ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಹಿಜಾಬ್ ತೆಗೆಯಲು‌ ನಿರಾಕರಿಸಿ ಮನೆಗೆ ಮರಳಿದ ವಿದ್ಯಾರ್ಥಿನಿಯರು

Last Updated 15 ಫೆಬ್ರುವರಿ 2022, 7:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿಜಾಬ್ ಸಂಬಂಧಿತ ವಿವಾದ ಜಿಲ್ಲೆಯ ಹಲವು ಶಾಲೆಗಳಲ್ಲಿ ಮಂಗಳವಾರವೂ ಮುಂದುವರಿದಿದೆ. ಹಿಜಾಬ್ ತೆಗೆಯಲು ನಿರಾಕರಿಸಿದ ಹಿರಿಯೂರು ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ 24 ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗೆ ಕಳುಹಿಸಲಾಯಿತು.

ನಾಯಕನಹಟ್ಟಿ, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಶಿಕ್ಷಕರು ಯಶಸ್ವಿಯಾದರು. ಹಿಜಾಬ್ ತೆಗೆಯುವ ವಿಚಾರದಲ್ಲಿ ಹೊಸದುರ್ಗ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದು, ಅಧಿಕಾರಿಗಳು ಹಾಗೂ ಪೋಷಕರ ಸಭೆ ನಡೆಯುತ್ತಿದೆ. ಹೊಳಲ್ಕೆರೆ ಪಟ್ಟಣದ ಎಂಎಂ ಸರ್ಕಾರಿ ಪ್ರೌಢಶಾಲೆಯ ಕೆಲ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿ ಪರೀಕ್ಷೆ ಬರೆಯದೇ ಮನೆಗೆ ಮರಳಿದರು.

ಹಿರಿಯೂರು ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಒಪ್ಪಲಿಲ್ಲ. ಹಿಜಾಬ್ ಧರಿಸಿಯೇ ಶಾಲೆ ಪ್ರವೇಶಿಸುವುದಾಗಿ ಪಟ್ಟು ಹಿಡಿದರು. ಈ ವಿಚಾರವಾಗಿ ವಾಗ್ವಾದ ನಡೆದು ಪ್ರವೇಶದ್ವಾರದಲ್ಲಿ ಧರಣಿ ನಡೆಸಲು ಮುಂದಾದರು. ಮಧ್ಯಪ್ರವೇಶ ಮಾಡಿದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಮನೆಗೆ ಮರಳಿದರು.

ಜಾಮಿಯಾ ಮಸೀದಿ ಅಧ್ಯಕ್ಷ ನವಬ್ ಸಾಹೇಬ್ ನೇತೃತ್ವದ ಮುಸ್ಲಿಂ ಮುಖಂಡರು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ; ತರಗತಿಗೆ ಹೋಗುವುದನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಹಠ ಹಿಡಿದರು. 'ಕೋರ್ಟ್ ಆದೇಶ ಗೊತ್ತಿಲ್ಲ, ನಾವು ಹಿಜಾಬ್ ಧರಿಸಿ ಹೋಗುವುದೇ ಸರಿ' ಎಂದು ವಿದ್ಯಾರ್ಥಿನಿಯರು ಹೇಳುದರು.

'ಸೋಮವಾರವೂ ಈ ವಿದ್ಯಾರ್ಥಿನಿಯರು‌ ಶಾಲೆಗೆ ಹಾಜರಾಗಿರಲಿಲ್ಲ. ಈ‌ ಮಕ್ಕಳ ಪೋಷಕರನ್ನು ಜಾಮಿಯಾ ಮಸೀದಿಗೆ ಕರೆಸುವ ಪ್ರಯತ್ನ ನಡೆಸಿದರು ಫಲಪ್ರದವಾಗಲಿಲ್ಲ. ಪೋಷಕರು ನಮ್ಮ ಕರೆಗೆ ಸ್ಪಂದಿಸುತ್ತಿಲ್ಲ. ಇದರ ಹಿಂದೆ ಯಾರದ್ದು ಕುಮ್ಮಕ್ಕಿದೆ' ಎಂದು ಜಾಮಿಯಾ ಮಸೀದಿ ಅಧ್ಯಕ್ಷ ಸಾಹೇಬ್ ತಿಳಿಸಿದರು.

ನಾಯಕನಹಟ್ಟಿ ಎಸ್.ಟಿ.ಎಸ್.ಆರ್ ಅನುದಾನಿತ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಜ್ ಧರಿಸಿ ಬಂದಿದ್ದರು. ಆದರೆ, ಶಾಲೆಯ‌ ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿನಿಯರ ಮನವೊಲಿಸಿ ಶಾಲಾ ಆವರಣದಲ್ಲೆ ಹಿಜಾಬ್ ತೆಗೆಸಿ ತರಗತಿಗಳಿಗೆ ಕಳಿಸಿದರು. ಬಳಿಕ ವಿದ್ಯಾರ್ಥಿನಿಯರು ಪೂರ್ವ ಸಿದ್ಧತಾ ಪರೀಕ್ಷೆ ಬರೆಯುತ್ತಿದ್ದಾರೆ.

ಹೊಳಲ್ಕೆರೆ ಪಟ್ಟಣದ ಎಂಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಿಜಾಬ್ ತೆಗೆಯಲು ನಿರಾಕರಿಸಿದ 8 ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತೆ ಪರೀಕ್ಷೆ ಬರೆಯದೆ ವಾಪಾಸ್ ಆದರು.
ಶಿಕ್ಷಕರು ಮನವೊಲಿಸಿದರೂ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯುವುದಿಲ್ಲ ಎಂದು ಹಠ ಹಿಡಿದರು. ಸಿಪಿಐ ರವೀಶ್, ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಸೋಮವಾರ ಈ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದರು. ಆದರೆ ಮಂಗಳವಾರ ಹಿಜಾಬ್ ತೆಗೆಯಲು ನಿರಾಕರಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ 17 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, 8 ವಿದ್ಯಾರ್ಥಿನಿಯರು ವಾಪಾಸ್ ಹೋಗಿದ್ದು, ಉಳಿದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾದರು. ನಾಲ್ಕು ಮುಸ್ಲಿಂ ವಿದ್ಯಾರ್ಥಿಗಳು ಟೋಪಿ ಹಾಕಿಕೊಂಡು ಬಂದಿದ್ದು, ಮನವೊಲಿಸಿದ ನಂತರ ಟೋಪಿ ತೆಗೆದು ಪರೀಕ್ಷೆ ಬರೆದರು’ ಎಂದು ಮುಖ್ಯಶಿಕ್ಷಕಿ ನಿರ್ಮಲಾ ದೇವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT