ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಯಾರೇ ಸತ್ತರೂ ಒಂದೇ ಕುಣಿಗೆ ಹೂಳ್ತಾರೆ!

Last Updated 30 ಅಕ್ಟೋಬರ್ 2020, 6:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಜೀವನದ ಪಯಣ ಮುಗಿಸಿದವರ ಅಂತ್ಯಕ್ರಿಯೆ ಸ್ಥಳ, ಜನಾಂಗ, ಧರ್ಮಕ್ಕೆ ಅನುಗುಣವಾಗಿ ಭಿನ್ನತೆ ಹೊಂದಿದೆ. ಮೃತರನ್ನು ಹೂಳುವ, ಸುಡುವ ವಿಧಾನಗಳು ಚಾಲ್ತಿಯಲ್ಲಿವೆ. ಮೊಳಕಾಲ್ಮುರು ತಾಲ್ಲೂಕಿನ ಕಾಡು ಸಿದ್ಧಾಪುರದಲ್ಲಿ ಮಾತ್ರ ವಿಶೇಷ ಆಚರಣೆ ಇದೆ. ಕಾಡು ಕುರುಬ ಸಮುದಾಯದಲ್ಲಿ ಯಾರೇ ಮೃತಪಟ್ಟರು ಒಂದೇ ಕುಣಿಗೆ ಹೂಳಲಾಗುತ್ತಿದೆ!

ಕಾಡು ಸಿದ್ದಾಪುರವೆಂದರೆ ಬಹುತೇಕರಿಗೆ ಇದು ಗೊತ್ತಾಗಲಾರದು. ಅಶೋಕ ಸಿದ್ದಾಪುರವೆಂದರೆ ನೆನಪಾಗುತ್ತದೆ. ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ. ದೇವಸಮುದ್ರ ಹೋಬಳಿಯ ಈ ಗ್ರಾಮ ಶಿಲಾಯುಗ ಕಾಲದೊಂದಿಗೆ ನಂಟು ಬೆಸೆದುಕೊಂಡಿದೆ. ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು ಇಲ್ಲಿ ಸಿಕ್ಕಿವೆ. ಈ ಗ್ರಾಮದ ಕಾಡು ಕುರುಬರು ಇರುವ ಹಟ್ಟಿಯನ್ನು ಕಾಡು ಸಿದ್ದಾಪುರವೆಂದು ಕರೆಯಲಾಗುತ್ತಿದೆ. ಇಲ್ಲಿ ಒಂದೇ ಸಮುದಾಯದ ಸುಮಾರು 30ಕ್ಕೂ ಹೆಚ್ಚು ಮನೆಗಳು ಪ್ರತ್ಯೇಕವಾಗಿವೆ. ಇವರಲ್ಲಿ ಕೆಲ ಕುಟುಂಬದಲ್ಲಿ ಮಾತ್ರ ಈ ಸಂಪ್ರದಾಯವಿದೆ.

ಬೆಂಗಳೂರು-ಬಳ್ಳಾರಿ ಹೆದ್ದಾರಿಯಿಂದ ಅಶೋಕ ಶಾಸನದ ಸ್ಥಳವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಕಾಡು ಸಿದ್ದಾಪುರ ಒಂದು ಕುಗ್ರಾಮ. ಮೂಲ ಸೌಲಭ್ಯದ ಕೊರತೆ ಹಟ್ಟಿಯನ್ನು ಕಾಡುತ್ತಿದೆ. ಕೃಷಿ, ಕುರಿ, ಜಾನುವಾರು ಸಾಕಣೆ ಇವರ ಮೂಲ ವೃತ್ತಿ. ಕೆಲ ಪದವೀಧರರು ಬೆಂಗಳೂರು ಸೇರಿದಂತೆ ಹಲವೆಡೆ ಉದ್ಯೋಗ ಹಿಡಿದಿದ್ದಾರೆ. ಬಹುತೇಕರು ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತಿಮ್ಮಲಾಪುರ, ಹೊಸಗುಡ್ಡ ಸೇರಿ ಹಲವೆಡೆಯಿಂದ ವಲಸೆ ಬಂದ ಕಾಡು ಕುರುಬರೂ ಇಲ್ಲಿದ್ದಾರೆ. ಪೂರ್ವಿಕರ ಕಾಲದಿಂದಲೂ ಹಟ್ಟಿಯಲ್ಲೇ ಹುಟ್ಟಿ ಬೆಳೆದ ಕುಟುಂಬ ಮಾತ್ರ ಈ ಅಂತ್ಯಕ್ರಿಯೆ ವಿಧಾನ ಅನುಸರಿಸುತ್ತಿದೆ.

ಕಾಡು ಕುರುಬರ ಆರಾಧ್ಯ ದೈವ ಸಿದ್ದೇಶ್ವರಸ್ವಾಮಿ ದೇಗುಲ ಹಟ್ಟಿಯ ಮಧ್ಯದಲ್ಲಿದೆ. ಏಕಶಿಲೆಯ ತಳಪಾಯದ ಮೇಲೆ ನಿಂತಿರುವ ದೇಗುಲಕ್ಕೆ ಐತಿಹ್ಯವಿದೆ. ದೇಗುಲದ ಗರ್ಭಗುಡಿಯಿಂದ 15 ಅಡಿ ದೂರದಲ್ಲಿ ಶವಸಂಸ್ಕಾರದ ಕುಣಿ ಇದೆ. ಹತ್ತು ಅಡಿ ಉದ್ದ ಹಾಗೂ ಆರು ಅಡಿ ಅಗಲದ ಸ್ಥಳವನ್ನು ಅಂತ್ಯಸಂಸ್ಕಾರಕ್ಕೆ ಮೀಸಲಿಡಲಾಗಿದೆ. ದೇಗುಲದ ಸಮೀಪ ಅನೇಕ ಮನೆಗಳಿವೆ. ಅಂತ್ಯಕ್ರಿಯೆ ನಡೆಯುವ ಸ್ಥಳದ ಬಗ್ಗೆ ಗ್ರಾಮಸ್ಥರಲ್ಲಿ ಪೂಜ್ಯನೀಯ ಭಾವನೆ ಇದೆ.

‘ಕಾಡು ಸಿದ್ದಾಪುರದಲ್ಲೇ ಹುಟ್ಟಿ ಬೆಳೆದವರ ಅಂತ್ಯಕ್ರಿಯೆಗೆ ಮಾತ್ರ ಇದು ಮೀಸಲಾಗಿದೆ. ವಲಸೆ ಬಂದ ಕುಟುಂಬದ ಸದಸ್ಯರ ಶವಸಂಸ್ಕಾರಕ್ಕೆ ಇಲ್ಲಿ ಅವಕಾಶವಿಲ್ಲ. ಈ ಸಂಪ್ರದಾಯವನ್ನು ಚಿಕ್ಕವರಿದ್ದಾಗಿನಿಂದಲೂ ನೋಡುತ್ತಿದ್ದೇವೆ. ಪ್ರಾಚೀನ ಕಾಲದಿಂದಲೂ ಈ ಪದ್ಧತಿ ರೂಢಿಯಲ್ಲಿದೆ. ಒಂದೇ ದಿನ, ಒಂದೇ ವಾರದಲ್ಲಿ ಹಲವರು ಸತ್ತರು ಅದೇ ಸ್ಥಳದಲ್ಲಿ ಸಮಾಧಿ ಮಾಡಲಾಗುತ್ತದೆ’ ಎನ್ನುತ್ತಾರೆ ಅಶೋಕ ಸಿದ್ಧಾಪುರದ ಶೇಷಪ್ಪ.

ಶವಸಂಸ್ಕಾರಕ್ಕೆ ಕೆಲ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಗ್ರಾಮಸ್ಥರು ಮೃತಪಟ್ಟ ಬಳಿಕ ಕುಣಿಯ ಮಣ್ಣು ತೆಗೆದು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಸಮಾಧಿ ಸ್ಥಳದಲ್ಲಿ ದುರ್ವಾಸನೆ ಬದಲು ಹೂ, ಸುಗಂಧದ ಪರಿಮಳ ಪಸರಿಸುತ್ತದೆ ಎಂಬುದು ಗ್ರಾಮಸ್ಥರ ಅನುಭವ. ಮೂಳೆಗಳು ಸಿಕ್ಕರೆ ಹೊರಗೆ ತೆಗೆದಿಟ್ಟು ಶವದೊಂದಿಗೆ ಮತ್ತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಕುಣಿಯಲ್ಲಿ ಬಾಳೆ ಹಣ್ಣು–ತೆಂಗಿನ ಕಾಯಿ, ಪುಷ್ಪಗಳನ್ನು ಹಾಕಲಾಗುತ್ತದೆ. ಸಮಾಧಿ ಸ್ಥಳ ಸಾವಿನ ಮುನ್ಸೂಚನೆ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಸಮಾಧಿಯಲ್ಲಿ ಬಿರುಕು ಕಾಣಿಸಿಕೊಂಡರೆ ಹಟ್ಟಿಯಲ್ಲಿ ಆತಂಕ ಸೃಷ್ಟಿಯಾಗುತ್ತದೆ.

‘ಇದೊಂದು ಪುರಾತನ ಕಾಲದ ಶವಸಂಸ್ಕಾರ ವಿಧಾನ. ಈ ಸ್ಥಳದಲ್ಲಿ ಹೂಳಲಾದ ಮೃತದೇಹ ಬಹುಬೇಗ ಒಣಗಿ ಮಣ್ಣಿನಲ್ಲಿ ಲೀನವಾಗುತ್ತದೆ ಎಂಬುದು ಹಿರಿಯರ ಅನುಭವ. ಸ್ಥಳ ಮಹಿಮೆ ಅಥವಾ ಶವಸಂಸ್ಕಾರ ವಿಧಾನದ ಪರಿಣಾಮ ಶವ ಕೆಡದಿರಬಹುದು. ಜನಪದ ಸಂಸ್ಕೃತಿಯ ನೆಲೆಯಲ್ಲಿ ಸಾಹಿತ್ಯದಲ್ಲಿ ಇದು ದಾಖಲಾಗಿದೆಯೇ ವಿನಾ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಸಂಶೋಧನೆ ನಡೆದಾಗ ಮಾತ್ರ ಸತ್ಯಗಳು ಗೊತ್ತಾಗಬಹುದು’ ಎಂಬುದು ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ ಅಭಿಪ್ರಾಯ.

ಈ ಕುಣಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕೆಲ ಕಟ್ಟುಪಾಡುಗಳಿವೆ. ಕೆಲವೇ ಕುಟುಂಬಕ್ಕೆ ಸೇರಿದವರಿಗೆ ಮಾತ್ರ ಇದು ಮೀಸಲಾಗಿದೆ. ಸಹಜವಾಗಿ ಗ್ರಾಮದಲ್ಲಿಯೇ ಮೃತಪಟ್ಟವರನ್ನು ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಕಾಯಿಲೆಯಿಂದ ಬಳಲಿ ಕೊನೆಯುಸಿರೆಳೆದವರು, ಅಪಘಾತಕ್ಕೆ ಬಲಿಯಾದವರು, ಊರ ಗಡಿಯಾಚೆ ಮೃತಪಟ್ಟವರನ್ನು ಇಲ್ಲಿ ಹೂಳುವುದಿಲ್ಲ. ಬೇರೆ ಗ್ರಾಮಕ್ಕೆ ವಿವಾಹವಾಗಿರುವ ಮಹಿಳೆಯ ಅಂತ್ಯಕ್ರಿಯೆ ಇಲ್ಲಿ ನಡೆಸುವುದಿಲ್ಲ.

‘ಕುಣಿಯ ಸಮೀಪದಲ್ಲಿರುವ ದೇಗುಲದಲ್ಲಿ ಕಾರ್ತಿಕ, ಅಭಿಷೇಕ ನಡೆಯುತ್ತವೆ. ಊರು ವಿಸ್ತರಣೆಯಾದಂತೆ ದೇಗುಲದ ಸುತ್ತ ಇದ್ದ ಕುಟುಂಬಗಳು ಸ್ಥಳಾಂತರವಾಗಿವೆ. ಆದರೂ, ಕುಣಿಯ ಪಕ್ಕದಲ್ಲಿಯೇ ಗ್ರಾಮಸ್ಥರು ಮಲಗುತ್ತಾರೆ. ಸ್ಮಶಾನದ ಬಗ್ಗೆ ಇರುವ ತಾತ್ಸಾರ, ಭಯ ಈ ಜನರಲ್ಲಿ ಕಾಣುವುದಿಲ್ಲ’ ಎನ್ನುತ್ತಾರೆ ಶೇಷಪ್ಪ.

ಸಿದ್ದೇಶ್ವರ ಸ್ವಾಮಿ ದೇಗುಲವನ್ನು ಸಂರಕ್ಷಿತ ಪ್ರದೇಶವೆಂದು ಪ್ರವಾಸೋದ್ಯಮ ಇಲಾಖೆ ಘೋಷಣೆ ಮಾಡಿದೆ. ಆದರೆ, ಇದರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪ್ರವಾಸಿ ತಾಣವಾಗಿ ಪರಿವರ್ತನೆ ಮಾಡುವ ಪ್ರಯತ್ನಗಳು ನಡೆದಿಲ್ಲ. ಸರ್ಕಾರಿ ಅಧಿಕಾರಿಗಳು ಕಾಡು ಸಿದ್ದಾಪುರ ನಿರ್ಲಕ್ಷಿಸಿದ್ದಾರೆ ಎಂಬ ಆರೋಪಗಳೂ ಇವೆ.

‘ಮೊಳಕಾಲ್ಮುರು ತಾಲ್ಲೂಕು ಆದಿ ಮಾನವ ವಾಸ ಮಾಡಿದ್ದ ಸ್ಥಳ. ಇಲ್ಲಿನ ಗುಹೆ, ಕಲ್ಲುಗಳ ಮೇಲೆ ಇಂದಿಗೂ ಕುರುಹುಗಳಿವೆ. ಪ್ರಾಚೀನ ಕಾಲದ ಪಳಯುಳಿಕೆಯ ಸಂಸ್ಕೃತಿಯೊಂದು ಹಾಗೆ ಉಳಿದುಕೊಂಡಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ’ ಎಂಬುದು ಮೀರಸಾಬಿಹಳ್ಳಿ ಶಿವಣ್ಣ ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT