ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಗಳ ಹಾವಳಿ; ಗೋಳು ಕೇಳುವವರಾರು?

ಮೂರು ವರ್ಷಗಳಿಂದ ನಗರಸಭೆ ನಿರ್ಲಕ್ಷ್ಯ; ಪಾದಚಾರಿಗಳು, ವಾಹನ ಸವಾರರಿಗೆ ತಪ್ಪದ ಕಿರಿಕಿರಿ
Last Updated 18 ಜೂನ್ 2018, 9:22 IST
ಅಕ್ಷರ ಗಾತ್ರ

ಗದಗ: ಅವಳಿ ನಗರದ ವ್ಯಾಪ್ತಿಯಲ್ಲಿ 900ಕ್ಕೂ ಹೆಚ್ಚು ಬಿಡಾಡಿ ದನಗಳಿವೆ. ನಗರಸಭೆ ಮೂರು ವರ್ಷಗಳ ಹಿಂದೆ ಸಮೀಕ್ಷೆ ನಡೆಸಿದಾಗ ಈ ಸಂಖ್ಯೆ 300 ಇತ್ತು. ಈಗ ಮೂರು ಪಟ್ಟು ಹೆಚ್ಚಿದೆ. ಇವುಗಳ ಮಿತಿ ಮೀರಿದ ಹಾವಳಿಯಿಂದಾಗಿ ಪಾದಚಾರಿಗಳು, ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ನಡು ರಸ್ತೆಯಲ್ಲೇ ಹಾಯಾಗಿ ಮಲಗುವುದು, ಕಾದಾಟಕ್ಕೆ ಇಳಿಯುವುದರಿಂದ ಸಂಚಾರ ವ್ಯವಸ್ಥೆಯೇ ಹದಗೆಟ್ಟಿದೆ. ಪ್ರತಿನಿತ್ಯ ನಗರದ ಯಾವುದಾದರೂ ಒಂದು ಭಾಗದಲ್ಲಿ ಬಿಡಾಡಿ ದನಗಳಿಂದಾಗಿಯೇ ಸಂಚಾರ ದಟ್ಟಣೆ ಉಂಟಾಗಿರುತ್ತದೆ.

ಬಿಡಾಡಿ ದನಗಳ ಹಾವಳಿ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಾಗಲೆಲ್ಲ, ಇನ್ನೆರಡು ದಿನಗಳಲ್ಲಿ ಎಲ್ಲವನ್ನೂ ಹಿಡಿದು ಗೋಶಾಲೆಗೆ ಸಾಗಿಸಲಾಗುವುದು ಎಂಬ ಸಿದ್ಧ ಉತ್ತರವನ್ನೇ ನಗರಸಭೆ ಅಧಿಕಾರಿಗಳು ಕೊಡುತ್ತಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೆ ಒಂದೇ ಒಂದು ಬಿಡಾಡಿ ದನವನ್ನು ಹಿಡಿದು ಗೋಶಾಲೆಗೆ ಸಾಗಿಸಿದ ಉದಾಹರಣೆಗಳಿಲ್ಲ. ನಗರಸಭೆ ಕಚೇರಿ ಎದುರಿನ ಸ್ಟೇಷನ್ ರಸ್ತೆಯಲ್ಲೇ ಬಿಡಾಡಿ ದನಗಳು ಗುಂಪು ಗುಂಪಾಗಿ ಮಲಗಿರುತ್ತವೆ. ಕೆಲವೊಮ್ಮೆ ನಗರಸಭೆಯ ಆವರಣಕ್ಕೂ ನುಗ್ಗಿ ಅಲ್ಲಿಯೂ ಠಿಕಾಣಿ ಹೂಡಿರುತ್ತವೆ. ಆದರೆ, ನಗರಸಭೆಗೆ ಕಣ್ಣಿಗೆ ಮಾತ್ರ ಇದು ಕಾಣಿಸುತ್ತಿಲ್ಲ.

‘ಮಾಲೀಕರು ರಸ್ತೆಗೆ ದನಗಳನ್ನು ಬಿಡಬಾರದು ಎಂದು 4 ವರ್ಷಗಳ ಹಿಂದೊಮ್ಮೆ ಪ್ರಕಟಣೆ ಹೊರಡಿಸಿ ಎಚ್ಚರಿಕೆ ನೀಡಿದ್ದು ಬಿಟ್ಟರೆ, ಇದುವರೆಗೆ ಇವುಗಳ ನಿಯಂತ್ರಣಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ಬೆಟಗೇರಿಯ ಹೆಲ್ತ್‌ಕ್ಯಾಂಪ್‌ ನಿವಾಸಿ ಅನ್ನಪೂರ್ಣ ಬಡಿಗಣ್ಣವರ.

‘ಗೂಳಿಗಳು ರಸ್ತೆಯ ಮೇಲೆ ಕಾದಾಟಕ್ಕೆ ಇಳಿಯುವುದರಿಂದ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಭಯವಾಗುತ್ತದೆ. ಇವುಗಳು ಮಕ್ಕಳು ಪ್ರಯಾಣಿಸುವ ಆಟೊವನ್ನೇ ತಿವಿದು ಬೀಳಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ನಗರಸಭೆಯ ನಿರ್ಲಕ್ಷ್ಯವನ್ನೇ ದುರುಪಯೋಗ ಪಡಿಸಿಕೊಂಡಿರುವ ಕೆಲವರು, ಸಾಕು ದನಗಳನ್ನೇ ಮೇಯಲು ರಸ್ತೆಗೆ ಬಿಟ್ಟಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದೆರಡು ವಾರಗಳಿಂದ ಮಳೆ ಬಿಡುವು ನೀಡಿದ್ದು, ಎಳೆಬಿಸಿಲು ಮೂಡುತ್ತಿದ್ದಂತೆ ಬಿಡಾಡಿ ದನಗಳು ನಗರದ ಪ್ರಮುಖ ವೃತ್ತಗಳಲ್ಲಿ, ಮರದ ನೆರಳಲ್ಲಿ, ಇಲ್ಲವೇ ರಸ್ತೆ ಮಧ್ಯದಲ್ಲೇ ಮಲಗುತ್ತವೆ. ರಾತ್ರಿ ಕೂಡ ರಸ್ತೆಯ ಮೇಲೆಯೇ ಠಿಕಾಣಿ ಹೂಡುತ್ತವೆ. ಬೆಟಗೇರಿ ಹೆಲ್ತ್‌ಕ್ಯಾಂಪ್‌, ಜರ್ಮನ್‌ ಆಸ್ಪತ್ರೆ, ಪಿ.ಬಿ. ರಸ್ತೆ ಬಿಡಾಡಿ ದನಗಳ ನೆಚ್ಚಿನ ವಿಹಾರ ಕೇಂದ್ರ. ಈ ರಸ್ತೆಯಲ್ಲಿ ನಿತ್ಯ ಏನಿಲ್ಲವೆಂದರೂ 100ರಿಂದ 150 ಬಿಡಾಡಿ ದನಗಳು ತಿರುಗುತ್ತವೆ. ಸ್ಟೇಷನ್‌ ರಸ್ತೆ, ಗಾಂಧಿ ವೃತ್ತ, ಟಾಂಗಾ ಕೂಟ, ಬಸವೇಶ್ವರ ವೃತ್ತ, ಭೂಮರಡ್ಡಿ ವೃತ್ತ, ಎ.ಪಿ.ಎಂ.ಸಿ, ಎಸ್‌.ಬಿ.ಐ ಬ್ಯಾಂಕ್‌ ಎದುರಿನ ರಸ್ತೆ, ಹೊಸ ಬಸ್‌ ನಿಲ್ದಾಣ, ತರಕಾರಿ ಮಾರು ಕಟ್ಟೆ, ಟರ್ನಲ್‌ ಪೇಟೆ, ಪುಟ್ಟರಾಜ ಗವಾಯಿ ವೃತ್ತ, ಮಹೇಂದ್ರಕರ ವೃತ್ತ, ಮುಳಗುಂದ ನಾಕಾ, ಹುಯಿಲಗೋಳ ನಾರಾಯಣರಾವ್‌ ವೃತ್ತ ಇವೆಲ್ಲವೂ ಬಿಡಾಡಿ ದನಗಳಿಗೆ ಪ್ರಿಯವಾದ ಸ್ಥಳಗಳು.

‘ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹಿಂದೊಮ್ಮೆ ಬಿಡಾಡಿ ದನಗಳ ವಿಷಯ ಪ್ರಸ್ತಾಪವಾಗಿತ್ತು. ಆದರೆ, ಇದುವರೆಗೆ ಯಾವ ನಿಯಂತ್ರಣ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಸದಸ್ಯರೊಬ್ಬರು ಹೇಳಿದರು.

‘ನಗರದಲ್ಲಿರುವ ಬಿಡಾಡಿ ದನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ಸಾಕು ದನಗಳು. ಹಾಲು ಹಿಂಡಿದ ನಂತರ ಮಾಲೀಕರು ಇವುಗಳನ್ನು ಬೀದಿಗೆ ಅಟ್ಟುತ್ತಾರೆ. ದಿನವಿಡೀ ರಸ್ತೆ ಸುತ್ತುತ್ತಾ, ತ್ಯಾಜ್ಯ ಅರಸುವ ಇವು ಸಂಜೆ ಮನೆಗಳಿಗೆ ಮರಳುತ್ತವೆ’ ಎಂದು ಸಾರ್ವಜನಿಕರೊಬ್ಬರು ಹೇಳಿದರು.

ಬಿಡಾಡಿ ದನಗಳನ್ನು ನಿರ್ದಾಕ್ಷಿಣ್ಯವಾಗಿ ಹಿಡಿದು ಗೋಶಾಲೆಗೆ ಸಾಗಿಸಬೇಕು. ದನಗಳನ್ನು ರಸ್ತೆಗೆ ಬಿಡದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಬೇಕು. ತಪ್ಪಿದರೆ ದಂಡ ವಿಧಿಸಬೇಕು 
- ಶಶಿಧರ ಹಳೇಮನಿ,  ಬೆಟಗೇರಿ ನಿವಾಸಿ

ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT