ಹಿರಿಯೂರು: ತಾಲ್ಲೂಕಿನ ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಂತರ್ಜಲ ಕುಸಿತದ ಕಾರಣಕ್ಕೆ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೊರೆ ಹೋಗಿದ್ದರೆ, ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿದ ನಂತರ ಹೊರಬರುವ ತ್ಯಾಜ್ಯ ನೀರನ್ನೂ ಸರತಿ ಸಾಲಿನಲ್ಲಿ ನಿಂತು ಗ್ರಾಮಸ್ಥರು ಕೊಡಗಳಲ್ಲಿ ತುಂಬಿ ಒಯ್ಯುತ್ತಿರುವುದು ಕುಡಿಯುವ ನೀರಿನ ಹಾಹಾಕಾರ ಎಷ್ಟಿದೆ ಎಂಬುದರ ನಿದರ್ಶನವಾಗಿದೆ.

ಅಂದಾಜು 3,000 ಜನಸಂಖ್ಯೆ ಹೊಂದಿರುವ, ಗ್ರಾಮ ಪಂಚಾಯಿತಿ ಕಚೇರಿ ಇರುವ ದಿಂಡಾವರ ಗ್ರಾಮಕ್ಕೆ ಹೊಂದಿಕೊಂಡಂತೆ ನೂರು ವರ್ಷಕ್ಕೂ ಹಳೆಯದಾದ ಕೆರೆ ಇದ್ದು, ಕಳೆ ಕೂಡ ಬೆಳೆಯದಷ್ಟು ಒಣಗಿಹೋಗಿದೆ. ಹತ್ತು ವರ್ಷಗಳ ಹಿಂದೆ ಒಮ್ಮೆ ತುಂಬುವ ಮಟ್ಟ ತಲುಪಿದ್ದು ಬಿಟ್ಟರೆ ಕೆರೆಗೆ ನೀರೇ ಬರುತ್ತಿಲ್ಲ. ಹೀಗಾಗಿ 800ರಿಂದ 1,000 ಅಡಿವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ.

‘ಕೆಲವು ಕೊಳೆವಬಾವಿಗಳಲ್ಲಿ ಕೊರೆಯುವಾಗ ಕಂಡುಬಂದ ನೀರು ಐದಾರು ದಿನ ಬಿಟ್ಟು ಮೋಟಾರ್ ಇಳಿಸುವ ವೇಳೆಗೆ ಬತ್ತಿ ಹೋಗಿರುತ್ತವೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ಹೊರಬರುವ ತ್ಯಾಜ್ಯ ನೀರನ್ನು ನಮ್ಮೂರಿನ ಜನ ಬಳಸುತ್ತಿದ್ದಾರೆ ಎಂದರೆ ನೀರಿನ ಸಮಸ್ಯೆ ಎಷ್ಟಿದೆ ಎಂಬುದನ್ನು ಊಹಿಸಬಹುದು’ ಎನ್ನುತ್ತಾರೆ ಗ್ರಾಮಸ್ಥ ಚಂದ್ರಗಿರಿ.

‘ಕಲ್ಲುವಳ್ಳಿ ಭಾಗಕ್ಕೆ ಸೇರಿರುವ ದಿಂಡಾವರ, ಜವನಗೊಂಡನಹಳ್ಳಿ, ಗೌಡನಹಳ್ಳಿ, ಯಲ್ಲದಕೆರೆ, ಉಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಗಾಗಿ ಜನ ಅನುಭವಿಸುತ್ತಿರುವ ಯಾತನೆ ಹೇಳತೀರದು. ಗ್ರಾಮ ಪಂಚಾಯಿತಿ ಯವರನ್ನು ಕೇಳಿದರೆ ಟ್ಯಾಂಕರ್ ಮೂಲಕ ಕೊಡುತ್ತೇವೆ ಎನ್ನುತ್ತಾರೆ. ಅವರು ಕೊಡುವ ನೀರು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಕೊಟ್ಟಂತಾಗುತ್ತದೆ. ಸೈಕಲ್, ಬೈಕ್ಗಳಿಗೂ ಪ್ಲಾಸ್ಟಿಕ್ ಕೊಡಗಳನ್ನು ನೇತುಹಾಕಿಕೊಂಡು ಗ್ರಾಮದ ಹತ್ತಿರ ಇರುವ ತೋಟಗಳಿಗೆ ಹೋದರೆ, 20–25 ವರ್ಷ ಕಷ್ಟಪಟ್ಟು ಬೆಳೆಸಿರುವ ಅಡಿಕೆ, ತೆಂಗಿನ ತೋಟಗಳು ಒಣಗುತ್ತಿವೆ. ಅವನ್ನು ಉಳಿಸಿಕೊಂಡರೆ ಸಾಕಾಗಿದೆ. ಗ್ರಾಮ ಪಂಚಾಯಿತಿಯವರನ್ನು ಕೇಳಿಕೊಳ್ಳಿ ಎಂದು ತೋಟದ ಮಾಲೀಕರು ಕಡ್ಡಿ ಮುರಿದಂತೆ ಹೇಳಿ ವಾಪಾಸ್ ಕಳಿಸುತ್ತಾರೆ’ ಎನ್ನುತ್ತಾರೆ ಗ್ರಾಮಸ್ಥರು.

‘ಒಂದು ಕೊಳವೆಬಾವಿ ಕೊರೆಯಿಸಿ ಮೋಟಾರ್ ಅಳವಡಿಸಲು ಅಂದಾಜು ₹ 2 ಲಕ್ಷದವರೆಗೂ ಹಣ ಬೇಕು. ಕೊಳವೆಬಾವಿಗಳಲ್ಲಿ ಎಷ್ಟು ದಿನ ನೀರು ಬರುತ್ತದೆ ಎಂಬ ಬಗ್ಗೆ ಗ್ಯಾರಂಟಿ ಇಲ್ಲ. ಹೀಗಾಗಿ ಟ್ರ್ಯಾಕ್ಟರ್ಗೆ ಟ್ಯಾಂಕರ್ ಕೂರಿಸಿ ಗಾಯತ್ರಿ ಜಲಾಶಯದಿಂದ ತೋಟಕ್ಕೆ ನೀರು ತರುತ್ತಿದ್ದೇವೆ’ ಎನ್ನುತ್ತಾರೆ ಚಂದ್ರಗಿರಿ.

ಜಲಾಶಯದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ನಿಂದ ನಡೆಯುವ 8 ಮೋಟಾರ್ಗಳಿದ್ದು, ದಿಂಡಾವರ, ಓಬಳಾಪುರ, ಕಾಟನಾಯಕನಹಳ್ಳಿ, ದುಗ್ಗಾಣಿಹಟ್ಟಿ, ಮಾದೇನಹಳ್ಳಿ ಮೊದಲಾದ ಗ್ರಾಮಗಳ ರೈತರು ಬೆಳಗಿನಿಂದ ಸಂಜೆವರೆಗೆ ನೀರು ತರುತ್ತಿದ್ದಾರೆ. ಪ್ರತಿ ಟ್ಯಾಂಕರ್ಗೆ ₹ 100 ಪಡೆಯುತ್ತಿದ್ದು, ನಿತ್ಯ ₹ 3,000ದಿಂದ ₹ 4,000 ಖರ್ಚಾಗುತ್ತಿದೆ. ದೇವರ ಕರುಣೆಯಿಂದ ಮಳೆ ಬಂದರೆ ತೋಟಗಳು ಉಳಿಯುತ್ತವೆ. ಬಹಳಷ್ಟು ರೈತರು ಟ್ಯಾಂಕರ್ಗೆ ಹಣ ಹೊಂದಿಸಲಾರದೆ ತೋಟಗಳನ್ನು ಒಣಗಲು ಬಿಟ್ಟಿದ್ದಾರೆ’ ಎಂದು ಅವರು ಹೇಳಿದರು.

‘ತಾಲ್ಲೂಕಿನ ಕಲ್ಲುವಳ್ಳಿ ಭಾಗದ 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಂದಾಜು 100 ಹಳ್ಳಿಗಳಿದ್ದು, 60,000 ಜನಸಂಖ್ಯೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಪ್ರಯತ್ನದಿಂದ ಈ ಭಾಗದ 17 ಕೆರೆಗಳಿಗೆ ನೀರು ತುಂಬಿಸಲು ಜಲಸಂಪನ್ಮೂಲ ಇಲಾಖೆಯಿಂದ 0.307 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದು, ಈ ಯೋಜನೆಯ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆ ಮುಖಾಂತರ ಜಾರಿಗೊಳಿಸಲು ₹ 266.75 ಕೋಟಿ ವೆಚ್ಚದ ವಿಸ್ತೃತ ಯೋಜನೆಗೆ ತಾಂತ್ರಿಕ ಮೌಲ್ಯಮಾಪನ ಸಮಿತಿ ಅನುಮೋದನೆ ನೀಡಿದೆ. ಅಧಿಕಾರಿಗಳು ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಕೋರಿದರು.

ಈ ಭಾಗದಲ್ಲಿ ಮಳೆ ಕಡಿಮೆ ಆಗಿದ್ದು, ಅಂತರ್ಜಲ ಕುಸಿದಿದೆ. ಎಷ್ಟೇ ಆಳಕ್ಕೆ ಕೊಳವೆಬಾವಿ ಕೊರೆಯಿಸಿದರೂ ಬಹಳಷ್ಟು ದಿನ ನಡೆಯುತ್ತಿಲ್ಲ. ಜಲಶುದ್ಧೀಕರಣ ಘಟಕದಿಂದ ನೀರು ಪೂರೈಕೆ ಮಾಡಲು ಯೋಚಿಸುತ್ತಿದ್ದೇವೆ
ಲೋಕೇಶ್, ದಿಂಡಾವರ ಗ್ರಾಮ ಪಂಚಾಯಿತಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.