ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ನೀಲಕಂಠೇಶ್ವರ ದೇವಾಲಯದಲ್ಲಿ ಗಾಂಧಿ ಸ್ಮೃತಿ ಜೀವಂತವಾಗಿದೆ. ಕೋಟೆ ನಗರಿಯಲ್ಲಿ ನಡೆಯುವ ಪ್ರತಿಯೊಂದು ರಾಜಕೀಯ, ಸಾಮಾಜಿಕ ಚಟುವಟಿಕೆಗಳು ಈ ದೇವಾಲಯದಿಂದಲೇ ಆರಂಭವಾಗುತ್ತವೆ. ಮಹಾತ್ಮ ಗಾಂಧಿ ಪ್ರತಿಮೆಯು ದೇವಾಲಯದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತದೆ.
‘ಪೇಟೆ ದೇವಾಲಯ’ ಎಂದೇ ಪ್ರಸಿದ್ಧಿ ಪಡೆದಿರುವ ನೀಲಕಂಠೇಶ್ವರನ ಸನ್ನಿಧಿಗೆ ಐತಿಹಾಸಿಕ ಹಿನ್ನೆಲೆಯಿದೆ. ದೇವಾಲಯವನ್ನು 1860ರಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಿಸಿದ್ದ ಎಂಬ ದಾಖಲೆಗಳಿವೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೋಟೆನಾಡಿನ ಕೊಡುಗೆ ಅಪಾರ. ಅದರಲ್ಲಿ ನೀಲಕಂಠೇಶ್ವರನ ಸನ್ನಿಧಿಯು ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿಯ ತಾಣವಾಗಿತ್ತು ಎಂಬ ನೆನಪುಗಳು ಹಿರಿಯರ ಮನದಾಳದಲ್ಲಿವೆ.
ಗಾಂಧಿ ಪ್ರೇರಣೆಯಿಂದ ಸ್ವಾತಂತ್ರ್ಯ ಚಳವಳಿಗೆ ಧುಮಿಕಿದ ಎಸ್.ನಿಜಲಿಂಗಪ್ಪ ಅವರು ತಮ್ಮ ಕಾರ್ಯ ಚಟುವಟಿಕೆಗಳಿಗೆ ನೀಲಕಂಠೇಶ್ವರ ದೇವಾಲಯದ ಆವರಣವನ್ನೇ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಹೋರಾಟದ ರೂಪುರೇಷೆಗಳು ಇಲ್ಲಿಯೇ ಸಿದ್ಧಗೊಳ್ಳುತ್ತಿದ್ದವು. ಈ ಕಾರಣಕ್ಕೆ ಇಂದಿಗೂ ಜಿಲ್ಲಾಡಳಿತ, ರಾಜಕೀಯ ಪಕ್ಷಗಳ ಜಾಥಾ, ಪ್ರತಿಭಟನೆಗಳು ನೀಲಕಂಠೇಶ್ವರ ದೇವಾಲಯದಿಂದಲೇ ಆರಂಭಗೊಳ್ಳುತ್ತವೆ.
ನೀಲಕಂಠ ದೇವಾಲಯದ ನವಗ್ರಹ ಸನ್ನಿಧಿಯ ಪಕ್ಕದಲ್ಲೇ ಇರುವ ಎಂಟು ಅಡಿ ಎತ್ತರದ ಮಹಾತ್ಮಗಾಂಧಿ ಪ್ರತಿಮೆ ಭಕ್ತರ ಗಮನ ಸೆಳೆಯುತ್ತದೆ. ಸದ್ಯ ದೇವಾಲಯವನ್ನು ವೀರಶೈವ ಸಮಾಜ ನಿರ್ವಹಣೆ ಮಾಡುತ್ತಿದೆ. ದೇವಾಲಯಕ್ಕೆ ಬಂದವರು ಮಹಾತ್ಮ ಗಾಂಧಿ ಪ್ರತಿಮೆಗೂ ನಮಸ್ಕಾರ ಹಾಕಿ ತೆರಳುತ್ತಾರೆ. ದೇವಾಲಯ ಆಡಳಿತ ಮಂಡಳಿ ಕೂಡ ನೀಲಕಂಠನಿಗೆ ನೀಡುವ ಮಹತ್ವವನ್ನು ಮಹಾತ್ಮಗಾಂಧಿ ಪ್ರತಿಮೆಗೂ ನೀಡಿದ್ದಾರೆ.
ಮದ್ರಾಸ್‌ನಿಂದ ಬಂದ ಪ್ರತಿಮೆ:
ಗಾಂಧೀಜಿ ಊರುಗೋಲು ಹಿಡಿದು ಚಳವಳಿಗೆ ಹೊರಟಂತಿರುವ ಪ್ರತಿಮೆ ಶುದ್ಧ ಶ್ವೇತವರ್ಣದಿಂದ ಕೂಡಿದೆ. ಸಿಮೆಂಟ್ ಹಾಗೂ ಕಬ್ಬಿಣದಿಂದ ರೂಪಿಸಲಾಗಿರುವ ಈ ಪ್ರತಿಮೆಯನ್ನು ದೇವಾಲಯದ ಆಡಳಿತ ಮಂಡಳಿ ಸುಸ್ಥಿತಿಯಲ್ಲಿಟ್ಟಿದೆ. ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ತುರುವನೂರಿನ ಸ್ವಾತಂತ್ರ್ಯ ಹೋರಾಟಗಾರ ಟಿಎಂಕೆ ಪೀರ್ ಸಾಬ್ (ನಗರಾಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷ ತಾಜ್ ಪೀರ್ ಅವರ ಅಜ್ಜ) 1951ರಲ್ಲಿ ಗಾಂಧಿ ಪ್ರತಿಮೆಯನ್ನು ಮದ್ರಾಸ್‌ನಿಂದ ತರಿಸಿದ್ದರು.
ನೀಲಕಂಠೇಶ್ವರ ದೇವಾಲಯದಲ್ಲೇ ಹೋರಾಟದ ಕಿಚ್ಚು ಹೊತ್ತಿಕೊಳ್ಳುತ್ತಿದ್ದ ಕಾರಣ ಗಾಂಧಿ ಪ್ರತಿಮೆಗೆ ದೇವಾಲಯದೊಳಗೆ ಸ್ಥಾನ ನೀಡಲಾಯಿತು. ಆಗಿನಿಂದ ಇಂದಿನವರೆಗೂ ಗಾಂಧೀಜಿಯನ್ನೂ ಆರಾಧಿಸಲಾಗುತ್ತಿದೆ. ಪ್ರತಿ ರಾಷ್ಟ್ರೀಯ ಹಬ್ಬಗಳ ದಿನದಂದು ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಮಾಲಾರ್ಪಣೆ ಮಾಡಲಾಗುತ್ತದೆ.
‘ನಾಯಕ ಅರಸರ ಕಾಲದಿಂದಲೂ ನೀಲಕಂಠೇಶ್ವರ ದೇವಾಲಯ ದೈವಭಕ್ತಿ ಹಾಗೂ ದೇಶಭಕ್ತಿಯ ಪ್ರತೀಕವಾಗಿದೆ. ಆರಂಭದಲ್ಲಿ ಪ್ರತಿಮೆಯನ್ನು ಎಸ್.ನಿಜಲಿಂಗಪ್ಪ ಅವರ ಸ್ಮಾರಕದಲ್ಲಿಡುವ ಯೋಚನೆ ಇತ್ತು. ಆದರೆ, ನಗರದ ಎಲ್ಲ ಸಾರ್ವಜನಿಕ ಚಟುವಟಿಕೆಗಳು ದೇವಾಲಯದಿಂದಲೇ ಆರಂಭವಾಗುವ ಕಾರಣ ಇಲ್ಲಿಯೇ ಇಡಲಾಗಿದೆ’ ಎಂದು ವೀರಶೈವ ಸಮಾಜದ ಮುಖಂಡರಾದ ಶಣ್ಮುಖಪ್ಪ ತಿಳಿಸಿದರು.
ಸಚಿವರಿಂದ ಮಾಲಾರ್ಪಣೆ
ಇಂದು ಗಾಂಧಿ ಜಯಂತಿ ಅಂಗವಾಗಿ ಬುಧವಾರ ನೀಲಕಂಠೇಶ್ವರ ದೇವಾಲಯದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೇರಿ ಜನಪ್ರತಿನಿಧಿಗಳು ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಗಾಂಧಿಯನ್ನು ಸ್ಮರಿಸಲಿದ್ದಾರೆ. ದೇವಾಲಯದ ಆವರಣದಿಂದಲೇ ಗಾಂಧಿ ಜಯಂತಿಯ ಜಾಥಾ ಆರಂಭಗೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.