ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಎಸ್‌ಎಸ್‌ ಚಡ್ಡಿ’ ಸುಟ್ಟ ಎನ್‌ಎಸ್‌ಯುಐ

Last Updated 7 ಜೂನ್ 2022, 2:04 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ‘ಚಡ್ಡಿ ಸುಡುವ ಅಭಿಯಾನ’ ಆರಂಭಿಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಸೋಮವಾರ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಜಿಲ್ಲಾ ಘಟಕದ ಪದಾಧಿಕಾರಿಗಳು ‘ಚಡ್ಡಿ ಸುಟ್ಟು’ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರ ನಿವಾಸದ ಮುಂದೆ ಪ್ರತಿಭಟಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿರುವ ಎನ್‌ಎಸ್‌ ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್‌ ಬಿಡುಗಡೆಗೆ ಆಗ್ರಹಿಸಿ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ‘ಚಡ್ಡಿ’ ಸುಡಲು ಮುಂದಾದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಚಡ್ಡಿ ಕಸಿಯಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು, ಆರ್‌ಎಸ್‌ಎಸ್‌ ಚಡ್ಡಿಯನ್ನು ಕಾಲಲ್ಲಿ ತುಳಿದು ಕಿಡಿಕಾರಿದರು. ಬಳಿಕ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟು ಆಕ್ರೋಶ ಹೊರ ಹಾಕಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಬಂಧಿಸಿರುವ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್‌ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

‘ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕೇಸರಿ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುತ್ತೇವೆ ಎಂದಾಗ ದೇಶದ್ರೋಹದ ನೆನಪು ಬರಲಿಲ್ಲ. ಈಗ ವಿರೋಧ ಪಕ್ಷದವರು ಅದರ ಬಗ್ಗೆ ಮಾತನಾಡಿದಾಗ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅದು ಸೇಡಿನ ರಾಜಕೀಯ’ ಎಂದು ಯುವ ಕಾಂಗ್ರೆಸ್ ವಕ್ತಾರ ದರ್ಶನ ಬಳ್ಳೇಶ್ವರ
ದೂರಿದರು.

ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ಗೋಡೆಮನೆ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಉಲ್ಲಾಸ್‌ ಕಾರೇಹಳ್ಳಿ, ಕೆಪಿಸಿಸಿ ಸದಸ್ಯ ಮಧುಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT