ಶುಕ್ರವಾರ, ಡಿಸೆಂಬರ್ 2, 2022
20 °C
ಜಮೀನು ಇರುವವರು ಹೊಲದಲ್ಲಿ ಅಂತ್ಯಕ್ರಿಯೆ; ಇರದವರಿಗೆ ಹಳ್ಳದ ದಿಣ್ಣೆಯೇ ಗತಿ!

ಚಳ್ಳಕೆರೆ: ಮ್ಯಾಸಬೇಡರ ಹದಿನೆಂಟು ಹಟ್ಟಿಗಳಲ್ಲಿಲ್ಲ ಸ್ಮಶಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ತಾಲ್ಲೂಕಿನ ಮ್ಯಾಸಬೇಡ ಬುಡಕಟ್ಟು ಸಮುದಾಯದ ಹದಿನೆಂಟಕ್ಕೂ ಹೆಚ್ಚು ಹಟ್ಟಿಗಳಲ್ಲಿ ಸ್ಮಶಾನಕ್ಕೆ ಜಾಗ ಇರದಿರುವುದರಿಂದ ಇಲ್ಲಿ ಯಾರಾದರೂ ಮೃತಪಟ್ಟರೆ ಹೊಲದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕಾದ ಅನಿವಾರ್ಯತೆ ಇದೆ.

ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆತ್ತಮ್ಮನವರಹಟ್ಟಿ, ಎತ್ತಿನಗೌಡರಹಟ್ಟಿ, ಉಡೇದರಹಟ್ಟಿ, ತೋಡ್ಲರಹಟ್ಟಿಯ ಬಂಗಾರ ದೇವರಹಟ್ಟಿ, ದೇಶಪ್ಪನಹಟ್ಟಿ, ಗಡ್ಡದರಹಟ್ಟಿ, ಕಾವಲೋರಹಟ್ಟಿ, ಕೂರೋಬಯ್ಯನಹಟ್ಟಿ, ದೊರೆಹಟ್ಟಿ, ಕರೇಕಾಟ್ಲಹಟ್ಟಿ, ಮೇಗಳಹಟ್ಟಿ, ಕುರಿತಮ್ಮಯ್ಯನಹಟ್ಟಿ, ನಕ್ಲಲೋರಹಟ್ಟಿ, ಚಿಕ್ಕಾಟಲಹಟ್ಟಿ, ಕುಕ್ಕಲೋರಹಟ್ಟಿ, ವರವಿನೋರಹಟ್ಟಿ, ಬೊಮ್ಮದೇವರಹಟ್ಟಿ ಸೇರಿ ಹದಿನೆಂಟಕ್ಕೂ ಹೆಚ್ಚು ಹಟ್ಟಿಗಳು ಸ್ಮಶಾನ ಜಾಗದಿಂದ ವಂಚಿತವಾಗಿವೆ. ಜನವಸತಿ ಪ್ರದೇಶದಲ್ಲಿ ಸ್ಮಶಾನ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬ ಸರ್ಕಾರದ ನಿಯಮ ಇಲ್ಲಿ ಪಾಲನೆಯಾಗಿಲ್ಲ.

ಸರ್ಕಾರಿ ಭೂಮಿ ಇಲ್ಲದ ಕಾರಣ ಸಮುದಾಯದವರು ಹೊಲದ ಬದು, ಬೆಳೆಗಳ ಮಧ್ಯದ ಜಾಗದಲ್ಲಿ ಮೃತ ದೇಹವನ್ನು ಹೂಳುವ ಮೂಲಕ ಅಂತ್ಯಕ್ರಿಯೆ ನಡೆಸುವಂತಾಗಿದೆ. ಜಮೀನು ಇಲ್ಲದವರು ಸಂಬಂಧಿಗಳ ಅನುಮತಿಯ ಮೇರೆಗೆ ಹೊಲದ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಇನ್ನು ಕೆಲವರು ಅಂತ್ಯಕ್ರಿಯೆಗಾಗಿ ಹಟ್ಟಿಯಿಂದ 4–5 ಕಿ.ಮೀ ದೂರದಲ್ಲಿರುವ ಹಳ್ಳದ ದಿಣ್ಣೆ, ಕೆರೆ, ಕಾಲುವೆಯ ಕೊರಕಲು ಪ್ರದೇಶದ ಹುಡುಕಾಟ ನಡೆಸಬೇಕಾಗಿದೆ.

ಪೂಜಾರಿ ಪಾಲಯ್ಯನಹಟ್ಟಿ, ಕಾವಲೋರಹಟ್ಟಿ ಬಳಿ ಸರ್ಕಾರಿ ಭೂಮಿ ಇದ್ದರೂ ಸ್ಮಶಾನ ನಿರ್ಮಿಸಿಲ್ಲ. ಇನ್ನುಳಿದ ಯಾವ ಹಟ್ಟಿಯಲ್ಲೂ ಸ್ಮಶಾನ ನಿರ್ಮಿಸಲು ಸರ್ಕಾರಿ ಭೂಮಿಯೇ ಇಲ್ಲ. ಗ್ರಾಮದ ಬಳಿ ಇದ್ದ 150 ಎಕರೆ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಲು ರೈತರಿಗೆ ನೀಡಲಾಗಿದೆ. ಆದರೆ, ಸ್ಮಶಾನಕ್ಕೆ ಜಾಗ ಮೀಸಲಿಟ್ಟಿಲ್ಲ’ ಎನ್ನುತ್ತಾರೆ ಬಂಗಾರ ದೇವರಹಟ್ಟಿಯ ನಿವಾಸಿ ಓಬಯ್ಯ.

‘ಸ್ಮಶಾನ ಜಾಗವನ್ನು ನಿಗದಿಪಡಿಸಿ, ಸುತ್ತ ಕಾಂಪೌಂಡ್ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ 2–3 ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದುವರೆಗೆ ಸ್ಮಶಾನಕ್ಕಾಗಿ ಯಾವುದೇ ಭೂಮಿಯನ್ನು ನಿಗದಿಪಡಿಸದ ಅಧಿಕಾರಿಗಳು ಬರೀ ನೆಪ ಹೇಳುತ್ತಿದ್ದಾರೆ’ ಎಂದು ತಾಲ್ಲೂಕಿನ ಪೆತ್ತಮ್ಮನವರಹಟ್ಟಿಯ ಯುವ ಮುಖಂಡ ಬಿ.ತಿಪ್ಪೇಸ್ವಾಮಿ ದೂರಿದರು.

‘ಸರ್ಕಾರಿ ಭೂಮಿ ಇಲ್ಲದಿದ್ದಲ್ಲಿ ಖಾಸಗಿ ಭೂಮಿಯನ್ನು ಖರೀದಿಸಬೇಕು. ಸ್ಮಶಾನ ನಿರ್ಮಿಸುವುದರ ಜತೆಗೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಬಂಗಾರದೇವರಹಟ್ಟಿ ಗ್ರಾಮದ ತಿಪ್ಪೇಸ್ವಾಮಿ, ಚಿನ್ನಪ್ಪ, ನಾಗರಾಜ, ಮಂಜುನಾಥ್, ಓಬಣ್ಣ ಆಗ್ರಹಿಸಿದರು.

ಕೋಟ್‌...

ನನ್ನಿವಾಳ ಗ್ರಾಮದ ವ್ಯಾಪ್ತಿಯಲ್ಲಿ ಮ್ಯಾಸಬೇಡ ಬುಡಕಟ್ಟು ಸಮುದಾಯದ 29 ಹಟ್ಟಿಗಳಿವೆ. ಪ್ರತಿ ಹಟ್ಟಿಗೆ ತಲಾ 2–3 ಎಕರೆ ಭೂಮಿಯನ್ನು ಸ್ಮಶಾನ ಜಾಗವನ್ನಾಗಿ ಕಂದಾಯ ಇಲಾಖೆ ನಿಗದಿಪಡಿಸಿದೆ.
ಎನ್. ರಘುಮೂರ್ತಿ, ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.