‘ಬಿಜೆಪಿಗೆ ತಂದೆ ಆಗುವ ತವಕ’

ಶನಿವಾರ, ಏಪ್ರಿಲ್ 20, 2019
31 °C

‘ಬಿಜೆಪಿಗೆ ತಂದೆ ಆಗುವ ತವಕ’

Published:
Updated:
Prajavani

ಚಿತ್ರದುರ್ಗ: ಯಾರೋ ಹುಟ್ಟಿಸಿದ ಮಗುವಿಗೆ ತಂದೆ ಆಗಲು ಬಿಜೆಪಿ ಮುಂದಾಗುತ್ತಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ತಮ್ಮವೆಂದು ಬಿಂಬಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದು ಆರೋಪಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆ ಕಾಂಗ್ರೆಸ್ ಪಕ್ಷದ ಕನಸಿನ ಕೂಸು. ಎಸ್‌.ನಿಜಲಿಂಗಪ್ಪ ಅವರ ಕಾಲದಲ್ಲಿಯೇ ಭದ್ರಾ ನೀರು ತರುವ ಪ್ರಯತ್ನ ನಡೆದಿತ್ತು. ವಾಣಿವಿಲಾಸ ಸಾಗರಕ್ಕೆ ನೀರು ಹರಿದುಬರುವ ಸಂದರ್ಭದಲ್ಲಿ ಬಿಜೆಪಿ ಶ್ರೇಯಸ್ಸು ಪಡೆಯಲು ಹವಣಿಸುತ್ತಿದೆ’ ಎಂದು ಕಿಡಿಕಾರಿದರು.

‘ಸುರಂಗ ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಮಣ್ಣು ಹಾಗೂ ಮರಳು ಸಿಕ್ಕಿದ್ದರಿಂದ ಕೊಂಚ ತಡವಾಗಿದೆ. ಇಲ್ಲವಾದರೆ ಕಳೆದ ವರ್ಷವೇ ಜಿಲ್ಲೆಗೆ ನೀರು ಹರಿದು ಬರುತ್ತಿತ್ತು. ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಿಲ್ಲ. ಬಿಜೆಪಿ ವಿನಾ ಕಾರಣ ಆರೋಪ ಮಾಡುತ್ತಿದೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆ ಹಲವು ಬಾರಿ ಕೇಂದ್ರ ಸರ್ಕಾರವನ್ನುಕೋರಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಇದಕ್ಕೆ ಸ್ಪಂದಿಸಿಲ್ಲ. ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ’ ಎಂದು ಜರಿದರು.

‘ರೈತರ ಸಾಲಮನ್ನಾ ಆಗಿಲ್ಲವೆಂದು ಬಿಜೆಪಿ ಹೇಳುತ್ತಿರುವ ಸುಳ್ಳು ಜನರಿಗೆ ಅರ್ಥವಾಗಿದೆ. ಹಳ್ಳಿಗಳಿಗೆ ಪ್ರಚಾರಕ್ಕೆ ತೆರಳುವ ಮೈತ್ರಿ ಅಭ್ಯರ್ಥಿಗೆ ಜನರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗಿದೆ. ಜನರನ್ನು ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಕಾರ್ಯದರ್ಶಿ ಬಿ.ವೆಂಕಟೇಶ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜು, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ, ಮುಖಂಡರಾದ ಹನುಮಾಲಿ ಷಣ್ಮುಖಪ್ಪ, ಜಿ.ಎಸ್‌.ಮಂಜುನಾಥ್‌, ಸಿ.ಟಿ.ಕೃಷ್ಣಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !