ಚಿತ್ರದುರ್ಗ: ಬಿರು ಬೇಸಿಗೆಯ ಬಿಸಿಲ ಝಳ ಕಡಿಮೆಯಾಗಿ ಈಗ ಮಳೆಯ ಸಿಂಚನವಾಗುತ್ತಿದೆ. ಸುಡುತ್ತಿದ್ದ ಇಳೆ ತಂಪಾಗಿದೆ. ಮೊದಲ ಮಳೆಗೇ ನಗರದ ವಿವಿಧೆಡೆ ಚರಂಡಿ, ರಾಜಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗುತ್ತಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಮಳೆಗಾಲ ನಿರ್ವಹಣೆಗೆ ನಗರಸಭೆ ಸಿಬ್ಬಂದಿ ಸಿದ್ಧರಾಗದ ಕಾರಣ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕು ಸಂಕಷ್ಟಮಯವಾಗಿದೆ.

ಕಳೆದ ಸೋಮವಾರ ರಾತ್ರಿ ಸುರಿದ ಬಿರುಗಾಳಿ, ಮಳೆಗೆ ನಗರದ ಕೆಳಗೋಟೆಯ ವಿವಿಧೆಡೆ ರಾಜಕಾಲುವೆಗಳು ಉಕ್ಕಿ ಹರಿದಿವೆ. ತೆರೆದ ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ನಿವಾಸಿಗಳು ಪರದಾಡಿದ್ದಾರೆ.

ಅಂಬಾಭವಾನಿ ದೇವಾಲಯದ ರಸ್ತೆಯ ಬಿಜೆಪಿ ಕಚೇರಿ ಮುಂದಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಕಾರಣ ರಾಗಿ, ಅಕ್ಕಿ ಮುಂತಾದ ದವಸ ಧಾನ್ಯಗಳು, ಬಟ್ಟೆ ಬರೆ ಮುಂತಾದ ವಸ್ತುಗಳೆಲ್ಲವೂ ಹಾಳಾಗಿವೆ. ಮನೆಯೊಳಗೆ ಕೊಳಚೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ರಾತ್ರಿಯಿಡೀ ಅದನ್ನು ಹೊರಹಾಕುವ ಕೆಲಸ ಮಾಡಿದ್ದಾರೆ.

ಪೂರ್ವ ಮುಂಗಾರು ಮಳೆಗೇ ಈ ಪರಿಸ್ಥಿತಿ ನಿರ್ಮಾಣವಾದರೆ ಮುಂದೆ ಮುಂಗಾರು ಮಳೆಯ ಸಮಯದಲ್ಲಿ ಗತಿಯೇನು ಎಂಬ ಆತಂಕ ನಿವಾಸಿಗಳನ್ನು ಕಾಡುತ್ತಿದೆ. ನಗರದಾದ್ಯಂತ ಚರಂಡಿಗಳು, ಮ್ಯಾನ್ಹೋಲ್ಗಳು ಬಾಯ್ತೆರೆದು ನಿಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ರಾಜಕಾಲುವೆ, ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲದ ಕಾರಣ ತ್ಯಾಜ್ಯ ತುಂಬಿಕೊಂಡು ನೀರು ಮುಂದಕ್ಕೆ ಹರಿಯಲು ಸಾಧ್ಯವಾಗದೇ ಮನೆಗಳತ್ತ ನುಗ್ಗುವುದು ಸಾಮಾನ್ಯವಾಗಿದೆ.

ಕಳೆದ ವಾರ ಸುರಿದ ಸಣ್ಣ ಮಳೆಗೇ ಜೋಗಿಮಟ್ಟಿ ರಸ್ತೆ, ಬಿ.ಡಿ ವೃತ್ತದ ಭಾಗದಲ್ಲಿ ಚರಂಡಿಗಳು ತುಂಬಿ ಹರಿದಿವೆ. ಜೋಗಿಮಟ್ಟಿ ರಸ್ತೆಯ ಚರಂಡಿಯಲ್ಲಿ ಕಲ್ಮಶ ತುಂಬಿದ್ದ ಕಾರಣ ಕೊಳಚೆ ಹರಿಯಲಾಗದೇ ರಸ್ತೆಗೆ ನುಗ್ಗಿದೆ. ಐತಿಹಾಸಿಕ ನಗರಿ ಚಿತ್ರದುರ್ಗದ ಕಾಲುವೆಗಳನ್ನು ರಾಜರ ಕಾಲದಲ್ಲೇ ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರು. ಆದರೆ ಈಗಿನ ನಗರಸಭೆ ಹಳೆಯ ಕಾಲುವೆ ವ್ಯವಸ್ಥೆಯನ್ನು ಉಳಿಸಿಕೊಂಡು ಹೊಸದಾಗಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ರೂಪಿಸದ ಪರಿಣಾಮ ಚರಂಡಿ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ.

ನಗರದ ಲಕ್ಷ್ಮಿ ಬಜಾರ್ ಭಾಗದಲ್ಲಿರುವ ಚರಂಡಿಗಳು ತೆರೆದುಕೊಂಡಿದ್ದು, ವಿವಿಧೆಡೆ ನೀರು ಕಟ್ಟಿಕೊಂಡು ಕೊಳಚೆ ನೀರು ಮಾರುಕಟ್ಟೆ ಪ್ರದೇಶಕ್ಕೆ ಹರಿಯುವ ಅಪಾಯವಿದೆ. ಆಗಿಂದಾಗ್ಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಕಾರಣ ವ್ಯಾಪಾರಿಗಳು ಹೈರಾಣಾಗಿದ್ದಾರೆ. ಎಲ್ಐಸಿ ಕಚೇರಿ, ಜೂನಿಯರ್ ಕಾಲೇಜು ಭಾಗದಲ್ಲೂ ಚರಂಡಿಗಳು ಕಿರಿದಾಗಿದ್ದು ಕೊಳಚೆ ನೀರು ಸದಾ ರಸ್ತೆಯಲ್ಲಿ ಹರಿಯುತ್ತದೆ.

ಕೆಎಸ್ಆರ್ಟಿಸಿ ಹಳೇ ಡಿಪೊ, ಐಶ್ವರ್ಯ ಫೋರ್ಟ್ ಹೋಟೆಲ್, ಬೆಸ್ಕಾಂ ಕಚೇರಿ ಸಮೀಪವೂ ನೀರು ಕಟ್ಟಿಕೊಂಡು ರಸ್ತೆಯಲ್ಲಿ ಹರಿಯುತ್ತದೆ. ಚಂದ್ರವಳ್ಳಿ ಭಾಗದಿಂದ ಹರಿದು ಬರುವ ನೀರು ನೆಹರೂ ನಗರ, ಕಾರ್ಪೊರೇಷನ್ ಬ್ಯಾಂಕ್, ಆದರ್ಶ ಕಲ್ಯಾಣ ಮಂಟಪ ಭಾಗದಲ್ಲಿ ಕಟ್ಟಿಕೊಂಡು ರಸ್ತೆಗಳು ಗಬ್ಬೆದ್ದು ನಾರುತ್ತವೆ.

ಮಳೆ ಆರಂಭವಾಗುವ ಮುನ್ನವೇ ಚರಂಡಿ ಕಟ್ಟಿಕೊಳ್ಳುವಂತಹ ಜಾಗಗಳನ್ನು ಗುರುತಿಸಿ ನಗರಸಭೆ ಸಿಬ್ಬಂದಿ ಸ್ವಚ್ಛಗೊಳಿಸಬೇಕು. ಕಾಲುವೆಗಳು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ನನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ: 2011ರಲ್ಲಿ ನಗರಕ್ಕೆ ₹ 95 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಮಾಡಲಾಗಿತ್ತು. 264 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪೈಪ್ಲೈನ್ ಅಳವಡಿಸಿತ್ತು. ಈ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ನಗರದ ಒಳಚರಂಡಿ ವ್ಯವಸ್ಥೆ ಈವರೆಗೂ ಸರಿಯಾಗಿಲ್ಲ. ಇನ್ನು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ನಗರದಾದ್ಯಂತ 35 ವಾರ್ಡ್ಗಳಿದ್ದು, ಬಹುತೇಕ ಬಡಾವಣೆಗಳಲ್ಲಿ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ತ್ಯಾಜ್ಯದ ರಾಶಿಯೂ ತುಂಬಿಕೊಂಡು ಸರಾಗವಾಗಿ ಹರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 6,500ಕ್ಕೂ ಹೆಚ್ಚು ಮ್ಯಾನ್ಹೋಲ್ಗಳಿದ್ದು, ಮಳೆಗಾಲದಲ್ಲಿ ಉಕ್ಕಿ ಹರಿಯುತ್ತವೆ. ಸಿಸಿ ರಸ್ತೆ ನಿರ್ಮಿಸುವ ವೇಳೆ ಮ್ಯಾನ್ ಹೋಲ್ಗಳನ್ನು ರಸ್ತೆ ಮಧ್ಯೆಯೇ ಮಾಡಲಾಗಿದೆ. ಹೀಗಾಗಿ ಅವು ಉಕ್ಕಿದರೆ ರಸ್ತೆಯಾದ್ಯಂತ ದುರ್ವಾಸನೆ ಹರಡುತ್ತದೆ.

ಕೆಲವು ಕಡೆ ಮ್ಯಾನ್ಹೋಲ್ಗಳು ಮೇಲೆದ್ದು ಬಂದಿದ್ದು ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಸ್, ಕಾರು ಇತರೆ ವಾಹನಗಳು ಇವುಗಳಲ್ಲಿ ಸಿಲುಕಿಕೊಳ್ಳುತ್ತಿವೆ. ದ್ವಿಚಕ್ರ ವಾಹನ ಸವಾರರು ಮತ್ತು ವೃದ್ಧರು ಬಿದ್ದು, ಕೈಕಾಲಿಗೆ ಪೆಟ್ಟು ಮಾಡಿಕೊಂಡ ನಿದರ್ಶನಗಳಿವೆ. ನಗರದಾದ್ಯಂತ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಕಾರಣ ತ್ಯಾಜ್ಯ ಹಾಗೂ ಮಳೆ ನೀರು ಸಮರ್ಪಕವಾಗಿ ಹರಿಯದಾಗಿದೆ. ತೆರೆದ ಚರಂಡಿಯಲ್ಲಿ ಹರಿಯುವ ಕೊಳಚೆ ನೇರವಾಗಿ ಮಲ್ಲಾಪುರ ಕೆರೆ ಸೇರಿ ಅಲ್ಲಿನ ವಾತಾವರಣವನ್ನು ಕಲುಷಿತಗೊಳಿಸಿದೆ.

ಕೊಳಚೆ ನೀರು ಶುದ್ಧೀಕರಣಗೊಳಿಸಲು ಪಿಳ್ಳೆಕೇರನಹಳ್ಳಿ ಬಳಿ 5 ಎಕರೆಯಷ್ಟು ವಿಶಾಲ ಜಾಗದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. 20 ಎಂಎಲ್ಡಿ (ಮಿಲಿಯನ್ ಲೀಟರ್ ಪರ್ ಡೇ) ಸಾಮರ್ಥ್ಯದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ನಗರದ ಎಲ್ಲಾ ಒಳಚರಂಡಿ ನೀರನ್ನು ಈ ಘಟಕಕ್ಕೆ ತಿರುಗಿಸಿದರೆ ನಗರದಾದ್ಯಂತ ಕೊಳಚೆ ನೀರು ಸಮಸ್ಯೆಯೇ ಇರುವುದಿಲ್ಲ. ಆದರೆ ನೀರು ಎಸ್ಟಿಪಿ ಘಟಕಕ್ಕೆ ಹರಿಯದೇ ಮಲ್ಲಾಪುರ ಕೆರೆಗೆ ಹರಿಯುತ್ತಿದೆ. ಇದರಿಂದ ಸುತ್ತಮುತ್ತ ಇರುವ ಬಡಾವಣೆ, ಹಳ್ಳಿಗಳ ಜನರಿಗೆ ರೋಗಭೀತಿ ಎದುರಾಗಿದೆ.

ಮುಂಜಾಗ್ರತಾ ಕ್ರಮ ಕೈಗೊಳ್ಳಲು ಒತ್ತಾಯ

ಚಳ್ಳಕೆರೆ: ತಾಲ್ಲೂಕಿನಾದ್ಯಂತ ಕಳೆದ ನಾಲೈದು ದಿನಗಳಿಂದ ಭಾರಿ ಮಳೆಯಾಗಿದೆ. ಇದರಿಂದ ನಗರದ ಹಲವು ಕಡೆ ಚರಂಡಿ ಕಟ್ಟಿಕೊಳ್ಳುವುದು, ಮರಗಳು ಬಿದ್ದು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರದಲ್ಲಿರುವ ಎಲ್ಲಾ ಮೋರಿ, ಚರಂಡಿಗಳಲ್ಲಿ ಕಟ್ಟಿಕೊಂಡಿರುವ ಹೂಳು, ಕಸವನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರು ಹಾಕಬೇಕು. ನೀರು ನಿಲ್ಲುವ ತಗ್ಗು ಪ್ರದೇಶಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ನಗರದ ಬಳ್ಳಾರಿ ರಸ್ತೆ ಸೇರಿದಂತೆ ಕೆಲವು ಕಡೆ ಅಪಾಯಕಾರಿ ಸ್ಥಿತಿಯಲ್ಲಿರುವ, ಒಣಗಿದ ಮರದ ಕೊಂಬೆಗಳನ್ನು ಕತ್ತರಿಸಬೇಕು. ಅವು ಗಾಳಿ ಮಳೆಗೆ ಬಿದ್ದು ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನೀರು ಸರಬರಾಜು ಆಗುವ ಪೈಪ್ಗಳಿಗೆ ಚರಂಡಿ ನೀರು ಸೇರದಂತೆ ಕ್ರಮ ವಹಿಸಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ ನೀರು ನಿಲ್ಲುವ ಸ್ಥಳಗಳಿಗೆ ಔಷಧಿ ಸಿಂಪಡಣೆ ಮಾಡಬೇಕು. ಡೆಂಗಿ, ಮಲೇರಿಯಾ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.

'ಮಳೆ ನೀರಿನಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಭಾರಿ ಗಾಳಿ ಮಳೆ ಬಂದಾಗ ಮರಗಳು ಬಿದ್ದರೆ, ಮನೆ ಕುಸಿದರೆ, ವಿದ್ಯುತ್ ಕಂಬ ಬಿದ್ದರೆ ತಕ್ಷಣ ನಮ್ಮ ಸಿಬ್ಬಂದಿ ಜೊತೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜೊತೆಗೆ ಸಾರ್ವಜನಿಕರು ಸ್ಪಂದಿಸಿದರೆ ಯಾವ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು' ಎಂದು ನಗರಸಭೆ ಪೌರಾಯುಕ್ತ ನಾಗವೇಣಿ ತಿಳಿಸಿದರು.

ಮಳೆಯಿಂದ ಸಮಸ್ಯೆ ಸೃಷ್ಟಿಯಾದ ಬಗ್ಗೆ ಕರೆ ಬಂದ ಕೂಡಲೇ ಸ್ಪಂದಿಸಲಾಗುತ್ತಿದೆ. ನಗರದಾದ್ಯಂತ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ತ್ಯಾಜ್ಯವನ್ನು ಚರಂಡಿಗೆ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ
ಎಸ್.ಲಕ್ಷ್ಮಿ, ನಗರಸಭೆ ಪೌರಾಯುಕ್ತ

ಕೆರೆಯಂತಾಗುವ ಅಂಬೇಡ್ಕರ್ ವೃತ್ತ

ಹಿರಿಯೂರು: ಸಣ್ಣ ಪ್ರಮಾಣದ ಮಳೆ ಬಂದರೂ ಪ್ರವಾಸಿ ಮಂದಿರದ ಸಮೀಪ ಇರುವ ಬಾಬಾಸಾಹೇಬ್ ಅಂಬೇಡ್ಕರ್ ವೃತ್ತ ಕೆರೆಯಂತಾಗುತ್ತಿದ್ದು, ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ, ಚಳ್ಳಕೆರೆ ಕಡೆಯಿಂದ ಹಿರಿಯೂರು ನಗರಕ್ಕೆ ಪ್ರವೇಶಿಸಲು ರಾಷ್ಟ್ರೀಯ ಹೆದ್ದಾರಿ 48ಕ್ಕೆ ಅಂಡರ್ ಪಾಸ್ ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಅಂಬೇಡ್ಕರ್ ವೃತ್ತವಿದೆ. ಬೆಸ್ಕಾಂ ಆಡಳಿತ ಕಚೇರಿಯಿಂದ ಅಂಡರ್ ಪಾಸ್ವರೆಗೆ ರಸ್ತೆ ಇಳಿಜಾರಿನಿಂದ ಕೂಡಿರುವ ಕಾರಣಕ್ಕೆ ಅಂದಾಜು ಒಂದೂವರೆ ಫರ್ಲಾಂಗು ದೂರದ ಮಳೆಯ ನೀರು ಅಂಡರ್ ಪಾಸ್ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಬಂದು ನಿಲ್ಲುತ್ತದೆ. ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ಈ ವೃತ್ತದ ಮೂಲಕ ಹಾದು ಹೋಗಲು ಭಯಪಡುವಂತಾಗಿದೆ ಎನ್ನುತ್ತಾರೆ ಮುಖಂಡ ರಾಘವೇಂದ್ರ.

ವೃತ್ತಕ್ಕೆ ಹೊಂದಿಕೊಂಡು ವಾಣಿವಿಲಾಸ ಎಡನಾಲೆ ಇದ್ದು, ಅಂಡರ್ ಪಾಸ್ನಿಂದ ಬರುವ ನೀರು ನಾಲೆಯತ್ತ ಹರಿದು ಹೋಗುವಂತೆ ಮಾಡಿದ್ದರೆ ವೃತ್ತದಲ್ಲಿ ನೀರು ನಿಲ್ಲುತ್ತಿರಲಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆಯ ನೀರು ಮೊಳಕಾಲುದ್ದ ನಿಲ್ಲುತ್ತದೆ. ಇದೇ ರೀತಿ ತಾಲ್ಲೂಕು ಕಚೇರಿ ಸಮೀಪ ಇರುವ ಹಳ್ಳಕ್ಕೆ ಎರಡೂ ಕಡೆಯ ರಸ್ತೆಗೆ ಸಮನಾಗಿ ಎತ್ತರಿಸಿ ಸೇತುವೆ ನಿರ್ಮಿಸುವ ಬದಲು ತಗ್ಗಿನಲ್ಲಿ ಸೇತುವೆ ನಿರ್ಮಿಸುತ್ತಿರುವ ಕಾರಣ ತಾಲ್ಲೂಕು ಕಚೇರಿ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದ ಸುತ್ತಮುತ್ತಲ ಮಳೆಯ ನೀರು ಒಮ್ಮೆಗೆ ಬಂದರೆ ರಸ್ತೆ ನೀರಿನಲ್ಲಿ ಮುಳುಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.