ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಬೂಜ ಹಣ್ಣು ತಿನ್ನೋಣ ಬನ್ನಿ...

ಅಕ್ಷರ ಗಾತ್ರ

ಹೆಚ್ಚು ಉಷ್ಣಾಂಶ ಮತ್ತು ಒಣ ವಾತಾವರಣದಲ್ಲಿ ಸುಲಭವಾಗಿ ಬೆಳೆಯುವ ಕರಬೂಜ ಹಣ್ಣು (ಮಸ್ಕ್‌ಮೆಲನ್) ನೋಡಿದೊಡನೆ ಒಂಥರಾ ಒರಟು ಅನ್ನಿಸಿದರೂ ಅದರ ಮೇಲಿನ ಸರಳ ಚಿತ್ತಾರ ನಮ್ಮನ್ನು ಆಕರ್ಷಿಸುತ್ತದೆ. ಹೊರಗಿನ ಸಿಪ್ಪೆ ಒರಟಾಗಿದ್ದರೂ ಆದರ ಒಳಭಾಗದ ನುಣ್ಣನೆಯ ಕೇಸರಿ ಮಿಶ್ರಿತ ಹಳದಿ ಅಥವಾ ನಸುಕೆಂಪು ಬಣ್ಣದ ತಿರುಳು ಮಾತ್ರ ಮನಸ್ಸಿಗೆ ಮತ್ತು ದೇಹಕ್ಕೆ ಎರಡಕ್ಕೂ ತಂಪು ನೀಡುತ್ತದೆ.

ಕರಬೂಜ ಹಣ್ಣಿನಲ್ಲಿ ವಿವಿಧ ತಳಿಗಳು ಲಭ್ಯವಿದ್ದು ಕರ್ನಾಟಕದಲ್ಲಿ ಕಾವೇರಿ, ಗಂಜಾಂ ಜಾಮ್ ಮತ್ತು ಬನಾಸ್ಪತ್ರಿ ಎನ್ನುವ ತಳಿಗಳನ್ನು ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ನಸು ಹಳದಿ ಬಣ್ಣದಲ್ಲಿರುವ ದುಂಡನೆಯ ಆಕಾರದ ಈ ಹಣ್ಣು ಕನಿಷ್ಠ ಸುಮಾರು 500ಗ್ರಾಂನಿಂದ 4 ಕಿಲೋವರೆಗೂ ತೂಗುತ್ತದೆ.

ಕರಬೂಜ ಕುಕುರ್ಬಿಟೇಸಿ ಕುಟುಂಬದ ಕುಕುಮಸ್ ಜಾತಿಯ ಮೆಲೊ ಪ್ರಭೇದಕ್ಕೆ ಸೇರಿದ ಹಣ್ಣಾಗಿದ್ದು ಇದರ ಸಸ್ಯ ನೆಲದ ಮೇಲೆ ಹರಡಿಕೊಂಡೇ ಬೆಳೆಯುತ್ತದೆ. ಬೇಸಿಗೆಯ ಕಾಲಕ್ಕೆ ಇದರ ಪಾನಕವನ್ನು ಮಾಡಿ ಕುಡಿಯುತ್ತಾರೆ ಅದಕ್ಕೆ ಹಾಲು ಸಕ್ಕರೆ ಬೆರೆಸಿ ಕುಡಿದರೆ ಆ ರುಚಿಯೇ ಅನನ್ಯ. ಕರಬೂಜದ ಕಾಯಿಗಳನ್ನು ತರಕಾರಿಯಾಗಿಯೂ ಉಪಯೋಗಿಸುತ್ತಾರೆ.

ಕರಬೂಜ ಹಣ್ಣಿನಲ್ಲಿ ಜಾಸ್ತಿ ನೀರಿನಂಶವಿದ್ದು ಸ್ವಲ್ಪ ಪ್ರಮಾಣದಲ್ಲಿ ಪ್ರೊಟೀನ್‌, ವಿಟಮಿನ್ ಎ, ಬಿ ಮತ್ತು ಸಿ, ಕ್ಯಾಲ್ಸಿಯಂ, ಕೊಬ್ಬು, ಪೊಟಾಶಿಯಂ, ಕಬ್ಬಿಣ ಹೊಂದಿದೆ. ಹಳದಿ ಬಣ್ಣದ ಕರಬೂಜ ತಳಿಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿಯೇ ಇರುತ್ತದೆ.ಈ ಹಣ್ಣಿನ ಸೇವನೆಯಿಂದ ಎದೆ ಉರಿಯನ್ನು ಮತ್ತು ಹೊಟ್ಟೆ ಉರಿಯನ್ನು  ಕಡಿಮೆ ಮಾಡಿಕೊಳ್ಳಬಹುದು. ನೀರಿನಂಶ ಹೆಚ್ಚಾಗಿರುವುದರಿಂದ ಜೀರ್ಣ ಕ್ರಿಯೆಯನ್ನು ಸುಲಭ ಗೊಳಿಸುತ್ತದೆ ಆಸಿಡಿಟಿ ಸಮಸ್ಯೆ ನಿವಾರಿಸುತ್ತದೆ. ಮೂತ್ರಕೋಶದಲ್ಲಿ ಇರುವ ಕಲ್ಮಶಗಳನ್ನು ಸ್ವಚ್ಛಗೊಳಿಸಲು ಇದು ಸಹಕಾರಿ.

ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸಲು ಇದು ಸಹಕಾರಿ. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿಲ್ಲ. ಕ್ಯಾಲೊರಿ ಮತ್ತು ಕೊಬ್ಬುಗಳ ಪ್ರಮಾಣವೂ ಕಡಿಮೆ ಹಾಗಾಗಿ ಸ್ಥಿರ ಆರೋಗ್ಯವನ್ನು ಪಡೆಯಲು ತೂಕ ಇಳಿಸಿಕೊಳ್ಳಲು ಇದು ಸಹಕಾರಿ. ತ್ವಚೆಯ ಆರೋಗ್ಯ ಕಾಪಾಡುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ವಿಟಮಿನ್ ಎ ಮತ್ತು ಸಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಇದರಲ್ಲಿನ ಪೊಟಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.

ಮಧುಮೇಹ ನಿಯಂತ್ರಿಸುವಲ್ಲಿಯೂ ಸಹಾಯ ಮಾಡುವ ಕರಬೂಜ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಮಲಬದ್ಧತೆ ತಡೆಯುತ್ತದೆ. ಕಜ್ಜಿ ಗಜಕರ್ಣದಂತಹ ಸಮಸ್ಯೆಗಳನ್ನು ಕರಬೂಜ ಜ್ಯೂಸ್‍ನ ನಿರಂತರ ಸೇವನೆಯಿಂದ ವಾಸಿ ಮಾಡಿಕೊಳ್ಳಬಹುದು. ಇದರಲ್ಲಿನ ವಿಟಮಿನ್ ‘ಸಿ’ ಮತ್ತು ಬೀಟಾ ಕೆರೋಟಿನ್ ಎನ್ನುವ ಆ್ಯಂಟಿ ಆಕ್ಸಿಡೆಂಟ್ ಅಂಶ ಕ್ಯಾನ್ಸರ್ ಕಾರಕ ಕಣಗಳನ್ನು ದೂರವಿಡುವ ಶಕ್ತಿ ಹೊಂದಿದೆ. ಹಾಗಾಗಿ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿಯೂ ಈ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ತಲೆಕೂದಲ ಸಂರಕ್ಷಣೆಗೂ ಇದರ ತಿರುಳಿನ ಮಸಾಜ್ ಒಳ್ಳೆಯದು. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಮದ್ದು. ಕರಬೂಜದ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಆರಿಸಿದ ಸೋಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುನೋವು ನಿಯಂತ್ರಣಕ್ಕೆ ಬರಬಲ್ಲುದು.
ಇಷ್ಟೆಲ್ಲಾ ಈ ಹಣ್ಣಿನಿಂದ ಸಿಗುತ್ತದೆ ಎಂದಾದ ಮೇಲೆ ಇದನ್ನು ತಿನ್ನದಿದ್ದರೆ ನಮಗೆ ನಷ್ಟ ಅಲ್ಲವೆ? ಹಾಗಾಗಿ ಆಗಾಗ್ಗೆ ಕರಬೂಜ ತಿನ್ನೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT