ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ನರೇಗಾದಡಿ ಗ್ರಾಮೀಣ ಉದ್ಯಾನ ನಿರ್ಮಾಣ, ಪಂಚಾಯಿತಿ ಕಾರ್ಯಕ್ಕೆ ಮೆಚ್ಚುಗೆ

Last Updated 26 ಜೂನ್ 2021, 4:04 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ದೇವಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯನಗರ ಫಾರಂ ಬಳಿ ನರೇಗಾ ಯೋಜನೆಯ ಅಡಿ ಗ್ರಾಮೀಣ ಉದ್ಯಾನ ನಿರ್ಮಿಸಲಾಗಿದೆ.

ಈ ಉದ್ಯಾನದ ಪಕ್ಕದಲ್ಲಿ 700 ವರ್ಷಗಳ ಹಿಂದಿನ ಐತಿಹಾಸಿಕ ಕಲ್ಯಾಣಿ ಇದೆ. ಇಲ್ಲಿ ಉಜ್ಜಯಿನಿಯ ಮರುಳಸಿದ್ಧರೆಂಬ ಗುರು ತಪಸ್ಸು ಮಾಡಿದ್ದರು ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಇಂತಹ ಪುಣ್ಯಕ್ಷೇತ್ರದಲ್ಲಿದ್ದ ಕಲ್ಯಾಣಿಯನ್ನು ಕಳೆದ ವರ್ಷ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅತ್ಯಾಧುನಿಕ ರೀತಿಯಲ್ಲಿ ಪುನರುಜ್ಜೀವನಗೊಳಿಸಲಾಗಿತ್ತು. ಈ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ರೂಪಿಸಬೇಕು. ಹಾಗೆಯೇ ಕೊರೊನಾ ಸೋಂಕಿನ ಸಂಕಷ್ಟ ಕಾಲದಲ್ಲಿ ಹಳ್ಳಿಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಿದ ದೇವಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ, ಹಿಂದಿನ ತಾಲ್ಲೂಕು ಪಂಚಾಯಿತಿ ಇಒ, ಎಂಜಿನಿಯರ್‌ ಎಸ್‌.ಪಿ. ಸಂತೋಷ್‌ ಅವರು ಖಾಲಿಯಿದ್ದ ಜಾಗದಲ್ಲಿ ಅಪರೂಪದ ಉದ್ಯಾನ ನಿರ್ಮಿಸಿದ್ದಾರೆ.

ಅಲ್ಲಿದ್ದ ನೂರಾರು ವರ್ಷಗಳ ಕಾಲದ ಕೆಲವು ಬಿಲ್ವಪತ್ರೆ ಮರಗಳಿಗೆ ಸುತ್ತಲೂ ಕಟ್ಟೆ ಕಟ್ಟಿಸಲಾಗಿದೆ. ಪಾದಚಾರಿಮಾರ್ಗ, ಲ್ಯಾನ್‌, ಹುಲ್ಲು ಹಾಸಿಗೆ, ವಿಶ್ರಾಂತಿ ಬೆಂಚು, ಮಕ್ಕಳ ಆಟಿಗೆ ಸಾಮಗ್ರಿ ಅಳವಡಿಕೆ, ಅಲಂಕಾರಿಕ ಸಸ್ಯಗಳು, ಹೂ ಗಿಡಗಳು ಹಾಗೂ ನೆರಳು ಕೊಡುವ ಸಸಿಗಳನ್ನು ನೆಡಲಾಗಿದೆ. ಕೊಳವೆಬಾವಿಯಿಂದ ಪೈಪ್‌ಲೈನ್‌ ಮೂಲಕ ಉದ್ಯಾನಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿರುವುದು ಗಮನ ಸೆಳೆಯುತ್ತಿದೆ.

ಹೊಸದುರ್ಗ ಪಟ್ಟಣದಲ್ಲಿಯೇ ಇಲ್ಲದ ಉದ್ಯಾನ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವುದು ಉಳಿದ ಗ್ರಾಮ ಪಂಚಾಯಿತಿಗಳಿಗೂ ಮಾದರಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಇಒ ಡಾ. ನಂದಿನಿ ದೇವಿ ಇಲ್ಲಿಗೆ ಭೇಟಿ ನೀಡಿ ಉದ್ಯಾನ ನಿರ್ಮಾಣದ ಕಾರ್ಯ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

**
ಉದ್ಯೋಗ ಖಾತ್ರಿ ಯೋಜನೆಯ ಅಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಉಪಯೋಗ ಕಾಮಗಾರಿಗಳಿಗೆ ಪ್ರಾಶಸ್ತ್ಯ ನೀಡಿ ಅಭಿವೃದ್ಧಿಪಡಿಸಲಾಗುತ್ತಿದೆ.
-ಜಿ. ಶೇಖರಪ್ಪ, ಪಿಡಿಒ, ಗ್ರಾಮ ಪಂಚಾಯಿತಿ, ದೇವಿಗೆರೆ

**
ಉದ್ಯಾನ ನಿರ್ಮಾಣದಿಂದಾಗಿ ಈ ಸ್ಥಳವು ಪ್ರವಾಸಿ ಸ್ಥಳವಾಗಿ ಪರಿವರ್ತನೆಯಾಗಿದೆ. ಇದರಿಂದ ಈ ಭಾಗದ ಶಾಲಾ ಮಕ್ಕಳು ಹಾಗೂ ಜನರಿಗೆ ಅನುಕೂಲವಾಗಲಿದೆ.
-ಎಸ್‌.ಪಿ. ಸಂತೋಷ್‌, ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT