ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ತಿಳಿಹೇಳಲು ರಾಷ್ಟ್ರಪತಿಗೆ ಕೋರಿಕೆ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ
Last Updated 13 ನವೆಂಬರ್ 2019, 12:06 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿ ಬಡತನ, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಸೂಕ್ತ ಸೂಚನೆಗಳನ್ನು ನೀಡಬೇಕು ಹಾಗೂ ಸರ್ವಾಧಿಕಾರಿ ಧೋರಣೆಗೆ ಅಂಕುಶ ಹಾಕಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯ ಎದುರು ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಕೇಂದ್ರದಲ್ಲಿ ಅಧಿಕಾರ ದೊರೆತರೆ ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರುವುದಾಗಿ ಬಿಜೆಪಿ 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿತ್ತು. ದೇಶದ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಜಮಾ ಮಾಡುವುದಾಗಿ ಹೇಳಿತ್ತು. ಆರು ವರ್ಷ ಕಳೆದರೂ ಕಪ್ಪು ಹಣ ಭಾರತಕ್ಕೆ ಬರಲಿಲ್ಲ. ಜನರಿಗೆ ನೀಡಿದ್ದ ಭರವಸೆಯನ್ನು ಗಾಳಿಗೆ ತೂರಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರಲಾಗಿದೆ ಎಂದು ದೂರಿದರು.

ಸರ್ಕಾರದ ಕಾರ್ಯವೈಖರಿ ಹಾಗೂ ನೀತಿಗಳಿಂದ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿದೆ. ನೋಟು ರದ್ದತಿಯಂತಹ ಕ್ರಮಗಳನ್ನು ಕೈಗೊಂಡ ಪರಿಣಾಮ ದೇಶ ದಿವಾಳಿಯ ಹಂತಕ್ಕೆ ತಲುಪುತ್ತಿದೆ. ಉದ್ಯೋಗ ಕಡಿತ, ಬಡತನ ಹೆಚ್ಚಾಗುತ್ತಿದೆ. ಸಣ್ಣ ಕೈಗಾರಿಕೆಗಳು ಸಂಪೂರ್ಣ ನೆಲಕಚ್ಚಿವೆ. ಕೃಷಿ ವಲಯವೂ ಸಂಕಷ್ಟಕ್ಕೆ ಸಿಲುಕಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಸಾವರ್ಕರ್‌ಗೆ ಭಾರತ ರತ್ನ ನೀಡುವ ವಿಚಾರವನ್ನು ಚರ್ಚೆಗೆ ತಂದು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಕೇಂದ್ರ ಸರ್ಕಾರ ಒಲವು ತೋರಿದ್ದು ದೇಶದ ಶ್ರಮಿಕ ವರ್ಗವನ್ನು ಇನ್ನಷ್ಟು ಕಂಗಾಲು ಮಾಡಿದೆ. ಸುಂಕ ರಹಿತ ಆಮದು ವ್ಯವಸ್ಥೆ ರೂಪಿಸಿದರೆ ಕೃಷಿ ಮತ್ತು ಕೈಗಾರಿಕೆ ವಲಯ ದಿವಾಳಿ ಆಗಲಿವೆ. ಭಾರತದ ಮಾರುಕಟ್ಟೆ ಪ್ರವೇಶಕ್ಕೆ ವಿದೇಶಿ ಕಂಪನಿಗಳಿಗೆ ಮುಕ್ತ ಅವಕಾಶ ಸಿಗಲಿದೆ. ಈಸ್ಟ್‌ ಇಂಡಿಯಾ ಕಂಪನಿಯ ಮಾದರಿಯಲ್ಲಿ ವಿದೇಶಿ ಕಂಪನಿಗಳು ಭಾರತೀಯರನ್ನು ಆಕ್ರಮಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

ಡಾಲರ್‌ ಎದುರು ರೂಪಾಯಿ ಮೌಲ್ಯ ಅಪಾರವಾಗಿ ಕುಸಿದಿದೆ. ಆಟೊ ಮೊಬೈಲ್‌, ಕಬ್ಬಿಣ, ಸಿಮೆಂಟ್‌ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಹೆಚ್ಚಾಗುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರ ಬದುಕು ತತ್ತರಿಸಿ ಹೋಗಿದೆ. ಬದುಕು ಭರವಸೆ ಕಳೆದುಕೊಂಡ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ‘ಹೌಡಿ ಮೋದಿ’ ಕಾರ್ಯಕ್ರಮದ ಮೂಲಕ ದೇಶ ಸಮೃದ್ಧವಾಗಿದೆ ಎಂಬ ಸುಳ್ಳು ಸಂದೇಶವನ್ನು ರವಾನಿಸಿದ್ದಾರೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವದ ಕಗ್ಗೊಲೆ:ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ನಿರ್ದೇಶನಾಲಯ, ಸಿಬಿಐ, ಚುನಾವಣಾ ಆಯೋಗದಂತಹ ಸ್ವಾಯತ್ತತಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವೀಕ್ಷಕಿ ಮಂಜುಳಾ ನಾಯ್ಡು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರನ್ನು ಸೆದೆಬಡಿಯಲಾಗುತ್ತಿದೆ. ಮಾನವಹಕ್ಕು ಹೋರಾಟಗಾರರು, ದಲಿತ ನಾಯಕರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಷಡ್ಯಂತ್ರ ನಡೆಯುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ವಿಜೃಂಭಿಸುವ ವಾತಾವರಣ ಸೃಷ್ಟಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಂಸತ್ತಿನಲ್ಲಿ ಮಸೂದೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಬಹುಮತವಿದ್ದರೂ ಸುಗ್ರೀವಾಜ್ಞೆ ಮೂಲಕ ಕಾನೂನು ರೂಪಿಸಲಾಗುತ್ತಿದೆ. ಪ್ರಧಾನಿಯ ಮನದ ಮಾತು ಕಾನೂನು ಆಗುತ್ತಿದೆ. ಈ ಸರ್ವಾಧಿಕಾರಿ ಧೋರಣೆಗೆ ಅಂಕುಶ ಹಾಕುವ ಅಗತ್ಯವಿದೆ’ ಎಂದರು.

ಶಾಸಕ ಟಿ.ರಘುಮೂರ್ತಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಸಿ.ಶಿವು ಯಾದವ್‌, ಮಾಜಿ ಶಾಸಕ ಉಮಾಪತಿ ಇದ್ದರು.

ಭುಗಿಲೆದ್ದ ಅಸಮಾಧಾನ:ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಶಿವು ಯಾದವ್‌ ಅವರನ್ನು ನೇಮಕ ಮಾಡಿರುವುದಕ್ಕೆ ಅಸಮಾಧಾನ ಭುಗಿಲೆದ್ದಿದೆ. ಕೆಪಿಸಿಸಿ ವೀಕ್ಷಕಿ ಮಂಜುಳಾ ನಾಯ್ಡು ಅವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸುವ ಪ್ರಯತ್ನವೂ ಬುಧವಾರ ನಡೆಯಿತು.

ಕಾಂಗ್ರೆಸ್‌ ಮುಖಂಡರಾದ ಡಿ.ಟಿ.ವೆಂಕಟೇಶ್‌, ಕುಮಾರಗೌಡ ಹಾಗೂ ಸಂಪತಕುಮಾರ್‌ ನೇತೃತ್ವದಲ್ಲಿ ಕಾರ್ಯಕರ್ತರ ಗುಂಪೊಂದು ಹೋಟೆಲ್ ದುರ್ಗದ ಸಿರಿ ಬಳಿ ನಾಯ್ಡು ಅವರಿಗೆ ಘೇರಾವ್‌ ಹಾಕಲು ಮುಂದಾಯಿತು. ಅಸಮಾಧಾನಗೊಂಡ ಮುಖಂಡರ ಮನವೊಲಿಸಿದ ಶಾಸಕ ಟಿ.ರಘುಮೂರ್ತಿ, ನಾಯಕರೊಂದಿಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದರು. ಅಸಮಾಧಾನಗೊಂಡ ಕಾರ್ಯಕರ್ತರು ಕಾಂಗ್ರೆಸ್‌ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದ ದೂರ ಉಳಿದರು.

‘ಇದು ಕಾಂಗ್ರೆಸ್‌ ಪಕ್ಷದ ಆಂತರಿಕ ಸಮಸ್ಯೆ. ಎಲ್ಲರೂ ಒಗ್ಗೂಡಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಶಾಸಕ ರಘುಮೂರ್ತಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT