ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ನಾಯಕನಹಟ್ಟಿ:: ಸಾಹಿತ್ಯ ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Last Updated 21 ಜನವರಿ 2023, 7:07 IST
ಅಕ್ಷರ ಗಾತ್ರ

ನಾಯಕನಹಟ್ಟಿ (ಚಿತ್ರದುರ್ಗ): ಇಲ್ಲಿ ಎರಡು ದಿನ ಆಯೋಜಿಸಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಪಟ್ಟಣದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು. ಸಮ್ಮೇಳನಾಧ್ಯಕ್ಷ ತಿಪ್ಪಣ್ಣ ಬಿ.ಮರಿಕುಂಟೆ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿದರು.

ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಚಾಲನೆ ನೀಡಿದರು. ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಿಂದ ಆರಂಭವಾದ ಮೆರವಣಿಗೆ ತೇರುಬೀದಿ, ಒಳಮಠ, ನಾಗರಕಟ್ಟೆ, ಅಂಬೇಡ್ಕರ್ ವೃತ್ತದ ಮೂಲಕ ದಾವಣಗೆರೆ– ಚಳ್ಳಕೆರೆ ರಸ್ತೆ ಮಾರ್ಗದಲ್ಲಿ ಸಾಗಿ ವಾಲ್ಮೀಕಿ ವೃತ್ತದಲ್ಲಿ ಮುಕ್ತಾಯಗೊಂಡಿತು. ವೃತ್ತದಲ್ಲಿ ನಿರ್ಮಿಸಿದ ರಾಜ ಹಟ್ಟಿ ಮಲ್ಲಪ್ಪ ನಾಯಕ ವೇದಿಕೆಯನ್ನು ಅಧ್ಯಕ್ಷರು ಏರಿದರು.

ಡೊಳ್ಳು, ಕಹಳೆ, ಕೋಲಾಟ, ಖಾಸಾಬೇಡರ ಪಡೆ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತುಂಬಿದ್ದವು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕನ್ನಡದ ಅಭಿಮಾನಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿ ಮಕ್ಕಳು ಗಮನ ಸೆಳೆದರು.

ಸಮ್ಮೇಳನದ ಅಂಗವಾಗಿ ಪಟ್ಟಣ ಸಂಪೂರ್ಣ ಸಿಂಗಾರಗೊಂಡಿದೆ. ಹಟ್ಟಿ ಮಲ್ಲಪ್ಪ ನಾಯಕ ವೃತ್ತ ಸೇರಿದಂತೆ ಪಟ್ಟಣದ ತುಂಬೆಲ್ಲ ಹಳದಿ– ಕೆಂಪು ಬಣ್ಣದ ಬಾವುಟಗಳನ್ನು ಕಟ್ಟಲಾಗಿದೆ. ಪ್ರಧಾನ ವೇದಿಕೆ ಮತ್ತು ಮುಖ್ಯ ರಸ್ತೆ ಬದಿ ವಿದ್ಯುತ್ ಕಂಬಗಳಿಗೂ ಕೆಂಪು– ಹಳದಿ ಬಣ್ಣವನ್ನು ಬಳಿದು ಸಿಂಗಾರ ಮಾಡಲಾಗಿದೆ.

ಪಟ್ಟಣದ ವಾಲ್ಮೀಕಿ ವೃತ್ತದಿಂದ ತೇರು ಬೀದಿಯ ಕಡೆಗೆ ಬೃಹತ್ ಶಾಮಿಯಾನ ಹಾಕಲಾಗಿದೆ. ತೇರು ಬೀದಿಯಲ್ಲಿ ಪುಸ್ತಕ ಮಳಿಗೆಗಳಿಗೆ ಸ್ಥಳಾವಕಾಶ ಒದಗಿಸಲಾಗಿದೆ. ಸಮ್ಮೇಳನಕ್ಕೆ ಹಾಜರಾಗುವ ಎಲ್ಲ ಸಾಹಿತ್ಯಾಸಕ್ತರಿಗೂ ಗುರುತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT