ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ನರಳುತ್ತಿವೆ ಶಿಲಾ ಶಾಸನ, ಶಿಲ್ಪ ಕಲಾಕೃತಿ

Published 21 ಆಗಸ್ಟ್ 2024, 6:55 IST
Last Updated 21 ಆಗಸ್ಟ್ 2024, 6:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಸ ತಲೆಮಾರಿನವರಿಗೆ ಇತಿಹಾಸ ಪರಿಚಯಿಸಬೇಕಿದ್ದ ನಗರದ ಪ್ರಾಚ್ಯವಸ್ತು ಸಂಗ್ರಹಾಲಯ ಸುಸಜ್ಜಿತ ಜಾಗದ ಕೊರತೆಯಿಂದ ಅಜ್ಞಾತವಾಗಿಯೇ ಉಳಿದಿದೆ. ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ಕೂಗಿ ಹೇಳಬೇಕಾಗಿದ್ದ ಸಾವಿರಾರು ಶಾಸನ, ಶಿಲ್ಪಕಲಾಕೃತಿಗಳು ಕೇವಲ 2 ಕೊಠಡಿಯೊಳಗೆ ಬಂಧಿಯಾಗಿ ನರಳುತ್ತಿವೆ.

ಶಾತವಾಹನರಿಂದ ನಾಯಕ ಅರಸರವರೆಗೂ ಚಿತ್ರದುರ್ಗ ಹಲವು ರಾಜ- ಮಹಾರಾಜರ ಆಳ್ವಿಕೆಗೆ ಒಳಪಟ್ಟಿತ್ತು. ರಾಜಾಳ್ವಿಕೆಯ ಕುರುಹುಗಳು ಇಂದಿಗೂ ಜೀವಂತವಾಗಿ ಉಳಿದಿವೆ. ಶಿಲಾಯುಗದ ಪಳಯುಳಿಕೆಗಳು ಕೂಡ ಉತ್ಖನನದ ವೇಳೆ ಪತ್ತೆಯಾಗಿವೆ. ಶಾಸನ, ದೇವರ ಮೂರ್ತಿ, ಶಿಲ್ಪಕಲಾಕೃತಿ, ತಾಳೆಗರಿ ಹಸ್ತಪ್ರತಿ ಸೇರಿ ಸಾವಿರಾರು ಕುರುಹುಗಳು, ಸ್ಮಾಕರಗಳು ಶತಮಾನಗಳ ಪರಂಪರೆಯ ಮೇಲೆ ಬೆಳಕು ಚೆಲ್ಲುತ್ತಿವೆ.

ಸ್ಥಳೀಯ ಆಡಳಿತ ವ್ಯವಸ್ಥೆ ಈ ಸ್ಮಾರಕಗಳಿಗೊಂದು ಸ್ಥಳ ನೀಡದ ಕಾರಣ ಪಳಯುಳಿಕೆಗಳು ದೂಳು ತಿನ್ನುತ್ತಿವೆ. ಕೋಟೆಯ ರಂಗಯ್ಯನ ಬಾಗಿಲು ಕೆಳಗಿರುವ 2 ಸಣ್ಣ ಕೊಠಡಿಯೊಳಗೆ ಸ್ಮಾಕರಗಳನ್ನು ಇಡಲಾಗಿದ್ದು ಯಾರ ಕಣ್ಣಿಗೂ ಬೀಳದಾಗಿದೆ. ಸ್ಟೋರ್‌ ರೂಮ್‌ನಂತಿರುವ ಕತ್ತಲ ಕೋಣೆಯಲ್ಲಿ ಅಪರೂಪದ ಸ್ಮಾರಗಳನ್ನು ‘ಬಂಧಿಸಿಟ್ಟಿರುವುದು’ ಇತಿಹಾಸಪ್ರಿಯರಿಗೆ ನೋವುಂಟು ಮಾಡಿದೆ.

ಇಲ್ಲಿಯ ಸ್ಮಾಕಗಳನ್ನು ರಾಜ್ಯ ಪುರಾತತ್ವ ಇಲಾಖೆ ನಿರ್ವಹಿಸುತ್ತಿದೆ. ದಶಕಗಳಿಂದಲೂ ಸ್ಥಳೀಯ ಆಡಳಿತ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಭೂಮಿ ನೀಡದೇ ನಿರ್ಲಕ್ಷಿಸುತ್ತಲೇ ಬಂದಿದೆ. ಹೀಗಾಗಿ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಮಾರಕಗಳನ್ನು 15X20 ಅಡಿ ಅಳತೆಯ ಕೊಠಡಿಯೊಳಗೆ ತುಂಬಿದ್ದು ಸ್ಮಾರಕಗಳು ಜನರ ಕಣ್ಣಿಗೆ ಬೀಳದಾಗಿವೆ. ಕನಿಷ್ಠ ಫಲಕವನ್ನೂ ಅಳವಡಿಸದ ಕಾರಣ ವಸ್ತು ಸಂಗ್ರಹಾಲಯದ ಪರಿಚಯ ಸ್ಥಳೀಯರಿಗೂ ಇಲ್ಲದಾಗಿದೆ.

ಕೊಠಡಿಯೊಳಗಿಟ್ಟು ಉಳಿಕೆಯಾದ ಸ್ಮಾರಕಗಳನ್ನು ರಂಗಯ್ಯನ ಬಾಗಿಲು ಗೋಡೆಯ ಬದಿಯಲ್ಲಿ ಜೋಡಿಸಿ ಇಡಲಾಗಿದೆ. ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲು, ಮಹಾಸತಿಗಲ್ಲು ಸೇರಿದಂತೆ ಅಲ್ಲಿ ನೂರಾರು ಸ್ಮಾರಕಗಳಿವೆ. ಅಲ್ಲೂ ಜಾಗ ಸಾಕಾಗದೇ ಮತ್ತಷ್ಟು ಸ್ಮಾರಕಗಳನ್ನು ಸಮೀಪದ ಉದ್ಯಾನದಲ್ಲಿ ಇಡಲಾಗಿದೆ. ಯಾವುದೇ ರಕ್ಷಣೆಯೂ ಇಲ್ಲದ ಕಾರಣ ಶಾಸನಗಳು ಮಳೆ, ಬಿಸಿಲಿಗೆ ಸವೆಯುತ್ತಿವೆ. ಪಾಚಿ ಕಟ್ಟಿಕೊಂಡಿರುವ ಕಾರಣ ಕಲ್ಲಿನ ಬಣ್ಣ ಮಾಸಿದೆ.

ಅಪರೂಪದ ಸ್ಮಾರಕ; ಕೊಠಡಿಯೊಳಗೆ ಸೋಜಿಗ ಎನಿಸುವ ಹಲವು ಅಪರೂಪದ ಪಳಯುಳಿಕೆಗಳಿವೆ. ನಾಯಕ ಅರಸರು ಬಳಸುತ್ತಿದ್ದ ಕತ್ತಿ, ಗುರಾಣಿ, ಫಿರಂಗಿ, ಗುಂಡು, ಚಂದ್ರಾಯುಧ, ಭರ್ಜಿಗಳಿವೆ. ಆಗಿನ ಕಾಲದ ಜನರು ಬಳಸುತ್ತಿದ್ದ ಸೇರು, ಪಾವು, ಪಿಂಗಾಣಿ ಪಾತ್ರೆಗಳಿವೆ. ನಾಯಕರ ಅಪರೂಪದ ಛಾಯಾಚಿತ್ರಗಳನ್ನೂ ಇಲ್ಲಿ ಇಡಲಾಗಿದೆ.

ಜಿಲ್ಲೆಯ ವಿವಿಧೆಡೆ ಸಿಕ್ಕ ಕಲ್ಲಿನ ವಿಗ್ರಹಗಳನ್ನು ಸಂಗ್ರಹಿಡಲಾಗಿದೆ. ರುಂಡಮಾಲ ಆಂಜನೇಯ ಮೂರುತಿ ಭಕ್ತಿ ಭಾವ ಮೂಡಿಸುತ್ತದೆ. ನಾಯಕರು ಬಳಸುತ್ತಿದ್ದರು ಎನ್ನಲಾದ ಬೆಟ್ಟದ ಸಂಪಿಗೆ ಹೂವನ್ನು ಸಂಗ್ರಹಿಸಿಡಲಾಗಿದೆ. ಜೈನ ಧರ್ಮದ ಹಲವು ವಿಗ್ರಹಗಳು ಇಲ್ಲಿವೆ. ರಘುವಂಶ ಕಾವ್ಯ, ಭಾಗವತ, ವಚನ ಭಾರತ, ಸ್ಕಂದಪುರಾಣ, ಜೋತಿಷ್ಯ ಶಾಸ್ತ್ರ ಮುಂತಾದ ತಾಳೆಗರಿ ಗ್ರಂಥಗಳನ್ನೂ ಇಲ್ಲಿಡಲಾಗಿದೆ.

ಹೆಳವನಕಟ್ಟೆ ಗಿರಿಯಮ್ಮ ಅವರ ಕೈಬರಹದ ‘ಚಂದ್ರಹಾಸ ಸಾಂಗತ್ಯ‘ ಹಸ್ತಪ್ರತಿ ಇಲ್ಲಿರುವ ಅಪರೂಪದ ಕೃತಿ. ನವ ಶಿಲಾಯುಗದ ಆಯುಧಗಳು, ಮಡಕೆ, ಮಣ್ಣಿನ ಪಾತ್ರೆ, ತಾಮ್ರ–ಸೀಸದ ನಾಣ್ಯಗಳು, ಮಣ್ಣಿನ ಆಭರಣಗಳು ಕೂಡ ಇಲ್ಲಿವೆ. ಚಂದ್ರವಳ್ಳಿ ನಾಣ್ಯಗಳು, ಬ್ರಹ್ಮಗಿರಿ ಶಾಸನ, ಹುಲೇಗೊಂಧಿ ಶಾಸನಗಳಿವೆ.

‘1950ರಲ್ಲೇ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಿದ್ದು ಸ್ಮಾರಕಗಳನ್ನು ಪ್ರದರ್ಶನಕ್ಕಿಡಲು ಕನಿಷ್ಠ 5 ಎಕರೆ ಜಾಗಬೇಕು. ದಶಕದಿಂದಲೂ ಜಾಗ ನೀಡಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತದೆ. ಪ್ರಯತ್ನಪಟ್ಟರೆ ಅಂತರರಾಷ್ಟ್ರೀಯ ಗುಣಮಟ್ಟದ ವಸ್ತು ಸಂಗ್ರಹಾಲಯ ಅಭಿವೃದ್ಧಿಗೊಳಿಸಬಹುದು’ ಎಂದು ಯುವ ಸಂಶೋಧಕ ಎನ್‌.ಎಸ್‌.ಮಹಾಂತೇಶ್‌ ಹೇಳಿದರು.

ಕಲಾಕೃತಿಗಳನ್ನು ಇಟ್ಟಿರುವುದು ಕೊಠಡಿಯ ದುಸ್ಥಿತಿ
ಕಲಾಕೃತಿಗಳನ್ನು ಇಟ್ಟಿರುವುದು ಕೊಠಡಿಯ ದುಸ್ಥಿತಿ
ನಾಯಕ ಅರಸರು ಬಳಸುತ್ತಿದ್ದ ಉಕ್ಕಿನ ಕವಚವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿರುವುದು
ನಾಯಕ ಅರಸರು ಬಳಸುತ್ತಿದ್ದ ಉಕ್ಕಿನ ಕವಚವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿರುವುದು
ತಾಳೆಗರಿ ಹಸ್ತಪ್ರತಿಗಳು ಸುರಕ್ಷಿತವಾಗಿರುವುದು
ತಾಳೆಗರಿ ಹಸ್ತಪ್ರತಿಗಳು ಸುರಕ್ಷಿತವಾಗಿರುವುದು
ಗಮನ ಸೆಳೆಯುತ್ತಿರುವ ಮಸೀದಿ ಕಲಾಕೃತಿ
ಗಮನ ಸೆಳೆಯುತ್ತಿರುವ ಮಸೀದಿ ಕಲಾಕೃತಿ

Highlights - ಸ್ಥಳೀಯರಿಗೂ ಸ್ಮಾರಕ ಸಂಗ್ರಹದ ಮಾಹಿತಿ ಇಲ್ಲ ಪುರಾತತ್ವ ಇಲಾಖೆಯಿಂದ ಫಲಕವನ್ನೂ ಅಳವಡಿಸಿಲ್ಲ ಕತ್ತಲೆ ಕೋಣೆಯೊಳಗೆ ದೂಳು ಹಿಡಿಯುತ್ತಿರುವ ಕಲಾಕೃತಿಗಳು

Quote - ಕಲ್ಲಿನ ಕೋಟೆ ಎದುರಿನ ಫಿಲ್ಟರ್‌ ಹೌಸ್‌ ಇರುವ 100X80 ಅಳತೆಯ ಜಾಗದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಡಿಪಿಆರ್‌ ಸಿದ್ಧಗೊಳ್ಳುತ್ತಿದೆ –ಜಿ.ಪ್ರಹ್ಲಾದ್‌ ಸಹಾಯಕ ನಿರ್ದೇಶಕ ಪುರಾತತ್ವ ಇಲಾಖೆ

Cut-off box - ಮಸೀದಿಯ ಆಕರ್ಷಣೆ ಕಳ್ಳತನವಾಗಿ ನಂತರ ಪೊಲೀಸರಿಗೆ ಸಿಕ್ಕ ಹಲವು ಶಿಲ್ಪಾ ಕಲಾಕೃತಿಗಳನ್ನು ಈ ಕೊಠಡಿಗಳಲ್ಲಿ ಇಡಲಾಗಿದೆ. ಅದರಲ್ಲಿ ಮಸೀದಿ ಕಲಾಕೃತಿಯೂ ಒಂದಾಗಿದ್ದು ಬಳಪದ ಕಲ್ಲಿನ ಸುಂದರ ಕೆತ್ತನೆ ಗಮನ ಸೆಳೆಯುತ್ತದೆ. ಲಕ್ಷ್ಮಿ ಕಾವೇರಿ ಶಾರದೆ ಹಾಗೂ ಬುದ್ಧನ ವಿಗ್ರಹಗಳು ಕೂಡ ನೋಡುಗರ ಮನಸೂರೆಗೊಳ್ಳುತ್ತವೆ. ಯುದ್ಧದಲ್ಲಿ ಸತ್ತ ಕುದುರೆಯ ಹಲ್ಲುಗಳನ್ನು ಕೂಡ ಸಂಗ್ರಹ ಮಾಡಿ ಇಟ್ಟಿರುವುದು ವಿಶೇಷಗಳಲ್ಲೊಂದು.

Cut-off box - ಅರಸರ ಉಕ್ಕಿನ ಕವಚ ನಾಯಕ ಅರಸರು ಯುದ್ಧದ ಸಂದರ್ಭದಲ್ಲಿ ಧರಿಸುತ್ತಿದ್ದ ಉಕ್ಕಿನ ಕವಚ ಕೂಡ ಕೊಠಡಿಯೊಳಗಿದೆ. ನಾಯಕರ ಆಯುಧಗಳನ್ನು ಗಾಜಿನ ಶೋಕೇಸ್‌ನಲ್ಲಿ ಸಂಗ್ರಹ ಮಾಡಿ ಇಡಲಾಗಿದೆ. ಆದರೆ ಸುಸಜ್ಜಿತ ವಸ್ತು ಸಂಗ್ರಹಾಲಯ ಇಲ್ಲದಿರುವುದು ಈ ಅಪರೂಪದ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT