ಮೋದಿ ಚೌಕೀದಾರ ಅಲ್ಲ, ಶೋಕೀದಾರ

ಬುಧವಾರ, ಏಪ್ರಿಲ್ 24, 2019
33 °C
ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ ಟೀಕೆ

ಮೋದಿ ಚೌಕೀದಾರ ಅಲ್ಲ, ಶೋಕೀದಾರ

Published:
Updated:
Prajavani

ಚಿತ್ರದುರ್ಗ: ‘ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಚೌಕೀದಾರ (ಕಾವಲುಗಾರ) ಎಂದು ಕರೆದುಕೊಳ್ಳುತ್ತಿದ್ದಾರೆ. ಕೋಟಿ ಮೌಲ್ಯದ ಕೋಟು ತೊಟ್ಟು ವಿದೇಶ ಸುತ್ತುವ ಅವರು, ಶೋಕೀದಾರರೇ ಹೊರತು ಚೌಕೀದಾರ ಅಲ್ಲ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಟೀಕೆ ಮಾಡಿದರು.

ತಾಲ್ಲೂಕಿನ ಮಾಳಪ್ಪನಹಟ್ಟಿಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಬುಧವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

‘ಮೋದಿ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ನಿತ್ಯ ಮೂರು ಬಾರಿ ಬಟ್ಟೆ ಬದಲಿಸುತ್ತಾರೆ. ಚಿತ್ರದುರ್ಗದ ಸಮಾವೇಶ ಮುಗಿಸಿ ಮೈಸೂರು ತಲುಪುವ ಹೊತ್ತಿಗೆ ಅವರ ಉಡುಗೆ ಬದಲಾಗುತ್ತದೆ. ಇದಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮೋದಿ ನಿಜಕ್ಕೂ ಚೌಕೀದಾರ ಆಗಿದ್ದರೆ ರಫೇಲ್ ಹಗರಣ ನಡೆಯುತ್ತಿರಲಿಲ್ಲ. ರಕ್ಷಣಾ ಇಲಾಖೆಯ ಅತಿ ಮುಖ್ಯವಾದ ಕಡತ ಕಳವು ಆಗುತ್ತಿರಲಿಲ್ಲ. ಐದು ವರ್ಷದ ಆಳ್ವಿಕೆಯಲ್ಲಿ ಎರಡೂವರೆ ವರ್ಷ ವಿದೇಶದಲ್ಲಿ ಕಳೆದಿದ್ದಾರೆ. ಕಲಾಪದಲ್ಲಿ ಪರಿಪೂರ್ಣವಾಗಿ ಪಾಲ್ಗೊಳ್ಳದ ಏಕೈಕ ಪ್ರಧಾನಿ ಇವರು. ಸರ್ವಾಧಿಕಾರಿ ಧೋರಣೆ ಹೊಂದಿರುವ ಇವರನ್ನು ಚುನಾವಣೆಯಲ್ಲಿ ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

‘2014ರ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಮೋದಿ ಈಡೇರಿಸಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂಬುದು ಕೇವಲ ಆಶ್ವಾಸನೆಯಾಗಿ ಉಳಿದಿದೆ. ವಿದೇಶದಿಂದ ಕಪ್ಪುಹಣ ತರುವುದಾಗಿ ನಂಬಿಸಿ ಜನರನ್ನು ಮೋಸ ಮಾಡಿದ್ದಾರೆ’ ಎಂದು ದೂರಿದರು.

‘ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಿದ್ದು ಕಾಂಗ್ರೆಸ್. ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಗಟ್ಟಿದೆ. ಇಂತಹ ಯಾವ ಯೋಜನೆಗಳು ಮೋದಿ ಸರ್ಕಾರದಲ್ಲಿ ಜಾರಿಗೆ ಬಂದಿಲ್ಲ’ ಎಂದು ಟೀಕಿಸಿದರು.

‘ಕೃಷಿ ಸಂಕಷ್ಟವನ್ನು ಅರಿತ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿದರು. ರೈತರು ಆತ್ಮಹತ್ಯೆ ತಡೆಯಲು ಪ್ರಯತ್ನಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಿದರು. ನರೇಂದ್ರ ಮೋದಿ ಅವರಿಗೆ ರೈತರು, ಕೂಲಿ ಕಾರ್ಮಿಕರ ಕಷ್ಟ ಅರ್ಥವಾಗುವುದಿಲ್ಲ. ಅವರು ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಾರೆ’ ಎಂದು ಹರಿಹಾಯ್ದರು.

ಶಾಸಕ ಟಿ.ರಘುಮೂರ್ತಿ, ಜೆಡಿಎಸ್‌ ಅಧ್ಯಕ್ಷ ಡಿ.ಯಶೋಧರ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಎಂ.ಜಯಣ್ಣ, ಭೀಮಸಮುದ್ರ ಮಂಜುನಾಥ್‌, ಮೆಹಬೂಬ್‌ ಪಾಷಾ, ಬಿ.ಟಿ.ಜಗದೀಶ್‌, ನರಸಿಂಹಮೂರ್ತಿ, ಒ.ಶಂಕರ್‌ ಇದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !