ಹೊಳಲ್ಕೆರೆ (ಚಿತ್ರದುರ್ಗ): ‘ಮಠದ ವಿಚಾರದಲ್ಲಿ ಉಂಟಾಗಿರುವುದು ಬಂಡವಾಳಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷವೇ ಹೊರತು, ಗುರು ಶಿಷ್ಯರ ನಡುವಿನ ಸಂಘರ್ಷ ಅಲ್ಲ’ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಆರ್.ನುಲೇನೂರು ಗ್ರಾಮದಲ್ಲಿ ಭಾನುವಾರ ನಡೆದ ರಂಗನಾಥ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿರಿಯ ಗುರುಗಳ ಕಾಲದಲ್ಲೂ ಎರಡು ಬಣಗಳಿದ್ದವು. ಅದರಲ್ಲಿ ಒಂದು ಬಣದವರು ಗುರುಗಳನ್ನು ಗೋಳು ಹೊಯ್ದುಕೊಂಡಿದ್ದರು. ಅವರ ವಿರುದ್ಧ ಕಿರಿಯ ಸ್ವಾಮೀಜಿ ಕೊಲೆ ಆರೋಪ ಹೊರಿಸಿದ್ದರು. ಹಿರಿಯ ಗುರುಗಳು, ಕಾಣೆಯಾಗಿದ್ದ ಚಂದ್ರಶೇಖರ ಸ್ವಾಮೀಜಿ ಯನ್ನು ಮದ್ರಾಸಿನಿಂದ ಕರೆತಂದು ಭಕ್ತರ ಮುಂದೆ ನಿಲ್ಲಿಸಿ ಆರೋಪದಿಂದ ಮುಕ್ತರಾಗಿದ್ದರು. ಆಗಿನ ಆರೋಪಕ್ಕೆ ಹೋಲಿಸಿದರೆ ನನ್ನ ಮೇಲೆ ಮಾಡಿರುವ ಆರೋಪ ದೊಡ್ಡದಲ್ಲ’ ಎಂದರು.
‘ಸಿರಿಗೆರೆ ಮಠದ ಹೆಸರು ಕೆಡಿಸುವ ವರ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಪೊಲೀಸರಿಗೆ ದೂರು ನೀಡಿ’ ಎಂದು ಭಕ್ತರಿಗೆ ಸಲಹೆ ನೀಡಿದರು.
‘ಸಿರಿಗೆರೆ ಮಠದ ಮೇಲೆ ಆರೋಪ ಮಾಡಿರುವವರ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲು ಯುವಕರ ಗುಂಪೊಂದು ಮುಂದಾಗಿತ್ತು. ಪ್ರತಿಭಟನೆ ಮೂಲಕ ಮಠದ ವಿಚಾರವನ್ನು ಹಾದಿ ಬೀದಿಯಲ್ಲಿ ರಂಪಾಟ ಮಾಡುವುದು ಬೇಡ ಎಂದು ನಾನೇ ಅವರನ್ನು ತಡೆದೆ. ಸಿರಿಗೆರೆ ಮಠದ ಮೇಲೆ ಆರೋಪ ಬಂದಿರುವುದು ಇದೇ ಮೊದಲಲ್ಲ. ಆರೋಪ ಮಾಡಿರುವವರು ಮಠದ ನಿಷ್ಠಾವಂತ ಭಕ್ತರಲ್ಲ’ ಎಂದರು.
‘ಸುಳ್ಳು ಸತ್ಯದ ಬಟ್ಟೆ ಹಾಕಿಕೊಂಡಿದೆ’
‘ಸುಳ್ಳು ಸತ್ಯದ ಬಟ್ಟೆ ಹಾಕಿ ಕೊಂಡು ಓಡಾಡುತ್ತಿದೆ’ ಎಂದು ತಮ್ಮ ವಿರುದ್ಧ ಆರೋಪ ಮಾಡಿ ರುವವರ ಕುರಿತು ಸ್ವಾಮೀಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ಸುಳ್ಳು ಮತ್ತು ಸತ್ಯ ಬಾವಿಯೊಂದರಲ್ಲಿ ಈಜಾಡು ತ್ತಿದ್ದವು. ಸುಳ್ಳು ಸತ್ಯಕ್ಕೆ ಗೊತ್ತಾಗದಂತೆ ಬಾವಿಯಿಂದ ಮೇಲೆ ಬಂದು ಸತ್ಯದ ಬಟ್ಟೆ ಹಾಕಿಕೊಂಡು, ತನ್ನ ಬಟ್ಟೆಯನ್ನೂ ತೆಗೆದುಕೊಂಡು ಓಡಿ ಹೋಯಿತಂತೆ. ಸತ್ಯ ಬಾವಿಯ ಮೇಲೆ ಬಂದು ನೋಡಿದಾಗ ಬಟ್ಟೆ ಇರಲಿಲ್ಲವಂತೆ. ಆಗ ಮರ್ಯಾದೆ ಉಳಿಸಿಕೊಳ್ಳಲು ಮತ್ತೆ ಬಾವಿಗೆ ಇಳಿಯಿತಂತೆ. ಹೀಗಾಗಿದೆ ಮಠದ ಪರಿಸ್ಥಿತಿ’ ಎಂದರು.
ಪತಿಗೆ ತನ್ನ ಹೆಂಡತಿ ಗರತಿ ಎಂಬ ನಂಬಿಕೆ ಇದ್ದರೆ ಸಾಕು. ಆತ ತನ್ನ ಹೆಂಡತಿ ಗರತಿ ಎಂದು ಊರೆಲ್ಲಾ ಟಾಂ ಟಾಂ ಹೊಡೆಯುವ ಅಗತ್ಯ ಇಲ್ಲ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.