ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಃ ರಾಗಿ ಖರೀದಿಗೆ ಶೀಘ್ರ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
Last Updated 30 ಏಪ್ರಿಲ್ 2022, 4:03 IST
ಅಕ್ಷರ ಗಾತ್ರ

ಭೀಮಸಮುದ್ರ (ಚಿತ್ರದುರ್ಗ): ‘ಬೆಂಬಲ ಬೆಲೆ ಯೋಜನೆಯ ಅಡಿ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರದ ಅನುಮತಿ ಪಡೆದು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. ರಾಗಿ ಖರೀದಿ ಸಮಸ್ಯೆಗೆ ಸಂಬಂಧಿಸಿ ಕೇಂದ್ರ ಆಹಾರ ಸಚಿವ ಪಿಯೂಷ್‌ ಗೋಯಲ್‌ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಮುಖ್ಯಮಂತ್ರಿ, ಗ್ರಾಮದಲ್ಲಿಯ ರಸ್ತೆಗಳನ್ನು ಉದ್ಘಾಟಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆದಿದ್ದಾರೆ. ಹೆಚ್ಚುವರಿ ರಾಗಿ ಖರೀದಿಸುವ ಅಗತ್ಯವಿದೆ ಎಂಬುದನ್ನು ಕೇಂದ್ರ ಸಚಿವ ಪಿಯೂಷ್‌ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಕೂಡ ನೀಡಿದೆ. ದೆಹಲಿಗೆ ತೆರಳಿ ಶನಿವಾರ ಮತ್ತೆ ಅವರೊಂದಿಗೆ ಮಾತನಾಡಲಿದ್ದೇನೆ’ ಎಂದರು.

‘ಕೇಂದ್ರದ ಅಧಿಕಾರಿಗಳೊಂದಿಗೆ ಈ ಬಗ್ಗೆ ಒಂದು ಸುತ್ತಿನ ಸಭೆ ನಡೆಯಲಿದೆ. ಭಾನುವಾರದ ಒಳಗೆ ತೀರ್ಮಾನ ಹೊರಬೀಳಲಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ತಕ್ಷಣ ಹೆಚ್ಚುವರಿ ರಾಗಿ ಖರೀದಿ ಆರಂಭಿಸಲಾಗುವುದು’ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಿದ ಚಿತ್ರದುರ್ಗ ತಾಲ್ಲೂಕಿನ ಪಂಡ್ರಹಳ್ಳಿ–ಬೊಮ್ಮೆನಹಳ್ಳಿ–ಸಿರಿಗೆರೆ–ಹಿಂರೇಗುಂಟನೂರು ರಸ್ತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ₹ 2.5 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ನಿರಾಣಿ, ಕಂದಾಯ ಸಚಿವ ಆರ್. ಅಶೋಕ್, ಸಂಸದ ಜಿ.ಎಂ. ಸಿದ್ದೇಶ್ವರ, ರಾಜ್ಯ ರಸ್ತೆ ಸಾರಿಗೆ ನಿಮಗದ ಅಧ್ಯಕ್ಷ ಎಂ. ಚಂದ್ರಪ್ಪ, ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರುಶುರಾಮ್ ಇದ್ದರು.

ಸಿದ್ದೇಶ್ವರ ಮನೆಗೆ ಖಾಸಗಿ ಭೇಟಿ

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಖಾಸಗಿ ಭೇಟಿ ನೀಡಿದ್ದರು. ಮಧ್ಯಾಹ್ನದ ಊಟಕ್ಕೆ ಸಂಸದರ ನಿವಾಸಕ್ಕೆ ಬಂದ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇದ್ದರು.

ಜಗಳೂರು ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಚಿವರೊಂದಿಗೆ ನೇರವಾಗಿ ಭೀಮಸಮುದ್ರಕ್ಕೆ ಬಂದರು. ಶಾಸಕರು, ವಿಧಾನಪರಿಷತ್‌ ಸದಸ್ಯರು ಜೊತೆಗಿದ್ದರು. ಕೆಲ ಹೊತ್ತು ಚರ್ಚೆ ನಡೆಸಿ ಬೆಂಗಳೂರಿಗೆ ತೆರಳಿದರು.

ಜೆ.ಎಚ್‌. ಪಟೇಲ್‌ ಸ್ಮಾರಕಕ್ಕೆ ಮನವಿ

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಸ್ಮಾರಕ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಧರಣಿ ನಡೆಸಲಾಗುವುದು ಎಂದು ಹಿರೇಮಠದ ಕೇದಾರಲಿಂಗ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿಗೆ ತಿಳಿಸಿದರು.

‘ಜೆ.ಎಚ್‌.ಪಟೇಲ್‌ ಹಾಗೂ ಎಸ್‌.ಆರ್‌. ಬೊಮ್ಮಾಯಿ ಒಡನಾಡಿಗಳು. ಪಟೇಲರ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಭಕ್ತರ ಅಪೇಕ್ಷೆ. ಕನ್ನಡ ನಾಡಿಗೆ ಪಟೇಲರ ಕೊಡುಗೆ ಅಪಾರ. ಸ್ಮಾರಕ ನಿರ್ಮಾಣಕ್ಕೆ ಮಠದ ಆವರಣದಲ್ಲಿ ಸ್ಥಳಾವಕಾಶವಿದ್ದು, ₹ 7.6 ಕೋಟಿ ಅನುದಾನದ ಅಗತ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT