ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಉಕ್ಕಿ ಹರಿದ ಮಾಳೆ ಹಳ್ಳ; ಕೊಚ್ಚಿಹೋದ ಮೆಕ್ಕೆಜೋಳ

ಭಾರಿ ಮಳೆಯಿಂದ ದ್ವೀಪದಂತಾದ ಜಮೀನು, ಬೆಳೆ ಕಳೆದುಕೊಂಡ ರೈತರು ಕಂಗಾಲು
Published : 7 ಆಗಸ್ಟ್ 2024, 14:30 IST
Last Updated : 7 ಆಗಸ್ಟ್ 2024, 14:30 IST
ಫಾಲೋ ಮಾಡಿ
Comments

ಚಿಕ್ಕಜಾಜೂರು: ಮಂಗಳವಾರ ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆಗೆ ಇಲ್ಲಿನ ಮಾಳೆ ಹಳ್ಳ (ಮಾಳೆ ಸರ) ಉಕ್ಕಿ ಹರಿದಿದ್ದು ಹಳ್ಳದ ತಟದ 35 ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಸಂಪೂರ್ಣ ಕೊಚ್ಚಿ ಹೋಗಿದೆ.

ಚಿಕ್ಕಜಾಜೂರು ಸೇರಿ ಬಿ.ದುರ್ಗ ಹೋಬಳಿಯಾದ್ಯಂತ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಹಲವು ವರ್ಷಗಳಿಂದ ನೀರಿನ ಹರಿವು ಕಾಣದಿದ್ದ ಮಾಳೆ ಹಳ್ಳದಲ್ಲಿ ಪ್ರವಾಹದ ರೀತಿ ನೀರು ಹರಿದಿದ್ದು, ಅಕ್ಕಪಕ್ಕದ ಜಮೀನಿಗೆ ನುಗ್ಗಿದ ಪರಿಣಾಮ ಮೆಕ್ಕೆಜೋಳ ಫಸಲು ನಾಶವಾಗಿದೆ.

ಸಾಸಲು, ಸಾಸಲುಹಳ್ಳ, ಕಾಗಳಗೆರೆ, ಮುತ್ತುಗದೂರು, ಅಂದನೂರು, ಹಿರಿಯೂರು, ಕಾಳಘಟ್ಟ, ವಿಶ್ವನಾಥನಹಳ್ಳಿ, ಮಲ್ಲೇನಹಳ್ಳಿ, ಪಾಡಿಗಟ್ಟೆ, ಆಡನೂರು ಮೊದಲಾದ ಗ್ರಾಮಗಳ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಚಿಕ್ಕಎಮ್ಮಿಗನೂರು ಗ್ರಾಮದ ರೈತರಿಗೆ ಹೆಚ್ಚು ನಷ್ಟವಾಗಿದೆ. 

‘ಚಿಕ್ಕಎಮ್ಮಿಗನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಳಿ ಹರಿಯುವ ಮಾಳೆ ಹಳ್ಳ ಹಲವು ವರ್ಷಗಳಿಂದ ನೀರಿಲ್ಲದೇ ಭಣಗುಡುತ್ತಿತ್ತು. ಮಂಗಳವಾರ ಸುರಿದ ಮಳೆಯಿಂದ ಕಾಯಿಕಟ್ಟುವ ಹಂತದಲ್ಲಿದ್ದ ಬೆಳೆ ಕೊಚ್ಚಿ ಹೋಯಿತು’ ಎಂದು ರೈತರಾದ ಕೆ.ಎನ್‌. ಶಿವಕುಮಾರ್‌, ಚಿಂದಪ್ಪರ ವೆಂಕಟೇಶ್‌, ರಘು, ವಿಶ್ವನಾಥ, ಮೈಲಾರಪ್ಪ, ಡಿ.ಆರ್‌. ಲೋಕೇಶ್‌, ಸಿ. ಅರುಣ್‌ಕುಮಾರ್‌ ನೋವು ತೋಡಿಕೊಂಡರು.

‘ಹಳ್ಳದ ಎರಡೂ ಬದಿಯ ಜಮೀನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಬೆಳೆ ಈಗ ಇಲ್ಲವಾಗಿದೆ. ಇಡೀ ಪ್ರದೇಶ ಜಲಾವೃತಗೊಂಡಿದ್ದು ಜಮೀನು ಕಾಣದಾಗಿದೆ. ಇಡೀ ಪ್ರದೇಶ ದ್ವೀಪದಂತಾಗಿದೆ’ ಎಂದು ರೈತ ವೆಂಕಟೇಶ್‌ ಕಣ್ಣೀರಿಟ್ಟರು.

ಕುಸಿದ ಗೋಡೆಗಳು:

ಮಂಗಳವಾರ ರಾತ್ರಿವರೆಗೂ ಸುರಿದ ಮಳೆಯಿಂದಾಗಿ ಚಿಕ್ಕಜಾಜೂರು ಸಮೀಪದ ಕೊಡಗವಳ್ಳಿಹಟ್ಟಿ ಗ್ರಾಮದ ಸಿ. ತಿಪ್ಪೇಸ್ವಾಮಿ, ಕಾಮನಹಳ್ಳಿ ಗ್ರಾಮದ ರೇವಮ್ಮ, ಚಿಕ್ಕಎಮ್ಮಿಗನೂರು ಗ್ರಾಮದ ಭರತ್‌ಕುಮಾರ್‌, ಸುಲೋಚನಾ ಅವರ ಮನೆಗಳ ಗೋಡೆಗಳು ಉರುಳಿ ಬಿದ್ದಿವೆ. ಹಲವು ಹಳೆಯ ಮನೆಗಳು ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿವೆ.

‘ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಮಹಜರು ನಡೆಸಲಾಗಿದೆ. ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಕುರಿತು ತಾಲ್ಲೂಕು ಆಡಳಿತಕ್ಕೆ ವರದಿ ನೀಡಲಾಗುವುದು’ ಎಂದು ಗ್ರಾಮ ಆಡಳಿತಾಧಿಕಾರಿ ಎಸ್‌.ಗಂಗಾಧರ್‌ ತಿಳಿಸಿದರು.

ಚಿಕ್ಕಎಮ್ಮಿಗನೂರು ಗ್ರಾಮದ ಭರತ್‌ಕುಮಾರ್‌ ಅವರ ಮನೆಯ ಗೋಡೆ ಮಳೆಯಿಂದ ಬಿದ್ದಿರುವುದನ್ನು ಗ್ರಾಮ ಆಡಳಿತಾಧಿಕಾರಿ ಗಂಗಾಧರ್ ಪರಿಶೀಲಿಸಿದರು
ಚಿಕ್ಕಎಮ್ಮಿಗನೂರು ಗ್ರಾಮದ ಭರತ್‌ಕುಮಾರ್‌ ಅವರ ಮನೆಯ ಗೋಡೆ ಮಳೆಯಿಂದ ಬಿದ್ದಿರುವುದನ್ನು ಗ್ರಾಮ ಆಡಳಿತಾಧಿಕಾರಿ ಗಂಗಾಧರ್ ಪರಿಶೀಲಿಸಿದರು

ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ರೈತರ ಸಮಸ್ಯೆ ಆಲಿಸಲು ಸೂಚಿಸುತ್ತೇನೆ. ಹಾನಿ ಸಮೀಕ್ಷೆ ನಡೆಸಿ ಬೆಳೆನಷ್ಟ ಪರಿಹಾರಕ್ಕೆ ವರದಿ ಸಲ್ಲಿಸಲಾಗುವುದು

–ಬಿ.ಮಂಜುನಾಥ್‌ ಕೃಷಿ ಜಂಟಿ ನಿರ್ದೇಶಕ ಚಿತ್ರದುರ್ಗ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT