ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅತ್ಯಾಚಾರ ಪ್ರಕರಣದ ತನಿಖೆ ಪೂರ್ಣ

ಬಾಲಕಿಯ ಮೇಲೆ ನಡೆದ ಕೃತ್ಯ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ
Last Updated 30 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹಿರ್ದೆಸೆಗೆ ತೆರಳಿದ್ದ 13 ವರ್ಷದ ಬಾಲಕಿಯ ಮೇಲೆ ಹಾಡಹಗಲೇ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಜ್ಜಾಗಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಇದು ನ್ಯಾಯಾಧೀಶರ ಕೈಸೇರುವ ಸಾಧ್ಯತೆ ಇದೆ.

ಭರಮಸಾಗರ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಜುಲೈ 23ರಂದು ಮಧ್ಯಾಹ್ನ 12.30ಕ್ಕೆ ಈ ಕೃತ್ಯ ನಡೆದಿತ್ತು. ಅತ್ಯಾಚಾರ ಎಸಗಿದ ಆರೋಪಿ ಬಾಲಕಿಯನ್ನು ಕೊಲೆ ಮಾಡಿದ್ದನು. ಅಮಾನುಷ ಘಟನೆಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

‘ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೆಲ ವಿವರಗಳ ಅಗತ್ಯವಿರುವುದರಿಂದ ಮರುಪರಿಶೀಲಿಸುವಂತೆ ವೈದ್ಯರಿಗೆ ಕೋರಿಕೊಳ್ಳಲಾಗಿದೆ. ಎರಡು ದಿನದಲ್ಲಿ ಮರಣೋತ್ತರ ಪರೀಕ್ಷೆಯ ಮರು ವರದಿ ಬರಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.

ಕೊಲೆ, ಅತ್ಯಾಚಾರದಂತಹ ಅಮಾನುಷ ಪ್ರಕರಣಗಳ ವಿಲೇವಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತದೆ. ಪ್ರಕರಣದ ತನಿಖೆಗೆ 90 ದಿನಗಳ ಕಾಲಮಿತಿಯನ್ನು ಪೊಲೀಸ್‌ ಇಲಾಖೆ ನಿಗದಿಪಡಿಸಿದೆ. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಹತ್ತು ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ಘಟನೆ ನಡೆದ ನಾಲ್ಕು ದಿನಗಳಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದರು. ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಪಕ್ಕದ ಮನೆಯಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ತಿಂಗಳು ಕಳೆದಿದೆ.

ಕಡು ಬಡತನದ ಕುಟುಂಬದಲ್ಲಿ ಬೆಳೆದ ಬಾಲಕಿ ಅಂದು ಮಧ್ಯಾಹ್ನ ಬಹಿರ್ದೆಸೆಗೆ ತೆರಳಿದ್ದಳು. ಮನೆ ನಿರ್ಮಾಣ ಹಂತದಲ್ಲಿದ್ದ ಕಾರಣಕ್ಕೆ ಇಡೀ ಕುಟುಂಬ ಸಮುದಾಯ ಭವನದಲ್ಲಿ ವಾಸವಿತ್ತು. ಇಲ್ಲಿ ಶೌಚಾಲಯ, ಸ್ನಾನದ ಕೊಠಡಿಯ ವ್ಯವಸ್ಥೆ ಇರಲಿಲ್ಲ. ಮನೆಯಿಂದ ನೂರು ಮೀಟರ್‌ ದೂರದ ಮೆಕ್ಕೆಜೋಳದ ಹೊಲವೇ ಬಹಿರ್ದೆಸೆ ಜಾಗವಾಗಿತ್ತು. ನಿತ್ಯ ತಾಯಿಯೊಂದಿಗೆ ಬಹಿರ್ದೆಸೆಗೆ ತೆರಳುತ್ತಿದ್ದ ಬಾಲಕಿ ಅಂದು ಒಂಟಿಯಾಗಿ ಇರುವುದನ್ನು ಗಮನಿಸಿದ ಆರೋಪಿ ಹೊಂಚು ಹಾಕಿ ಕೃತ್ಯ ಎಸಗಿದ್ದನು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಘಟನಾ ಸ್ಥಳದ ಮಹಜರು ನಡೆಸಿ ಸಾಕ್ಷ್ಯ ಕಲೆಹಾಕಿದ್ದರು. ಬಂಧನವಾದ ಎರಡೇ ವಾರದಲ್ಲಿ ತನಿಖೆ ಬಹುತೇಕ ಪೂರ್ಣಗೊಂಡಿತ್ತು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಮಾದರಿಗಳ ವರದಿಗಾಗಿ ಪೊಲೀಸರು ಕಾಯುತ್ತಿದ್ದರು.

ಎಫ್‌ಎಸ್‌ಎಲ್‌ ವರದಿ ವಿಳಂಬ

ಅಪರಾಧ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಬಲ್ಲ ವಿಧಿವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್‌) ಪಡೆಯುವುದು ವಿಳಂಬವಾಗುತ್ತಿದೆ. ಇದು ಪ್ರಕರಣದ ತನಿಖೆ, ನ್ಯಾಯದಾನ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುತ್ತಿದೆ.

ಇಸಾಮುದ್ರ ಲಂಬಾಣಿಹಟ್ಟಿಯಲ್ಲಿ ಊಟ ಸೇವಿಸಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಜುಲೈ 13ರಂದು ಮೃತಪಟ್ಟಿದ್ದರು. ಸಾವಿಗೆ ವಿಷಾಹಾರವೇ ಕಾರಣ ಎಂದು ಮೇಲ್ನೋಟಕ್ಕೆ ಕಾಣಿಸಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಊಟದ ಮಾದರಿಗಳನ್ನು ಪೊಲೀಸರು ಎಫ್‌ಎಸ್‌ಎಲ್‌ ಹಾಗೂ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದರ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ.

* ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅತ್ಯಾಚಾರ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗುವುದು.

- ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT