ಬುಧವಾರ, ಸೆಪ್ಟೆಂಬರ್ 22, 2021
28 °C
ಆಡಳಿತ ವೈಖರಿಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ

ಚಿತ್ರದುರ್ಗ: ಸಭಾತ್ಯಾಗಕ್ಕೆ ಮುಂದಾದ ಬಿಜೆಪಿ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನಗರಸಭೆಯ ಆಡಳಿತ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಲೋಪವನ್ನು ಗುರುತಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗಕ್ಕೆ ಮುಂದಾದ ಪ್ರಸಂಗ ನಡೆಯಿತು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರ ಆಕ್ಷೇಪದ ಪರಿಣಾಮವಾಗಿ ಇದು ವಿಫಲವಾಯಿತು.

ನಗರಸಭೆಯ ಆಡಳಿತ ಬಿಜೆಪಿಯ ಹಿಡಿತದಲ್ಲಿದೆ. ಆದರೂ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿಯ ಸದಸ್ಯರೇ ವಿರೋಧ ಪಕ್ಷದಂತೆ ವರ್ತಿಸಿದರು. ಇದರಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತೀವ್ರ ಮುಜುಗರಕ್ಕೆ ಒಳಗಾದರು.

ನಿಗದಿತ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಲು ವಿರೋಧ ವ್ಯಕ್ತಪಡಿಸಿದ ಸದಸ್ಯರು ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ನಗರಸಭೆಯ ಅಧಿಕಾರಿಗಳ ವರ್ತನೆ, ಸಾರ್ವಜನಿಕರಿಂದ ವ್ಯಕ್ತವಾಗುವ ಟೀಕೆಗಳ ಬಗ್ಗೆ ಅಸಮಾಧಾನ ತೋಡಿಕೊಂಡರು. ‘ನಗರಸಭೆ ಸದಸ್ಯರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ’ ಎಂದು ಕಿಡಿಕಾರಿದರು.

ಪೌರಾಯುಕ್ತ ಜೆ.ಟಿ.ಹನುಮಂತರಾಜು ಹಾಗೂ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌ ಅವರು ಮೌನಕ್ಕೆ ಶರಣಾದರು. ಇದರಿಂದ ಕೆರಳಿದ ಬಿಜೆಪಿಯ ಕೆಲ ಸದಸ್ಯರು ಸಭಾತ್ಯಾಗದ ನಿರ್ಧಾರ ಪ್ರಕಟಿಸಿದರು. ಶಶಿಧರ್‌, ಭಾಸ್ಕರ್‌, ಮಲ್ಲಿಕಾರ್ಜುನ್‌ ಸೇರಿ ಅನೇಕರು ಆಸನಗಳಿಂದ ಎದ್ದು ಹೊರಡಲು ಸಜ್ಜಾದರು. ಇದಕ್ಕೆ ಜೆಡಿಎಸ್‌ ಸದಸ್ಯ ದೀಪು ಹಾಗೂ ಕಾಂಗ್ರೆಸ್‌ ಸದಸ್ಯ ಗೊಪ್ಪೆ ಮಂಜುನಾಥ್‌ ಆಕ್ಷೇಪ ವ್ಯಕ್ತಪಡಿಸಿದರು.

ಮೊಹಮ್ಮದ್‌ ಜಲಾಲುದ್ದೀನ್‌ ಮಾತನಾಡಿ, ‘ಬೀದಿದೀಪ ನಿರ್ವಹಣೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಿ ಹತ್ತು ದಿನ ಕಳೆದಿದೆ. ಈವರೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದ್ದು, ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ನಗರಸಭೆ ಸದಸ್ಯರೇ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಬೀದಿಯಲ್ಲಿ ಬಿದ್ದ ಕಸ ಎತ್ತಿಹಾಕುವಂತೆ ತಾಕೀತು ಮಾಡಿದರೂ ಪಾಲನೆ ಆಗುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.

ಇದಕ್ಕೆ ಧ್ವನಿಗೂಡಿಸಿದ ಭಾಸ್ಕರ್‌, ‘ನಗರಸಭೆಗೆ ನಿತ್ಯ ಸಾವಿರಾರು ಸಾರ್ವಜನಿಕರು ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ದಿನಗಟ್ಟಲೇ ಕಾಯುವ ಜನರು ಶೌಚಾಲಯದ ಇಲ್ಲದೇ ಪರದಾಡುತ್ತಿದ್ದಾರೆ. ನಗರಸಭೆಗೆ ಇದು ಶೋಭೆ ತರುವುದಿಲ್ಲ’ ಎಂದು ಆರೋಪಿಸಿದರು.

ಮಂಜುನಾಥ್‌ ಗೊಪ್ಪೆ ಮಧ್ಯಪ್ರವೇಶಿಸಿ, ‘ಬೀದಿ ದೀಪ ನಿರ್ವಹಣೆಗೆ ₹ 25 ಲಕ್ಷ ಅನುದಾನ ಮೀಸಲಿಡಲಾಗುತ್ತಿದೆ. ಆದರೂ, ಏಕೆ ಈ ಸಮಸ್ಯೆ ಆಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದರೆ ಕೌನ್ಸಿಲ್‌ ಗಮನಕ್ಕೆ ತರಬೇಕಲ್ಲವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

‘ನಗರಸಭೆ ಅಧಿಕಾರಿಗಳು ಸದಸ್ಯರಿಗೆ ಗೌರವ ತೋರುತ್ತಿಲ್ಲ. ಯಾವುದೇ ಕಾರ್ಯದಲ್ಲಿ ಸದಸ್ಯರನ್ನು ಪರಿಗಣಿಸುತ್ತಿಲ್ಲ. ಅಧಿಕೃತ ಕಾರ್ಯಕ್ರಮ, ಸಭೆಯ ಮಾಹಿತಿ ನೀಡುವಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ’ ಎಂದು ಮತ್ತೊಬ್ಬ ಸದಸ್ಯ ಜಿ.ಹರೀಶ್‌ ತರಾಟೆ ತೆಗೆದುಕೊಂಡರು.

ನಗರಸಭೆ ಉಪಾಧ್ಯಕ್ಷೆ ಪಿ.ಎಂ.ಶ್ವೇತಾ ವೀರೇಶ್ ಇದ್ದರು.

***

ಕೋವಿಡ್‌ ನೆಪ ಹೇಳಿಕೊಂಡು ಅಭಿವೃದ್ಧಿ ಕಾರ್ಯ, ನಿರ್ವಹಣೆಯ ಕೆಲಸ ಮುಂದೂಡುವುದು ಸರಿಯಲ್ಲ. ಸದಸ್ಯರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಬೇಕು. ಸರಿಯಾಗಿ ಕೆಲಸ ಮಾಡಬೇಕು.

ತಿಪ್ಪಮ್ಮ ವೆಂಕಟೇಶ್‌
ನಗರಸಭೆ ಅಧ್ಯಕ್ಷೆ

***

ಸದಸ್ಯರೆಲ್ಲರಿಂದ 176 ಕಾಮಗಾರಿಗಳ ಪಟ್ಟಿ ಬಂದಿದೆ. ಈ ಕಾಮಗಾರಿ ಕೈಗೆತ್ತಿಕೊಳ್ಳಲು ₹ 20 ಕೋಟಿ ಬೇಕು. ಇಷ್ಟು ಹಣ ನಗರಸಭೆಯಲ್ಲಿಲ್ಲ. ಆರ್ಥಿಕ ಪರಿಸ್ಥಿತಿಯನ್ನು ಸದಸ್ಯರು ಗಮನಿಸಬೇಕು.

ಜೆ.ಟಿ.ಹನುಮಂತರಾಜು
ಪೌರಾಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು