ಚಿತ್ರದುರ್ಗ ನಗರಸಭೆ: ಬಿಜೆಪಿ ಪಾಳಯದಲ್ಲಿ ಹೆಚ್ಚಿದ ಸಂಭ್ರಮ, ‘ಕೈ‘ಗೆ ಹತಾಶೆ

7
* ಮುಗಿಲು ಮುಟ್ಟಿದ ಹರ್ಷೋದ್ಗಾರ * ಕಾರ್ಯಕರ್ತರಿಂದ ಸಂಭ್ರಮಾಚರಣೆ * ವಾರ್ಡ್‌ಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ

ಚಿತ್ರದುರ್ಗ ನಗರಸಭೆ: ಬಿಜೆಪಿ ಪಾಳಯದಲ್ಲಿ ಹೆಚ್ಚಿದ ಸಂಭ್ರಮ, ‘ಕೈ‘ಗೆ ಹತಾಶೆ

Published:
Updated:
Deccan Herald

ಚಿತ್ರದುರ್ಗ: ಚುನಾವಣಾ ಫಲಿತಾಂಶಕ್ಕಾಗಿ ಕ್ಷಣ ಕ್ಷಣವೂ ಕಾತುರದಿಂದ ಕಾಯುತ್ತ ನಿಂತಿದ್ದ ಬೆಂಬಲಿಗರು, ಅಭಿಮಾನಿಗಳು ಮೈದಾನದ ಸುತ್ತಲೂ ನೆರೆದಿದ್ದರು. ಅಲ್ಲಿ ಎತ್ತ ನೋಡಿದರೂ ಜನವೋ ಜನ. ತಮ್ಮ ಅಭ್ಯರ್ಥಿ ಜಯ ಗಳಿಸುತ್ತಿದ್ದಂತೆ ಕೇಕೆ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ...

ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಮುಂಭಾಗದಲ್ಲಿ ಸೋಮವಾರ ಸ್ಥಳೀಯ ಸಂಸ್ಥೆ ಚುನಾವಣೆ ಅಂಗವಾಗಿ ಚಿತ್ರದುರ್ಗ ನಗರಸಭೆಯ 35 ವಾರ್ಡ್‌ಗಳ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು, ಪಕ್ಷೇತರರ ಬೆಂಬಲಿಗರು ಫಲಿತಾಂಶ ಘೋಷಣೆ ಆಗುವವರೆಗೂ ಸಂಭ್ರಮದಲ್ಲೇ ಮುಳುಗಿದ್ದರು. ಆ ಸಡಗರ ಕೊನೆಯವರೆಗೂ ಉಳಿದಿದ್ದು, ಬಿಜೆಪಿ ಪಾಳಯದಲ್ಲಿ.

ಬೆಳಿಗ್ಗೆ 8 ಕ್ಕೆ ಎಣಿಕೆ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನ ವಿವಿಧ ಬಡಾವಣೆಗಳಿಂದ ಬಂದಿದ್ದ ರಾಜಕೀಯ ಪಕ್ಷಗಳ ಸಾವಿರಾರು ಮಂದಿ ಕಾರ್ಯಕರ್ತರು ಜಮಾಯಿಸಿದ್ದರು. ಧ್ವನಿವರ್ಧಕದ ಮೂಲಕ ಅಭ್ಯರ್ಥಿಗಳ ಗೆಲುವು ಘೋಷಣೆ ಆಗುತ್ತಿರುವುದನ್ನು ಆಲಿಸುತ್ತಿದ್ದರು. ಚಳ್ಳಕೆರೆ ನಗರಸಭೆ, ಹೊಸದುರ್ಗ ಪುರಸಭೆ ಸೇರಿ ರಾಜ್ಯದ ಬೇರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಫಲಿತಾಂಶವನ್ನು ಮೊಬೈಲ್‍ ಫೋನಿನಲ್ಲಿ ಮಾಹಿತಿ ಪಡೆಯುತ್ತಿದ್ದರು.

ಚಿತ್ರದುರ್ಗ ನಗರಸಭೆಯ 35 ವಾರ್ಡ್‌ಗಳ ಪೈಕಿ 17 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ಸಂಭ್ರಮ ಹೆಚ್ಚಾಯಿತು. ಅತಿ ಹೆಚ್ಚು ಸ್ಥಾನಗಳೊಂದಿಗೆ ಇದೇ ಪ್ರಥಮ ಬಾರಿಗೆ ಮೇಲುಗೈ ಸಾಧಿಸಿದ್ದಕ್ಕೆ ಬೆಂಬಲಿಗರ ಹರ್ಷವೂ ಮುಗಿಲು ಮುಟ್ಟಿತ್ತು. ಕಡಿಮೆ ಸ್ಥಾನಗಳಲ್ಲಿ ಜಯಗಳಿಸಿದ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಅಧಿಕಾರ ಕೈತಪ್ಪಿದ ಹತಾಶೆ, ನೋವು ಇತ್ತು. ಸೋತವರು ನಿರಾಸೆಯಿಂದ ಮತ ಎಣಿಕೆ ಕೇಂದ್ರದಿಂದ ಹೊರನಡೆಯುತ್ತಿದ್ದರು.

ಅಭ್ಯರ್ಥಿಗಳು ಗೆಲುವಿನ ನಗೆ ಬೀರಿ ಅಭಿಮಾನಿಗಳತ್ತ ಕೈಬೀಸಿದರೆ, ವಿಜಯೋತ್ಸವ ಆಚರಿಸಿದ್ದು ಮಾತ್ರ ಕಾರ್ಯಕರ್ತರು, ಬೆಂಬಲಿಗರು. ಪ್ರಮುಖ ವೃತ್ತಗಳು, ಅಭ್ಯರ್ಥಿಗಳ ಮನೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಕೆಲ ಕಾರ್ಯಕರ್ತರು ಸಂಭ್ರಮಿಸಿದರೆ, ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದ ಬಿಜೆಪಿಯವರು ಪಕ್ಷದ ಬಾವುಟಗಳನ್ನು ಹಾರಿಸುತ್ತ ದಾರಿಹೋಕರ ಗಮನ ಸೆಳೆದರು.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಐತಿಹಾಸಿಕ ಕೋಟೆನಾಡು ಕಳೆದ ವಿಧಾನಸಭಾ ಚುನಾವಣೆಯಲ್ಲೂ ದೂಳಿಪಟವಾಗಿತ್ತು. ಅದೇ ರೀತಿಯ ವಾತಾವರಣ ಚಿತ್ರದುರ್ಗ ನಗರಸಭೆ ಚುನಾವಣಾ ಫಲಿತಾಂಶದ ನಂತರವೂ ನಿರ್ಮಾಣವಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !