ಶನಿವಾರ, ಸೆಪ್ಟೆಂಬರ್ 18, 2021
22 °C
ಕೆಪಿಸಿಸಿ ಒಬಿಸಿ ವಿಭಾಗದ ಅಧ್ಯಕ್ಷ

ಚಿತ್ರದುರ್ಗ: ನೇಕಾರರಿಗೆ ಸರ್ಕಾರಿ ಭಿಕ್ಷೆ ಬೇಕಿಲ್ಲ -ಲಕ್ಷ್ಮಿನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಎಲ್ಲ ನೇಕಾರರಿಗೂ ಸರ್ಕಾರ ನೆರವು ನೀಡಬೇಕು. ತಾರತಮ್ಯ ನೀತಿ ಅನುಸರಿಸುವ ಸರ್ಕಾರಿ ಭಿಕ್ಷೆ ನೇಕಾರರಿಗೆ ಬೇಕಾಗಿಲ್ಲ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 6.75 ಲಕ್ಷ ನೇಕಾರ ಕುಟುಂಬಗಳಿವೆ. ಇದರಲ್ಲಿ 1.2 ಲಕ್ಷ ಕುಟುಂಬಗಳಿಗೆ ಮಾತ್ರ ₹ 2 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದ ಪರಿಹಾರವನ್ನು ಎಲ್ಲ ನೇಕಾರರಿಗೂ ನೀಡಬೇಕು. ಇಲ್ಲವಾದರೆ ಈ ಪರಿಹಾರ ನೀಡುವ ಅಗತ್ಯವಿಲ್ಲ. ಮಗ್ಗದ ಮೇಲೆ ಕುಳಿತರೆ ಎರಡು ದಿನದಲ್ಲಿ ಇಷ್ಟು ಹಣ ದುಡಿಯುವ ಶಕ್ತಿ ನೇಕಾರರಿಗೆ ಇದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೋವಿಡ್‌ ಬಳಿಕ ನೇಕಾರ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜನವರಿಯಿಂದ ಜುಲೈ ವರೆಗೆ ರಾಜ್ಯದಲ್ಲಿ 26 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಿಗುವ ಪರಿಹಾರವನ್ನೇ ನೇಕಾರರಿಗೂ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ. ನೇಕಾರ ನಿಯೋಗ 9 ಬಾರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದೆ. ಆದರೆ, ಈವರೆಗೆ ಸರಿಯಾದ ಭರವಸೆ ಸಿಕ್ಕಿಲ್ಲ’ ಎಂದು ಕಿಡಿಕಾರಿದರು.

‘ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ₹ 47 ಕೋಟಿ ನಿವ್ವಳ ಲಾಭದಲ್ಲಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿಗಮ ₹ 100 ಕೋಟಿ ನಷ್ಟ ಅನುಭವಿಸುತ್ತಿದೆ. ನೇಕಾರರಿಗೆ ನೂಲು, ಮಗ್ಗ, ಕೂಲಿ ಕೂಡ ಸಿಗುತ್ತಿಲ್ಲ. ನಿಗಮವನ್ನೇ ನಂಬಿದ ಸಾವಿರಾರು ನೇಕಾರರ ಕುಟುಂಬಗಳು ಬೀದಿಗೆ ಬಿದ್ದಿವೆ. ನೇಕಾರ ಸಮುದಾಯವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ’ ಎಂದು ದೂರಿದರು.

‘ತಾರತಮ್ಯ ಸೃಷ್ಟಿಸುವ ಶಿಕ್ಷಣ ನೀತಿ’
ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಹೊಸ ಶಿಕ್ಷಣ ನೀತಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚಿಸಲಿದೆ. ಶ್ರೀಮಂತರಿಗೆ ಮಾತ್ರ ಅನುಕೂಲ ಮಾಡಿಕೊಡುವ ಕಾರ್ಪೊರೇಟ್‌ ಶಿಕ್ಷಣವಾಗಿದೆ ಎಂದು ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಕೆ.ಇ.ರಾಧಾಕೃಷ್ಣ ಆರೋಪಿಸಿದರು.

‘ದೇಶದ ಶೇ 47ರಷ್ಟು ಜನರು ಅಂತರನಗರ ವಲಸೆ ಪ್ರವೃತ್ತಿ ಹೊಂದಿದ್ದಾರೆ. ಈ ವಲಸೆ ಮಕ್ಕಳ ಬಗ್ಗೆ ಶಿಕ್ಷಣ ನೀತಿಯಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹಿಂದಿ ಭಾಷೆಯನ್ನು ಹೇರುವ ಹುನ್ನಾರ ಇದರಲ್ಲಿ ಅಡಗಿದೆ. ಸಂಸತ್ತಿನಲ್ಲಿ ಚರ್ಚೆ ಮಾಡದೇ ಶಿಕ್ಷಣ ನೀತಿ ಅನುಷ್ಠಾನ ಮಾಡುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್‌, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಡಿ.ಕುಮಾರ್‌, ಮುಖಂಡರಾದ ಲೋಕೇಶ್‌ ನಾಯಕ, ಶಿವಕುಮಾರ್‌ ಇದ್ದರು.

***

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಮಾನ್ಯತೆ ನೀಡಿದ ಪ್ರಾದೇಶಿಕ ಭಾಷೆಯಲ್ಲಿ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಜ್ಞಾಪೂರ್ವಕವಾಗಿ ಕನ್ನಡ ವಿರೋಧಿಸುತ್ತಿದ್ದಾರೆ.
-ಕೆ.ಇ.ರಾಧಾಕೃಷ್ಣ, ಕಾಂಗ್ರೆಸ್‌ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.