ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪ್ರಯೋಗದಲ್ಲೂ ಯಶಸ್ಸು ಕಂಡ ವೈದ್ಯ

Last Updated 16 ಮಾರ್ಚ್ 2022, 2:07 IST
ಅಕ್ಷರ ಗಾತ್ರ

- ಶ್ವೇತಾ ಜಿ.

ಹೊಸದುರ್ಗ: ಇಲ್ಲಿನ ವೈದ್ಯರೊಬ್ಬರು ಸಹಜ ಮತ್ತು ಸಮಗ್ರ ಕೃಷಿ ಪದ್ಧತಿ ಅನುಸರಿಸುವ ಮೂಲಕ ವಿನೂತನ ಮಾದರಿಯ ಕೃಷಿಯಲ್ಲಿ ತೊಡಗಿದ್ದಾರೆ.

ಕೆಲ್ಲೋಡಿಯವರಾದ ಹೆರಿಗೆ ಮತ್ತು ಪ್ರಸೂತಿ ತಜ್ಞ ಡಾ.ಮುರುಗೇಶ್‌ ಅವರಿಗೆ ಬಾಲ್ಯದಿಂದಲೇ ಕೃಷಿಯ ಬಗ್ಗೆ ವಿಶೇಷ ಒಲವು. ಹತ್ತು ವರ್ಷಗಳ ಕೆಳಗೆ 14 ಎಕರೆ ತೆಂಗಿನ ತೋಟವಿರುವ ಭೂಮಿಯನ್ನು ಕೊಂಡು, ವಿನೂತನ ಪ್ರಯೋಗ ಮಾಡತೊಡಗಿದರು.

ಸಾಮಾಜಿಕ ಜಾಲತಾಣ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಸ್ನೇಹಿತರ ಸಲಹೆ ಮೇರೆಗೆ ಮೊದಲು ತೆಂಗು, ನಂತರ ಅಡಿಕೆ, ನಾಲ್ಕು ಅಡಿಕೆ ಗಿಡಗಳ ಮಧ್ಯೆ ಒಂದು ವಾಣಿಜ್ಯ ಬೆಳೆ, ನೆಲಕ್ಕೆ ಗೆಣಸು ಬಳ್ಳಿಗಳನ್ನು ಹಾಕಿದ್ದಾರೆ. ಹೀಗೆ ಮಾಡುವುದರಿಂದ ಸೂರ್ಯನ ಬೆಳಕು ನೇರವಾಗಿ ನೆಲದ ಮೇಲೆ ತಾಗಿ, ಭೂಮಿ ಒಣಗಲು ಬಿಡುವುದಿಲ್ಲ. ಅತಿಯಾದ ಮಳೆ ಬಂದರೂ ಮಣ್ಣಿನ ಸವಕಳಿಯಾಗುವುದಿಲ್ಲ. ಗಿಡಗಳ ಸುತ್ತಲೂ ಸ್ಪಿಂಕ್ಲರ್‌ ಮೂಲಕ ಗಂಜಲ (ಹಸುವಿನ ಮೂತ್ರ) ಸಿಂಪಡಣೆ ಮಾಡಲಾಗುತ್ತದೆ. ತೋಟಕ್ಕೆ ಉಳುಮೆ, ರಾಸಾಯನಿಕ ಗೊಬ್ಬರ ಹಾಗೂ ಔಷಧ ಸಿಂಪಡಣೆ ಮಾಡುವುದಿಲ್ಲ. ಅವರದು ನೈಸರ್ಗಿಕ ಕೃಷಿ ಪದ್ಧತಿ.

ತೋಟದಲ್ಲಿನ ತೆಂಗಿನ ಗರಿ, ಮಟ್ಟೆ ಇತರೆ ತ್ಯಾಜ್ಯಗಳನ್ನು ಕತ್ತರಿಸಿ, ಗಿಡದ ಬುಡಕ್ಕೆ ಹಾಕಲಾಗುತ್ತದೆ. ಕೆಲವು ದಿನಗಳ ನಂತರ ಬ್ಯಾಕ್ಟೀರಿಯಾ ಎರೆಹುಳುಗಳ ಸಹಕಾರದಿಂದ ಅದು ಕೊಳೆತು ಗೊಬ್ಬರವಾಗುತ್ತದೆ.

ಬಯಲುಸೀಮೆಯಲ್ಲಿ ಮಲೆನಾಡಿನ ಬೆಳೆ: ಮುರುಗೇಶ್‌ ಅವರ ತೋಟದಲ್ಲಿ ಕಾಳುಮೆಣಸು, ಏಲಕ್ಕಿ, ಬಾಳೆ, ವೆನಿಲ್ಲಾ, ಕೋಕೋ, ಅಂಜೂರ, ಕಿತ್ತಳೆ, ನೇರಳೆ, ಜಾಯಿಕಾಯಿ, ಅನಾನಸ್‌, ಕಾಫಿ, ಗಂಧ, ಬೆಣ್ಣೆಹಣ್ಣು, ಡ್ರ್ಯಾಗನ್‌ ಫ್ರೂಟ್‌ ಮುಂತಾದ ಸಸಿಗಳಿವೆ. ಸಾಮಾಜಿಕ ಜಾಲತಾಣದ ಮೂಲಕ ಶಿರಸಿ, ಸಿದ್ದಾಪುರ, ಪುತ್ತೂರು ಮತ್ತು ಮೂಡಿಗೆರೆಯ ರೈತರನ್ನು ಸಂಪರ್ಕಿಸಿ ಸಸಿಗಳನ್ನು ತರಿಸಿದ್ದಾರೆ. ತೆಂಗು, ಅಡಿಕೆ ಇತರೆ ಸಸಿಗಳನ್ನು ಬೆಳೆದು ಮಾರಾಟ ಮಾಡುತ್ತಾರೆ. ಉತ್ತಮ ಗುಣಮಟ್ಟದ 8-10 ಸಾವಿರ ತೆಂಗಿನ ಸಸಿ, 15,000 ಅಡಿಕೆ ಸಸಿಗಳು ತಯಾರಿಕೆ ಹಂತದಲ್ಲಿದ್ದು, ಅಗತ್ಯವಿರುವ ರೈತರಿಗೆ ನೀಡುತ್ತಿದ್ದಾರೆ.

ಕಡಕ್‌ ನಾಥ್‌, ಟರ್ಕಿ, ಗಿನಿಪೋನ್‌, ಫ್ಯಾನ್ಸಿಕೋಳಿ ಹಾಗೂ ಬಾತುಕೋಳಿಗಳನ್ನು ತಮಿಳುನಾಡಿನಿಂದ ತರಿಸಿದ್ದು, ಅವುಗಳಿಗೆ ನೀರು, ಆಹಾರ ಮತ್ತು ಪ್ರತ್ಯೇಕ ಶೆಡ್‌ ನಿರ್ಮಿಸಲಾಗಿದೆ. 50 ಎಚ್‌ಎಫ್‌ ತಳಿಯ ರಾಸುಗಳಿದ್ದು, ಇಲ್ಲಿ ಹಾಲು ಕೊಡುವ ಹಸು, ಗರ್ಭ ಧರಿಸಿರುವ ಹಸು ಮತ್ತು ಕರುಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಜಾನುವಾರನ್ನು ಕಟ್ಟಿಹಾಕುವುದು, ಎಳೆದಾಡುವುದು ಇಲ್ಲ, ಮೇವು ಮತ್ತು ನೀರನ್ನು ಅಗತ್ಯವಿದ್ದಾಗ ಸೇವಿಸಬಹುದು. ಮೆಕ್ಕೆಜೋಳದ ಮೇವನ್ನು ಹೊನ್ನಾಳಿಯಿಂದ ತರಿಸಲಾಗುತ್ತದೆ. ನಿತ್ಯ 250 ಲೀ ಹಾಲನ್ನು ನೇರವಾಗಿ ತಿಪಟೂರಿನ ಅಕ್ಷಯ ಕಾಯಕಲ್ಪ ಕೇಂದ್ರಕ್ಕೆ ರವಾನಿಸುವರು.

ಹೆಚ್ಚುವರಿ ಅಹಾರವಾಗಿ ಅಜೋಲಾ ಬೆಳೆಯಲಾಗುತ್ತದೆ. ಅಜೋಲಾದಲ್ಲಿ ಪ್ರೊಟೀನ್‌ ಹೆಚ್ಚಿರುವ ಕಾರಣ ಹಸು ಮತ್ತು ಕೋಳಿಗಳ ವರ್ಧನೆಗೆ ಸಹಕಾರಿಯಾಗುತ್ತದೆ. ಅಜೋಲಾವನ್ನು ಯಾರಾದರೂ ರೈತರು ಕೇಳಿದರೆ ಉಚಿತವಾಗಿ ನೀಡಲಾಗುತ್ತದೆ ಎಂದು ಡಾ.ಮುರುಗೇಶ್‌ ತಿಳಿಸಿದರು.

ಬಯೋಚಾರ್‌: ತೆಂಗಿನ ಚಿಪ್ಪು ಮತ್ತು ಸಿಪ್ಪೆಮಟ್ಟೆಗಳನ್ನು ಸುಟ್ಟು ಅದೆ ಇದ್ದಿಲಿಗೆ ಗಂಜಲು ಮತ್ತು ಬೆಲ್ಲ ಹಾಕಿ ಗೊಬ್ಬರ ತಯಾರಿಸಲಾಗುತ್ತದೆ. ಬ್ಯಾಕ್ಟೀರಿಯಾಗಳು ಹಾಗೂ ಎರೆಹುಳುಗಳ ಸಹಾಯದಿಂದ ಉತ್ಕೃಷ್ಟ ಗೊಬ್ಬರ ಪಡೆಯಬಹುದು ಎನ್ನುತ್ತಾರೆ ಅವರು.

ಸಕ್ರಿಯವಾಗಿ ಕೃಷಿಯಲ್ಲಿ ತೊಡಗಿರುವ ಇವರಿಗೆ ಮುರುಘಾಶ್ರೀ, ಐಸಿಎಆರ್‌ ವತಿಯಿಂದ ‘ಅತ್ಯತ್ತಮ ರೈತ’, ‘ಸೊಲ್ಲಾಪುರದ ಸಂಸ್ಥೆಯಿಂದ ಪ್ರಶಸ್ತಿ, ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ, ತಾಲ್ಲೂಕು ಮಟ್ಟದ ‘ಶ್ರೇಷ್ಠ ಕೃಷಿಕ’ ಹಾಗೂ ಜಿಲಾ ಮಟ್ಟದ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿಗಳು ಲಭಿಸಿವೆ.

***

ತೋಟಗಾರಿಕೆ ಬೆಳೆ ಬೆಳೆಯುವ ರೈತರು ಸಹಜ ಕೃಷಿ ಪದ್ಧತಿ ರೂಢಿಸಿಕೊಂಡರೇ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದು. ನೆಲಕ್ಕೆ ಬಿಸಿಲು ಬೀಳದಂತೆ ಸುತ್ತಲೂ ಸಸಿ ಹಾಕಬೇಕು. ಬಹುಬೆಳೆ ಪದ್ಧತಿ ಅನುಸರಿಸಿ. ರಾಸಾಯನಿಕಗಳ ಬಳಕೆ ನಿಷೇಧಿಸಬೇಕು.

ಡಾ.ಮುರುಗೇಶ್‌, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT