ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲಿದೆ ಏಳುಸುತ್ತಿನ ಕೋಟೆಯ ಪ್ರವೇಶ ಮಾರ್ಗ

ಕೇಂದ್ರ ಪುರಾತತ್ವ ಇಲಾಖೆಯ ಯೋಜನೆ ಸಿದ್ಧ
Last Updated 21 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಐತಿಹಾಸಿಕ ಏಳು ಸುತ್ತಿನ ಕೋಟೆಯನ್ನು ಪ್ರವೇಶಿಸುವ ಮಾರ್ಗ ಶೀಘ್ರದಲ್ಲೇ ಬದಲಾಗುವ ಸಾಧ್ಯತೆ ಇದೆ. ಇದಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಪ್ರವಾಸಿಗರನ್ನು ಹಿಡಿದಿಡಲು ಕೋಟೆ ಆವರಣವನ್ನು ಇನ್ನಷ್ಟು ಆಕರ್ಷಣೀಯಗೊಳಿಸುವ ಕಾರ್ಯ ನಡೆಯುತ್ತಿದೆ.

ಮೂರನೇ ಸುತ್ತಿನ ಕೋಟೆಯ ಮಹಾದ್ವಾರದ ಮೂಲಕ ಕೋಟೆ ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ದ್ವಾರದ ಮೂಲಕವೇ ಇನ್ನು ಮುಂದೆಯು ಪ್ರವಾಸಿಗರು ಕೋಟೆಗೆ ಕಾಲಿಡಬಹುದು. ಆದರೆ, ಕೋಟೆ ಒಳಗೆ ಪ್ರವಾಸಿಗರು ಹೋಗುವ ಮಾರ್ಗ ಮಾತ್ರ ಬದಲಾಗಲಿದೆ. ಇದಕ್ಕೆ ಕೇಂದ್ರ ಪುರಾತತ್ವ ಇಲಾಖೆ ಸಿದ್ಧಪಡಿಸಿದ ಯೋಜನೆ ಅನುಷ್ಠಾನದ ಅಂತಿಮ ಹಂತದಲ್ಲಿದೆ.

ಮಹಾದ್ವಾರದ ಮುಂಭಾಗದ ಬಲ ಬದಿಯಲ್ಲಿರುವ ಕೌಂಟರ್‌ನಿಂದ ಟಿಕೆಟ್‌ ಪಡೆದು ಕೋಟೆಗೆ ಹೋಗಬೇಕಿತ್ತು. ಟಿಕೆಟ್‌ ಪಡೆಯಲು ಪ್ರವಾಸಿಗರು ರಸ್ತೆಯಲ್ಲೇ ನಿಲ್ಲಬೇಕಿತ್ತು. ಕಿರಿದಾದ ಕೌಂಟರ್‌ ಬಳಿ ಜನಸಂದಣಿ ಉಂಟಾಗುತ್ತಿತ್ತು. ಅಲ್ಲದೇ, ಕುಡಿಯುವ ನೀರು, ಶೌಚಾಲಯ ಸೇರಿ ಇತರ ಸೌಲಭ್ಯಗಳ ಕೊರತೆ ಕಾಡುತ್ತಿತ್ತು. ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂಬುದು ಪುರಾತತ್ವ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.

ಕೋಟೆಯ ಮಹಾದ್ವಾರದ ಸಮೀಪದಲ್ಲೇ ಪಾರಂಪರಿಕ ಶೈಲಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಕೋಟ್ಯಂತರ ವೆಚ್ಚದಲ್ಲಿ ಐದು ಕಟ್ಟಡ ಕಟ್ಟಲಾಗುತ್ತಿದ್ದು, ಪ್ರತಿಯೊಂದನ್ನು ಯೋಜನಾಬದ್ಧವಾಗಿ ನಿರ್ಮಿಸಲಾಗುತ್ತಿದೆ. ಟಿಕೆಟ್‌ ಕೌಂಟರ್‌, ಪುರಾತತ್ವ ಇಲಾಖೆಯ ಪುಸ್ತಕ ಮಳಿಗೆ, ಪ್ರವಾಸಿಗರ ಲಗೇಜ್‌ ಕೊಠಡಿ, ಶುದ್ಧ ಕುಡಿಯುವ ನೀರು ಘಟಕ ಹಾಗೂ ಶೌಚಾಲಯ ಒಂದೇ ಸೂರಿನಡಿ ಇರಲಿವೆ.

ದೂರದ ಸ್ಥಳದಿಂದ ಬರುವ ಪ್ರವಾಸಿಗರಿಗೆ ಕೋಟೆಯ ಹೊರಗೆ ಶೌಚಾಲಯ ಸೌಲಭ್ಯ ಈವರೆಗೂ ಇರಲಿಲ್ಲ. ಕೋಟೆ ಸೌಂದರ್ಯ ಕಣ್ತುಂಬಿಕೊಳ್ಳಲು ಬರುವವರಲ್ಲಿ ಶಾಲಾ ಮಕ್ಕಳೇ ಹೆಚ್ಚಾಗಿರುತ್ತಿದ್ದರು. ಈ ಮಕ್ಕಳನ್ನು ಬಯಲು ಕಡೆಗೆ ಕಳುಹಿಸುವುದು ಶಿಕ್ಷಕರಿಗೂ ಅನಿವಾರ್ಯವಾಗಿತ್ತು. ಕೋಟೆ ಆವರಣದ ಹೊರಗೆ ಶೌಚಾಲಯ ನಿರ್ಮಿಸಬೇಕು ಎಂಬ ಬಹುದಿನಗಳ ಬೇಡಿಕೆಗೆ ಪುರಾತತ್ವ ಇಲಾಖೆ ಸ್ಪಂದಿಸಿದೆ.

ಕೋಟೆ, ಐತಿಹಾಸಿಕ ಸ್ಮಾರಕ, ಇತಿಹಾಸ ಸಂಶೋಧನೆಗೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಹೊರಡಿಸಿದ ಪುಸ್ತಕಗಳ ಖರೀದಿಗೆ ಸೂಕ್ತ ಮಳಿಗೆ ವ್ಯವಸ್ಥೆ ಈವರೆಗೆ ಇರಲಿಲ್ಲ. ಗಾರೆಬಾಗಿಲಲ್ಲಿ ಇರುವ ಪುರಾತತ್ವ ಇಲಾಖೆಯ ಕಚೇರಿಗೆ ಭೇಟಿ ನೀಡಿ ಪುಸ್ತಕ ಖರೀದಿಸಬೇಕಿತ್ತು. ಬಹುತೇಕ ಪ್ರವಾಸಿಗರಿಗೆ ಇದು ಗೊತ್ತಿರಲಿಲ್ಲ. ಹೀಗಾಗಿ, ಟಿಕೆಟ್‌ ಕೌಂಟರ್‌ ಪಕ್ಕದಲ್ಲೇ ಇತಿಹಾಸ ಸಂಬಂಧಿತ ಪುಸ್ತಕಗಳ ಮಾರಾಟ ಮಳಿಗೆ ಆರಂಭವಾಗಲಿದೆ.

ಪ್ರವಾಸಿಗಳು ಲಗೇಜ್‌ ಇಡಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಕೋಟೆಗೆ ಬಂದವರು ವಾಹನದಲ್ಲೇ ಲಗೇಜ್‌ ಇಟ್ಟು ಬೆಟ್ಟ ಹತ್ತಬೇಕಿತ್ತು. ಲಗೇಜ್‌ ಹಿಡಿದು ಬೆಟ್ಟ ಹತ್ತಲು ಸಾಧ್ಯವಾಗದೇ ಕೆಲವರು ಅರ್ಧಕ್ಕೆ ಮರಳಿದ ನಿದರ್ಶನಗಳೂ ಇದ್ದವು. ಇದಕ್ಕೆ ಈಗ ಪರಿಹಾರ ಸಿಗುವ ಸಾಧ್ಯತೆ ಇದೆ. ಒಮ್ಮೆ ಕೋಟೆಯ ಆವರಣ ಪ್ರವೇಶಿಸುವ ಪ್ರವಾಸಿಗರಿಗೆ ಎಲ್ಲ ಸೌಲಭ್ಯಗಳು ಸಿಗಲಿವೆ.

ಕೋಟೆಯನ್ನು ಇನ್ನಷ್ಟು ಪರಿಸರಸ್ನೇಹಿಯಾಗಿ ರೂಪಿಸಲು ಮುಂದಾಗಿರುವ ಪುರಾತತ್ವ ಇಲಾಖೆ ಪ್ಲಾಸ್ಟಿಕ್‌ ಬಳಕೆಗೆ ನಿರ್ಬಂಧ ವಿಧಿಸಿದೆ. ಕೋಟೆಯ ಒಳಭಾಗದಲ್ಲಿರುವ ಕ್ಯಾಂಟೀನ್‌ಗಳಲ್ಲಿಯೂ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದೆ. ಆದರೆ, ನೀರಿನ ಬಾಟಲಿಗೆ ಮಾತ್ರ ಅವಕಾಶ ಕಲ್ಪಿಸಿದೆ.

ಪ್ರತಿಯೊಬ್ಬ ಪ್ರವಾಸಿಗರನ್ನು ಪರಿಶೀಲಿಸಿ ಒಳಗೆ ಬಿಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಪ್ಲಾಸ್ಟಿಕ್‌ ಕಂಡುಬಂದಲ್ಲಿ ಅದನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯುತ್ತಾರೆ. ಬೆಟ್ಟ ಹಾಗೂ ಬಯಲು ಪ್ರದೇಶ ಆಗಿರುವ ಕಾರಣಕ್ಕೆ ನೀರಿನ ಬಾಟಲಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಎಲ್ಲಂದರಲ್ಲಿ ಬಾಟಲಿ ಬಿಸಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ರಾಷ್ಟ್ರೀಯ ಸ್ಮಾರಕಕ್ಕೆ ಧಕ್ಕೆ?:ಕೋಟೆಯ ಮುಂಭಾಗದಲ್ಲಿ ನಿರ್ಮಿಸುತ್ತಿರುವ ನೂತನ ಕಟ್ಟಡದಿಂದ ರಾಷ್ಟ್ರೀಯ ಸ್ಮಾರಕಕ್ಕೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ ಎಂಬ ಆರೋಪವೂ ಕೇಳಿ ಬಂದಿದೆ.

ಏಳು ಸುತ್ತಿನ ಕೋಟೆಯನ್ನು ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ಇಂತಹ ಸ್ಮಾರಕರಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುವ ಕಟ್ಟಡ ನಿರ್ಮಾಣಕ್ಕೆ ನಿಯಮದಲ್ಲಿ ಅವಕಾಶವಿಲ್ಲ. ಕೋಟೆಯ ಮುಂಭಾಗದಲ್ಲಿ ತಲೆ ಎತ್ತಲಿರುವ ಟಿಕೆಟ್‌ ಕೌಂಟರ್‌, ಶೌಚಾಲಯ, ಪುಸ್ತಕ ಮಾರಾಟ ಮಳಿಗೆಗಳು ಕೋಟೆಯನ್ನು ಕಾಣದಂತೆ ಮಾಡುತ್ತವೆ ಎಂಬುದು ಕೆಲವರ ಕಳವಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT