ಬುಧವಾರ, ಜೂನ್ 29, 2022
23 °C

ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರ: ಕಾಂಗ್ರೆಸ್ ವಕ್ತಾರ ವಿ.ಎಸ್‌.ಉಗ್ರಪ್ಪ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ನರೇಂದ್ರ ಮೋದಿ ಅವರ ಏಳು ವರ್ಷದ ಸಾಧನೆ ಶೂನ್ಯ. ದೇಶದ ಪ್ರಗತಿ ಕುಂಠಿತವಾಗಿದ್ದು, ಕಾರ್ಮಿಕರು ಹಾಗೂ ರೈತರ ಬದುಕು ಬೀದಿಗೆ ಬಿದ್ದಿದೆ. ದೇಶಕ್ಕೆ ಅವರೊಬ್ಬ ಆಧುನಿಕ ಭಸ್ಮಾಸುರ ಆಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್‌.ಉಗ್ರಪ್ಪ ಗಂಭೀರ ಆರೋಪ ಮಾಡಿದರು.

‘ದೇಶ ಕಂಡ 15 ಪ್ರಧಾನಿಗಳಲ್ಲಿ ಅತ್ಯಂತ ದುರ್ಬಲರು ನರೇಂದ್ರ ಮೋದಿ. ಪ್ರಧಾನಿ ಹುದ್ದೆಗೆ ಏರಿದ ಬಳಿಕ ಅವರಲ್ಲಿ ಮುತ್ಸದ್ದಿತನ ಬರಬೇಕಿತ್ತು. ಆದರೆ, ಅವರು ಸಮಯ ಸಾಧಕರಂತೆ ಕಾಣುತ್ತಿದ್ದು, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಜನರ ಉದ್ಯೋಗ, ದೇಶದ ಆರ್ಥಿಕತೆ ಎಲ್ಲವೂ ಭಸ್ಮವಾಗಿವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್‌ ಕಚ್ಚಾತೈಲದ ಬೆಲೆ ನೂರು ಡಾಲರ್‌ಗೂ ಅಧಿಕವಾಗಿತ್ತು. ಆಗ ಲೀಟರ್‌ ಮೂಲ ತೈಲದ ಬೆಲೆ ಸರಾಸರಿ ₹ 47 ಆಗುತ್ತಿತ್ತು. ಆದರೂ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ₹ 65 ದಾಟಿರಲಿಲ್ಲ. ಈಗ ಕಚ್ಚಾತೈಲದ ಬೆಲೆ 71 ಡಾಲರ್‌ಗೆ ಕುಸಿದಿದೆ. ಲೀಟರ್‌ ಮೂಲ ತೈಲದ ಬೆಲೆ ₹ 35ಕ್ಕೆ ಇಳಿದಿದೆ. ಆದರೂ, ದೇಶದಲ್ಲಿ ಇಂಧನದ ಬೆಲೆ ₹ 100 ದಾಟಿದ್ದು ಹೇಗೆ’ ಎಂದು ಪ್ರಶ್ನಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಲೀಟರ್‌ ಪೆಟ್ರೋಲ್‌ ಮೇಲಿನ ಕೇಂದ್ರ ಸರ್ಕಾರದ ತೆರಿಗೆ ₹ 10 ಇತ್ತು. ರಾಜ್ಯ ಸರ್ಕಾರ ₹ 11 ವಿಧಿಸುತ್ತಿತ್ತು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರದ ತೆರಿಗೆ ₹ 34ಕ್ಕೆ ಹೆಚ್ಚಳವಾಗಿದೆ. ರಾಜ್ಯ ಸರ್ಕಾರಗಳೂ ₹ 26 ಸುಂಕ ವಿಧಿಸುತ್ತಿವೆ. ಡೀಲರ್‌ ಕಮಿಷನ್‌ ಕೂಡ ಹೆಚ್ಚಳವಾಗಿದೆ. ಇದರಿಂದ ಇಂಧನ ಜನರಿಗೆ ಹೊರೆಯಾಗಿ ಪರಿಣಮಿಸಿದೆ’ ಎಂದು ವಿವರಿಸಿದರು.

‘ಅಮೆರಿಕದಲ್ಲಿ ಪೆಟ್ರೋಲ್‌ ದರ ₹ 64ಇದೆ. ಪಾಕಿಸ್ತಾನದಲ್ಲಿ ಡೀಸೆಲ್‌ ₹ 52ಕ್ಕೆ ಲಭ್ಯವಾಗುತ್ತಿದೆ. ನೇಪಾಳ, ಬಾಂಗ್ಲಾದೇಶ, ಭೂತಾನ್‌ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಬೆಲೆಗೆ ಇಂಧನ ಸಿಗುತ್ತಿದೆ. ರಾವಣ ರಾಜ್ಯವೆಂದು ಕರೆಯುವ ಶೀಲಂಕಾದಲ್ಲಿ ಪೆಟ್ರೋಲ್‌ ಬೆಲೆ ₹ 59, ಡೀಸೆಲ್‌ 38ಕ್ಕೆ ಲಭ್ಯವಾಗುತ್ತಿದೆ. ಭಾರತದಲ್ಲಿ ಮಾತ್ರ ಇದು ₹ 100ಕ್ಕೆ ಏರಿಕೆಯಾಗಿದೆ. ಇದೆನಾ ನಿಮ್ಮ ರಾಮ ರಾಜ್ಯ’ ಎಂದು ಕುಟುಕಿದರು.

‘ಏಳು ವರ್ಷದಲ್ಲಿ ಇಂಧನದ ಮೇಲಿನ ಸುಂಕದಿಂದ ಕೇಂದ್ರ ಸರ್ಕಾರಕ್ಕೆ ₹ 20 ಲಕ್ಷ ಕೋಟಿ ಆದಾಯ ಸಂದಾಯ ಆಗಿದೆ. ಬಡತನ, ನಿರುದ್ಯೋಗದಂತಹ ಸಮಸ್ಯೆಗಳು ಇನ್ನೂ ನಿವಾರಣೆ ಆಗಿಲ್ಲ. ಜನಸಾಮಾನ್ಯರ ಬದುಕಿನ ಸಮಸ್ಯೆಗಳನ್ನು ಇತ್ಯರ್ಥಪಡಿಸುವತ್ತ ಗಮನಹರಿಸುವ ಬದಲು ಭಾವನಾತ್ಮಕ ವಿಚಾರಗಳನ್ನು ಕೆದಕಿ ಕಾಲಾಹರಣ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ ಸಂಕಷ್ಟದಲ್ಲಿ ದೇಶ ನಲುಗಿ ಹೋಗಿದೆ. ಅಡುಗೆ ಎಣ್ಣೆ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿ ಆಗಿದೆ. ಇನ್ನಾದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಇಂಧನದ ಮೇಲಿನ ತೆರಿಗೆಯನ್ನು ಹಿಂಪಡೆದು ಲೀಟರ್‌ ಇಂಧನ ₹ 50ಕ್ಕೆ ಸಿಗುವಂತೆ ಮಾಡಿ. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಸುಳ್ಳಿನ ಭತ್ತಳಿಕೆ ಖಾಲಿ: ಚಂದ್ರಪ್ಪ

ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳಿನ ಭತ್ತಳಿಕೆ ಖಾಲಿ ಆಗಿದೆ. ಅವರು ಸತ್ಯ ಹೇಳಿದರೂ ಜನರು ನಂಬದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ ಆರೋಪಿಸಿದರು.

‘ಕಳೆದ ವರ್ಷ ಲಾಕ್‌ಡೌನ್‌ ಪರಿಹಾರವಾಗಿ ಘೋಷಣೆ ಮಾಡಿದ ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಇನ್ನೂ ಜನರನ್ನು ತಲುಪಿಲ್ಲ. ಸುಳ್ಳು ಆಶ್ವಾಸನೆ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಬಹುದಿನಗಳವರೆಗೆ ನಡೆಯುವುದಿಲ್ಲ. ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್‌, ಕೆಪಿಸಿಸಿ ಸದಸ್ಯ ಹನುಮಲಿ ಷಣ್ಮುಖಪ್ಪ, ಮಾಧ್ಯಮ ವಕ್ತಾರ ಬಾಲಕೃಷ್ಣಸ್ವಾಮಿ ಯಾದವ, ಯೋಗೇಶ್‌ ಬಾಬು ಇದ್ದರು.

***

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹೇರಿದ ಅವೈಜ್ಞಾನಿಕ ಕ್ರಮಗಳಿಂದ ಅಸಂಘಟಿತ ವಲಯದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಉದ್ಯೋಗ ಇಲ್ಲದೇ, ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.

-ಜಿ.ಎಸ್‌.ಮಂಜುನಾಥ್‌, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ

***

ಮನಮೋಹನ್ ಸಿಂಗ್‌ ಅವರು ಅಧಿಕಾರದಲ್ಲಿದ್ದಾಗ ಇಂಧನದ ಮೇಲಿನ ಸುಂಕ ಕಡಿಮೆ ಇತ್ತು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಸುಂಕ ನಾಲ್ಕು ಪಟ್ಟು ಹೆಚ್ಚಾಗಿದೆ.

-ಎಂ.ಕೆ.ತಾಜ್‌ಪೀರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು