ಕ್ಷೇತ್ರಕ್ಕೆ ₹ 800 ಕೋಟಿ ಅನುದಾನ ತರಲು ಬದ್ಧ: ಶಾಸಕ ಎಂ. ಚಂದ್ರಪ್ಪ ಭರವಸೆ

7

ಕ್ಷೇತ್ರಕ್ಕೆ ₹ 800 ಕೋಟಿ ಅನುದಾನ ತರಲು ಬದ್ಧ: ಶಾಸಕ ಎಂ. ಚಂದ್ರಪ್ಪ ಭರವಸೆ

Published:
Updated:
Prajavani

ಹೊಳಲ್ಕೆರೆ: ಕ್ಷೇತ್ರದ ಅಭಿವೃದ್ಧಿಗೆ ಈ ವರ್ಷ ಸುಮಾರು ₹ 800 ಕೋಟಿ ಅನುದಾನ ತರುವುದು ಖಚಿತ ಎಂದು ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿದರು.

ಪಟ್ಟಣದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರ ಯಾವುದೇ ಇರಲಿ ಅನುದಾನ ತರುವುದು, ಅಭಿವೃದ್ಧಿ ಕೆಲಸ ಮಾಡಿಸುವುದು ನನಗೆ ಗೊತ್ತಿದೆ. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ನಮ್ಮದೇ ಪಕ್ಷದ ಸರ್ಕಾರ ಇರಬೇಕೆಂದಿಲ್ಲ. ಕ್ಷೇತ್ರದ ಮತದಾರರ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಕಾರ್ಯಕರ್ತರು ಎದೆಗುಂದಬೇಕಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್, ‘ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಪಾವಗಡ ಹಾಗೂ ಶಿರಾ ಭಾಗಗಳಲ್ಲಿ ನಮ್ಮ ಪಕ್ಷಕ್ಕೆ ಹೊಡೆತ ಬೀಳಲಿದೆ. 5 ತಾಲ್ಲೂಕುಗಳಲ್ಲಿ ಬಿಜೆಪಿ ಶಾಸಕರಿದ್ದು, ಹೆಚ್ಚು ಮತ ಹಾಕಿಸುವ ಮೂಲಕ ಅಲ್ಲಿನ ಹಿನ್ನಡೆಯನ್ನು ಸರಿದೂಗಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಹಿಂದಿನಿಂದಲೂ ಹೊಳಲ್ಕೆರೆ ತಾಲ್ಲೂಕು ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿಯೂ ಹೆಚ್ಚು ಮತ ಹಾಕಿಸಬೇಕು’ ಎಂದು ಸಲಹೆ ನೀಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ದೊಡ್ಡ ಯೋಜನೆಗಳಿಗೆ ಹಣ ಇಲ್ಲ ಎಂದು ಹೇಳುತ್ತಾರೆ. ಆದರೆ ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಮನರಂಜನಾ ಪಾರ್ಕ್ ಮಾಡಲು ₹ 3 ಸಾವಿರ ಕೋಟಿ ಕೊಡಲು ಸಿದ್ಧರಿರುವ ಸಿಎಂ, ಮಧ್ಯಕರ್ನಾಟಕದ ಶತಮಾನದ ಕನಸಾದ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡಲು ಸಿದ್ಧರಿಲ್ಲ. ಕಾಮಗಾರಿಗೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಒತ್ತಾಯಿಸಿ ಫೆ.2ರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದೇನೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ‘ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಕಾರ್ಯಕರ್ತರು ಸಂಘಟನೆಯಲ್ಲಿ ಚುರುಕಾಗಬೇಕು’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯಸಮಿತಿಯ ಅಧ್ಯಕ್ಷ ಜಗದೀಶ್, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ.ರಮೇಶ್, ಎಲ್.ಬಿ.ರಾಜಶೇಖರ್, ಡಿ.ಸಿ.ಮೋಹನ್, ನಿವೃತ್ತ ಡಿಡಿಪಿಐ ರಂಗಪ್ಪ, ವಿಸ್ತಾರಕರಾದ ವೀರೇಂದ್ರ ಪಾಟೀಲ್, ಜಗದೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !