ಚಿತ್ರದುರ್ಗ: ಎಣ್ಣೆಬೀಜ ಬೆಳೆಗಾರರು ಹಾಗೂ ಎಣ್ಣೆ ಉತ್ಪಾದಕ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ತಮ್ಮದೇ ಕಂಪನಿಗಳ ಎಣ್ಣೆ ಉತ್ಪನ್ನ ಜಾಹೀರಾತು ಅಳವಡಿಸಲು ಅನುಮತಿ ನೀಡಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಎಣ್ಣೆ ಬೀಜ ಬೆಳೆಗಾರರು ಹಾಗೂ ಎಣ್ಣೆ ಉತ್ಪಾದಕ ಸಂಸ್ಥೆಗಳ ಮನವಿಯನ್ನು ಪರಿಗಣಿಸಿ ಜಾಹೀರಾತು ಅಳವಡಿಸಲು ಅನುಮತಿ ನೀಡಲು ಒಪ್ಪಿಗೆ ಸೂಚಿಸಲಾಯಿತು.
ಮಧ್ಯಮಗಾತ್ರದ ಸರಕು ಸಾಗಾಣಿಕೆ ವಾಹನಗಳಿಗೆ ವಾರ್ಷಿಕ ₹750, ಭಾರಿ ಗಾತ್ರದ ಸರಕು ಸಾಗಾಣಿಕೆ ವಾಹನಗಳಿಗೆ ವಾರ್ಷಿಕ ₹2000 ಶುಲ್ಕ ವಿಧಿಸಿ ಜಾಹೀರಾತು ಅಳವಡಿಸಲು ಅನುಮತಿ ನೀಡಲಾಯಿತು.
ಸಭೆಯಲ್ಲಿ ಮಜಲು ವಾಹನಗಳ ರಹದಾರಿಗೆ ಸಂಬಂದಪಟ್ಟಂತೆ ಒಟ್ಟು 68 ವಿಷಯ ಮಂಡನೆಯಾದವು. ಇವುಗಳಲ್ಲಿ 22 ಪರಿಷ್ಕೃತ ವೇಳಾಪಟ್ಟಿ ವಿಷಯಗಳಿಗೆ ಪ್ರಾಧಿಕಾರವು ಅನುಮೋದನೆ ನೀಡಿ ಪರಿಷ್ಕೃತ ವೇಳಾಪಟ್ಟಿ ನಿಗದಿಪಡಿಸಲು ಸೂಚಿಸಿತು.
ಮಾರ್ಗದ ಕಡಿತ, ಮಾರ್ಗದ ವಿಸ್ತರಣೆ ಹಾಗೂ ಇತರೆ ನ್ಯಾಯಾಲಯದಿಂದ ಪ್ರಾಧಿಕಾರದ ಪರಿಗಣನೆಗೆ ಸ್ವೀಕೃತಿಯಾದ ವಿಷಯಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರ ಪರ ವಕೀಲರಿಗೆ ಲಿಖಿತ ಹೇಳಿಕೆ ದಾಖಲಿಸಲು 15 ದಿನ ಕಾಲಾವಕಾಶ ನೀಡಲಾಯಿತು. ಆಕ್ಷೇಪಣೆದಾರರ ಪರ ವಕೀಲರಿಗೆ ಈ ಬಗೆಗಿನ ವಿಷಯಗಳಿಗೆ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಯಿತು. ಕುರಿತು ಕಾನೂನುತ್ಮಾಕವಾಗಿ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ ಕಾಳಿಸಿಂಘೆ, ಪ್ರಾದೇಶಿಕ ಸಾರಿಗೆ ಇಲಾಖೆಯ ಹೇಮಂತ್ ಕುಮಾರ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎಲ್. ಲಿಂಗಾರೆಡ್ಡಿ ಇದ್ದರು.