ಚಿತ್ರದುರ್ಗ: ಬೆಳಗಾವಿ ಉಪ ವಿಭಾಗದ ಪ್ರೊಬೇಷನರಿ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಅವರ ಅಂತರ್ಜಾತಿ ವಿವಾಹ ಇಲ್ಲಿನ ಮುರುಘಾ ಮಠದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಬುಧವಾರ ಸರಳವಾಗಿ ನೆರವೇರಿತು.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಈಶ್ವರ ಮಲ್ಲಪ್ಪ ಸಾಣಿಕೊಪ್ಪ ಹಾಗೂ ಶಿಕ್ಷಕಿ ಭಾವನಾ ಅವರ ಪುತ್ರಿ ಪ್ರಿಯದರ್ಶಿನಿ ಎಂಎಸ್ಸಿ ಪದವೀಧರೆ. ಕೆಎಸ್‌ಪಿಎಸ್ 2014ನೇ ಬ್ಯಾಚಿನ ಡಿವೈಎಸ್‌ಪಿ ಅಧಿಕಾರಿಯಾಗಿದ್ದು, ಈಚೆಗೆ ತರಬೇತಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಬಂಕಾಪುರದ ಡಾ.ಸಂತೋಷ್, ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರಿನ ಇಲವಾಲದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಮುರುಘಾ ಮಠದ ಪರಂಪರೆ ಅತೀವವಾಗಿ ಪ್ರಭಾವಿಸಿದೆ. ಉಪದೇಶಕ್ಕಿಂತ ಆಚರಣೆ ಮೇಲೆ ನಂಬಿಕೆ ಹೆಚ್ಚು. ಆಗ ಮಾತ್ರ ಮತ್ತೊಬ್ಬರಿಗೆ ಬೋಧನೆ ಮಾಡಲು ಸಾಧ್ಯ. ಬಸವಣ್ಣನವರ ಆಶಯದಂತೆ ಸರಳವಾಗಿ ವಿವಾಹವಾಗಲು ಅತ್ಯಂತ ಖುಷಿಯಾಗುತ್ತಿದೆ’ ಎಂದು ಪ್ರಿಯದರ್ಶಿನಿ ಸಂತಸ ವ್ಯಕ್ತಪಡಿಸಿದರು.
‘ಅದ್ದೂರಿಯಾಗಿ ಮದುವೆಯಾಗಬೇಕು ಎಂಬ ಭಾವನೆ ಇಬ್ಬರಲ್ಲೂ ಇರಲಿಲ್ಲ. ಸಮಾಜಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದೇವೆ. ಮದುವೆಗೆ ಅನಗತ್ಯ ದುಂದುವೆಚ್ಚ ಮಾಡಬಾರದು’ ಎಂದು ಸಂತೋಷ್ ಅಭಿಪ್ರಾಯಪಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.