇ ಕೊನೆಗೊಂಡ ಅಕ್ಷರವೇ ಎರಡನೇ ಸಾಲಿನ ಮೊದಲ ಅಕ್ಷರವಾಗುತ್ತದೆ, ಹಾಗೇ ಮೊದಲ ಸಾಲಿನ ಪ್ರಾರಂಭದ ಅಕ್ಷರ ಎರಡನೇಯ ಸಾಲಿನ ಕೊನೆಯ ಅಕ್ಷರವಾಗುತ್ತದೆ. ಇಂಥ ಪದ್ಯ ರಚನೆಗೆ ಯಮಕ ಶ್ಲೋಕ ಎನ್ನುತ್ತಾರೆ. ಹೀಗಾಗಿ ಇದೊಂದು ವೈಶಿಷ್ಟ್ಯಪೂರ್ಣ ಶಾಸನ.

ಹೊಸದುರ್ಗ ತಾಲ್ಲೂಕಿನ ನೀರಗುಂದ ಗ್ರಾಮದಲ್ಲಿ ನನ್ನ ಶೋಧದ, ಹೊಯ್ಸಳ ದೊರೆ 1ನೇ ನರಸಿಂಹನ ಕಾಲದ ಶಾಸನ 12 ನೇ ಶತಮಾನದ ಆರಂಭ ಕಾಲದ್ದು. ಉದ್ಭವ ಸೋಮನಾಥಪುರ ಎಂಬ ಹೆಸರಿನ ಆಗ್ರಹಾರದ ಮಹಾಜನರು ಸಭೆ ಸೇರಿ ಮಾಡಿಕೊಂಡಿರುವ ನಿರ್ಣಯಗಳು ಇದರಲ್ಲಿವೆ. ಹಾಗಾಗಿ ಇದನ್ನು ‘ಸಮಯಪತ್ರ ಶಾಸನ’ ಎಂದು ಹೆಸರಿಸಲಾಗಿದೆ. ಅಗ್ರಹಾರದ ಬ್ರಾಹ್ಮಣರಿಗೆ ಸಂಬಂಧಿಸಿದ ಬೇರೆ ಬೇರೆಡೆ ಇದ್ದ ಭೂಮಿಗಳನ್ನು ಸಾಗುವಳಿ ಮಾಡುವ ಬಗ್ಗೆ, ಈ ಭೂಮಿಗಳಿಗೆ ನೀರಾವರಿ ಕಲ್ಪಿಸಿಕೊಳ್ಳುವ ಬಗ್ಗೆ, ಆ ಭೂಮಿಗಳಿಗೆ ಗೊಬ್ಬರ ಇತ್ಯಾದಿಗಳನ್ನು ಸಾಗಿಸಲು ರಸ್ತೆ ಮಾಡಿಕೊಳ್ಳುವ ಬಗ್ಗೆ ವಿಶೇಷವಾದ ನಿಯಮಗಳನ್ನು ಮಾಡಿಕೊಂಡಿದ್ದಾರೆ. ಇಂಥ ವಿಷಯ ಇರುವ ಶಾಸನ ನಮ್ಮ ರಾಜ್ಯದಲ್ಲಿ ಪ್ರಾಯಶಃ ಮತ್ತೊಂದಿಲ್ಲ.

ಹೊಳಲ್ಕೆರೆ ಪಟ್ಟಣದಲ್ಲಿರುವ ಬೃಹತ್‌ ಗಣಪತಿ ವಿಗ್ರಹವನ್ನು ಈಗ ‘ಪ್ರಸನ್ನ ಗಣಪತಿ’ ಎನ್ನುತ್ತಾರೆ. ನೂರು ವರ್ಷದ ಹಿಂದೆ ಇದನ್ನು ತೂಗುದಲೆ ಗಣಪತಿ ಎನ್ನುತ್ತಿದ್ದರು. ಈ ವಿಗ್ರಹ ಮೊದಲಿಗೆ ಯಾವುದೇ ಛಾವಣಿ ಇಲ್ಲದೆ ಕೇವಲ ವಿಗ್ರಹವೊಂದೇ ಇದ್ದಾಗ ಇದನ್ನು ‘ಬಯಲು ಗಣಪತಿ’ ಎನ್ನುತ್ತಿದ್ದರು. ಇದರ ಪೀಠದಲ್ಲಿ ಒಂದು ಸಾಲಿನ ಕನ್ನಡ ಶಾಸನವಿದೆ. ಅದು ಕಾಮಗೇತಿ ಮೆದಕೇರಿ ನಾಯಕನ ಮೈದುನ ಗುಲ್ಯಪ್ಪ ನಾಯಕ ಎಂಬುವನು ಮಾಡಿದ ಸೇವೆ ಎಂದು ಹೇಳುತ್ತದೆ. ಇದರಿಂದ ಬಹುಶಃ ಕ್ರಿ.ಶ. 1670 ರಲ್ಲಿ ಈ ವಿಗ್ರಹ ಆದಂತೆ ಕಾಣುತ್ತದೆ. ಇದು ಚಿತ್ರದುರ್ಗ ಜಿಲ್ಲೆಯಲ್ಲೇ ಬೃಹತ್ತಾದ ಗಣಪತಿ ವಿಗ್ರಹವಿದು ಹಂಪಿಯ ಕಡಲೆಕಾಳು ಗಣಪತಿ ವಿಗ್ರಹದವನ್ನು ನೆನಪಿಗೆ ತರುತ್ತದೆ.

ಅದೇ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿಯ ಕಸವನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಪೌಳಿ ಗೋಡೆಯಲ್ಲಿರುವ ಒಂದು ಶಾಸನ ಕ್ರಿ.ಶ. 1595 ರದ್ದಿದ್ದು, ಚಿತ್ರದುರ್ಗದ ದೊರೆ 1 ನೆಯ ಮೆದಕೇರಿ ನಾಯಕನ ಸೊಸೆ ಚಿಕ್ಕಕೋನಮ್ಮ ಎಂಬುವಳು ಹಾಕಿಸಿದ್ದು. ಅವಳ ಗಂಡ ನರಸಿಂಹನಾಯಕ ಮತ್ತು ಮಗ ದೊಡ್ಡಣ್ಣನಾಯಕ ಇವರು ಅಕಾಲ ಮರಣಕ್ಕೆ ತುತ್ತಾದ್ದರಿಂದ ಆಕೆ ಇಲ್ಲಿ ಆಂಜನೇಯ ದೇವಸ್ಥಾನವೊಂದನ್ನು ಮಾಡಿಸಿ ಅದಕ್ಕೆ ಒಂದಷ್ಟು ಭೂಮಿಯನ್ನು ತೆರಿಗೆರಹಿತ ಮಾಡಿಸಿ ದಾನ ನೀಡಿದ್ದಾಳೆ. ಪ್ರಸಿದ್ಧರಾದ ಚಿತ್ರದುರ್ಗ ಪಾಳೆಯಗಾರರ ಕುಟುಂಬದ ಮಹಿಳೆಯೊಬ್ಬಳ ಏಕೈಕ ಶಾಸನ ಇದಾಗಿದೆ.

ಹೀಗೆ ನಮ್ಮ ಜಿಲ್ಲೆಯ ಶಾಸನಗಳು ಗತಕಾಲದ ಅನೇಕ ಕುತೂಹಲಕರ ಸಂಗತಿಗಳನ್ನು ತಿಳಿಸುತ್ತವೆ. ಹಿಂದಿನ ಕಾಲದ ನಮ್ಮ ಜನರ ವಿವಿಧ ನಂಬಿಕೆಗಳು, ಅವರ ಸಾಹಸ, ರಸಿಕತೆ, ಭಕ್ತಿ, ದಾನ, ಶೌರ್ಯ, ದೇವತಾ ಪ್ರತಿಷ್ಠೆ ಮುಂತಾದ ವಿವಿಧ ಚಟುವಟಿಕೆಗಳು ಇವನ್ನು ನಮ್ಮ ಕಣ್ಣೆದುರು ತರುತ್ತವೆ. ಇಂಥ ಅಮೂಲ್ಯ ಆಕರಗಳು ಈಗಿನ ನಮ್ಮ ಜನರ ಅಜ್ಞಾನ, ಸ್ವಾರ್ಥಪರತೆ, ದುರ್ಬುದ್ಧಿಯಿಂದ ನಿಧಾನವಾಗಿ ಹಾಳಾಗುತ್ತಿವೆ. ಸುಶಿಕ್ಷಿತರಾದ ನಮ್ಮ ಯುವಜನ ಇಂಥ ಪ್ರಾಚೀನ ಸ್ಮಾರಕಗಳ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ನೀಡಿ ಅವುಗಳು ಹಾಳಾಗುವುದನ್ನು ತಡೆಯಬೇಕಾಗಿದೆ.

ಚಂದ್ರವಳ್ಳಿಯ ಮಯೂರ ವರ್ಮ ಶಾಸನ
ಚಂದ್ರವಳ್ಳಿಯ ಮಯೂರ ವರ್ಮ ಶಾಸನ

ಆಗ ಹೊನ್ಕುಂದ ಈಗ ಭೀಮಸಮುದ್ರ ಭೀಮಸಮುದ್ರ ಗ್ರಾಮದ ಕೆರೆಯ ಕೆಳಗೆ ಎರಡು ಶಾಸನಗಳಿವೆ. ಒಂದು ಕ್ರಿ.ಶ 11 ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಹೊತ್ತಿಗಾಗಲೇ ಇಲ್ಲಿ ದೊಡ್ಡ ಕೆರೆಯೊಂದು ನಿರ್ಮಾಣವಾಗಿತ್ತೆಂಬ ಸಂಗತಿಯನ್ನು ಆ ಊರಿಗೆ ಆಗ ಹೊನ್ಕುಂದ ಎಂಬ ಹೆಸರಿದ್ದುದನ್ನು ಹೇಳುತ್ತದೆ. ಈ ಶಾಸನ ರಚಕ ಮತ್ತು ರೂವಾರಿ ಕಾಳಬ್ರಹ್ಮ. ತಾನು ಅಕ್ಷರಗಳಲ್ಲಿ ಕಮಲ ಆನೆ ಹಂಸ ಇತ್ಯಾದಿಗಳನ್ನು ಕೆತ್ತಬಲ್ಲ ನಿಪುಣ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಇಲ್ಲಿಯ ಇನ್ನೊಂದು ಶಾಸನವಿದ್ದು ಅದು ವಿಜಯನಗರದ ದೊರೆ ಇಮ್ಮಡಿ ಹರಿಹರನ ಮಗ ಕಂಪಣ್ಣೊಡೆಯ ಚಿತ್ರದುರ್ಗದವನ್ನು ಆಳುತ್ತಿದ್ದಾಗ ಜನ್ನಿಗೆ ಹಳ್ಳಕ್ಕೆ ಅಡ್ಡಗಟ್ಟೆ ಕಟ್ಟಿ ಅದರ ದಿಕ್ಕನ್ನು ಬದಲಿಸಿ ಈ ಕೆರೆಗೆ ಪೂರಕ ಕಾಲುವೆ ಮಾಡಿಸಿದ್ದನ್ನು ಹೇಳುತ್ತದೆ.

ಪಂಡರಹಳ್ಳಿಯಲ್ಲಿದೆ ಮಹಿಳಾ ಶಾಸನ ಚಿತ್ರದುರ್ಗದ ಪಂಡರಹಳ್ಳಿಯ ಬೆಟ್ಟದ ಮೇಲಿನ ಗುಹಾಲಯದ ಬಳಿ ದೊಡ್ಡ ಬಂಡೆಯಲ್ಲಿ ಕ್ರಿ.ಶ. 7 ನೇ ಶತಮಾನದ ಒಂದು ಕನ್ನಡ ಶಾಸನವಿದೆ. ಸೂಳ್ಗಲ್ಲು ನಾಡು ಮತ್ತು ಪಿಟ್ಟಗೆರೆ ಪ್ರಾಂತಗಳನ್ನು ಆಳುತ್ತಿದ್ದ ಚಂಡಿಯಮ್ಮ ರಾಜನು ಇಲ್ಲಿಯ ದೇವರಿಗೆ ಒಂದು ಭೂಮಿಯನ್ನು ದಾನ ನೀಡಿದ್ದನ್ನು ಅದನ್ನು ಒಬ್ಬ ಕಾಪಾಲಿಕ ಗುರು ಸ್ವೀಕರಿಸಿದ್ದನ್ನು ಹೇಳುತ್ತದೆ. ಅದರ ಅಂತ್ಯದಲ್ಲಿ ಶ್ರೀಬಿಜಾಬೆ (ಅಂದರೆ ಶ್ರೀವಿಜಯಬ್ಬೆ) ಎಂಬ ಸ್ತ್ರೀಯ ಹೆಸರಿದೆ. ಇದುವರೆಗೆ ಸುಮಾರು 25000 ಶಾಸನಗಳು ಕನ್ನಡದಲ್ಲಿ ಬೆಳಕಿಗೆ ಬಂದಿದ್ದು ಅವುಗಳನ್ನು ರಚಿಸಿದವರೆಲ್ಲರು ಪುರುಷರು ಎಂದು ತಿಳಿಯಲಾಗಿತ್ತು. ಹಾಗಾದರೆ ಮಹಿಳೆಯರು ಶಾಸನಗಳನ್ನು ರಚಿಸಲೇ ಇಲ್ಲವೇ ಎಂಬ ಪ್ರಶ್ನೆ ಇತ್ತು. ಇದಕ್ಕೆ ಅಪವಾದವಾಗಿ ಶ್ರೀಬಿಜಾಬೆ ಎಂಬುವಳು ರಚಿಸಿದ ಈ ಶಾಸನ ಸದ್ಯಕ್ಕೆ ಮಹಿಳೆ ರಚಿಸಿರುವ ಏಕೈಕ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT