ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಆನ್‌ಲೈನ್‌, ಆಫ್‌ಲೈನ್‌ ಶಿಕ್ಷಣ; ಮಕ್ಕಳೊಂದಿಗೆ ಸಂಪರ್ಕ ‘ನಿರಂತರ’

21 ಸಾವಿರ ವಿದ್ಯಾರ್ಥಿಗಳನ್ನು ತಲುಪುವ ಗುರಿ
Last Updated 8 ಜೂನ್ 2021, 4:50 IST
ಅಕ್ಷರ ಗಾತ್ರ

ಹೊಳಲ್ಕೆರೆ: ಕೋವಿಡ್ ಪರಿಣಾಮ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಿದ್ದು, ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತಿದ್ದಾರೆ. ಪ್ರೌಢಶಾಲೆ, ಕಾಲೇಜು ಹಂತದಲ್ಲಿ ಆನ್‌ಲೈನ್‌ ಶಿಕ್ಷಣ ನಡೆಯುತ್ತಿದ್ದು, ಕೆಲವು ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಚಟುವಟಿಕೆ ಸ್ಥಗಿತವಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೋವಿಡ್ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲವಾದ್ದರಿಂದ ಇಲ್ಲಿನ ಶಿಕ್ಷಣ ಇಲಾಖೆ ವಿದ್ಯಾರ್ಥಿ
ಗಳೊಂದಿಗೆ ಸಂಪರ್ಕದಲ್ಲಿರಲು ಹೊಸ ಯೋಜನೆಯೊಂದನ್ನು ರೂಪಿಸಿದೆ.

1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನಿರಂತರ’ ಎಂಬ ಸಾಹಿತ್ಯ ಕೈಪಿಡಿ ಹೊರತಂದಿದೆ. ಶಿಕ್ಷಕರು ಮನೆಯಲ್ಲಿದ್ದುಕೊಂಡೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ, ಕಲಿಕೆಗೆ ಪ್ರೇರೇಪಿಸುವ ಉದ್ದೇಶ ಈ ಯೋಜನೆಯದು.

ಬಿಇಒ, ಬಿಆರ್‌ಸಿ, ಇಸಿಒ, ಬಿಆರ್‌ಪಿ, ಸಿಆರ್‌ಪಿಗಳುಳು ಸೇರಿ 20 ಸಂಪನ್ಮೂಲ ಶಿಕ್ಷಕರು, ಅನುಭವಿ ಶಿಕ್ಷಕರು ತಮ್ಮ ಅನುಭವಗಳನ್ನು ಕ್ರೋಢಿಕರಿಸಿ ಚಟುವಟಿಕೆ ಸಿದ್ಧಪಡಿಸಿದ್ದಾರೆ.

‘ತಾಲ್ಲೂಕಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1ರಿಂದ 7ನೇ ತರಗತಿಯವರೆಗೆ ಸುಮಾರು 21,000 ವಿದ್ಯಾರ್ಥಿಗಳು ದಾಖಲಾಗಿದ್ದು, ಇವರಲ್ಲಿ ‘ಇ’ ಸಾಧನಗಳ ಲಭ್ಯತೆಯ ಅಂಕಿ–ಅಂಶಗಳನ್ನು ಸಂಗ್ರಹಿಸಲಾಗಿದೆ. ಸ್ಮಾರ್ಟ್ ಫೋನ್ ಹೊಂದಿರುವವರು, ಇಂಟರ್ನೆಟ್ ಸಂಪರ್ಕ ಇಲ್ಲದ ಕೀ ಪ್ಯಾಡ್ ಮೊಬೈಲ್ ಇರುವವರು ಹಾಗೂ ಮೊಬೈಲ್ ಇಲ್ಲದವರ ಮಾಹಿತಿ ಸಂಗ್ರಹಿಸಲಾಗಿದೆ. ಈ ಮೂರೂ ವರ್ಗದ ವಿದ್ಯಾರ್ಥಿಗಳನ್ನು ದೂರದಿಂದಲೇ ಸಂಪರ್ಕಿಸಿ ಕಲಿಕೆಗೆ ಅನುಕೂಲಿಸಲು ಪ್ರತ್ಯೇಕ ವಿಧಾನಗಳನ್ನು ಸೂಚಿಸಲಾಗಿದೆ’ ಎಂದು ಬಿಇಒ ಸಿ.ಎಂ. ತಿಪ್ಪೇಸ್ವಾಮಿ ತಿಳಿಸಿದರು.

‘ಸ್ಮಾರ್ಟ್ ಫೋನ್ ಹೊಂದಿರುವವರಿಗೆ ವಾಟ್ಸ್‌ಆ್ಯಪ್‌ ಮೂಲಕ ಚಟುವಟಿಕೆ ಹಾಗೂ ಗೃಹಪಾಠಗಳನ್ನು ನೀಡಬೇಕು. ವಿದ್ಯಾರ್ಥಿಗಳು ತಾವು ಕಲಿತ ಅಂಶಗಳನ್ನು ವಾಟ್ಸ್‌ಆ್ಯಪ್‌ ಮೂಲಕವೇ ಶಿಕ್ಷಕರಿಗೆ ಕಳಿಸಬೇಕು. ಶಿಕ್ಷಕರು ಮಕ್ಕಳ ಕಲಿಕಾಂಶಗಳನ್ನು ಮೌಲ್ಯಮಾಪನ ಮಾಡಿ, ಸಲಹೆಗಳನ್ನು ನೀಡಬೇಕು. ಇಂಟರ್‌ನೆಟ್‌ ಸಂಪರ್ಕ ಇಲ್ಲದ ಕೀ ಪ್ಯಾಡ್ ಮೊಬೈಲ್ ಹೊಂದಿರುವ ಮಕ್ಕಳಿಗೆ ಕರೆ ಮಾಡಿ ಹಾಡು, ಗದ್ಯ, ಪದ್ಯವಾಚನ ಮಾಡುವುದು, ಪಾಠದ ವಿವರಣೆ ಕೊಡುವ ಮೂಲಕ ಕಲಿಕಾಂಶಗಳನ್ನು ಮನದಟ್ಟು ಮಾಡಿಸಬೇಕು. ಸಾಧ್ಯವಾದರೆ ಎಸ್.ಎಂ.ಎಸ್. ಮೂಲಕ ಗೃಹಪಾಠ ನೀಡಬಹುದು. ಮೊಬೈಲ್ ಹೊಂದಿರದ ವಿದ್ಯಾರ್ಥಿಗಳಿಗೆ ಅಭ್ಯಾಸದ ಹಾಳೆಗಳನ್ನು ರೂಪಿಸಿದ್ದು, ಮಕ್ಕಳಿಗೆ ತಲುಪಿಸಿ ಕಲಿಕೆಗೆ ಪ್ರೇರಣೆ ನೀಡಬೇಕು. ವಿದ್ಯಾರ್ಥಿಗಳನ್ನು ಮುಖಾಮುಖಿ ಭೇಟಿಯಾಗದೆ ಕಲಿಕೆ ಮುಂದುವರಿಯುವಂತೆ ನೋಡಿಕೊಳ್ಳಬೇಕು’ ಎಂಬುದು ಯೋಜನೆಯ ಉದ್ದೇಶ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ಜೂನ್ ತಿಂಗಳಲ್ಲಿ ನಲಿಕಲಿ 1ರಿಂದ 3ನೇ ತರಗತಿಯ ಸ್ಮಾರ್ಟ್ ಫೋನ್ ಇರುವ ಮಕ್ಕಳಿಗೆ ವಿಡಿಯೊ ಕಾಲ್ ಮೂಲಕ ಹಾಡು, ಕತೆ ಹೇಳುವುದು, ಕೀ ಪ್ಯಾಡ್ ಇರುವ ಮಕ್ಕಳಿಗೆ ಹಾಡು ಕೇಳಿಸುವುದು, ಅಕ್ಷರಗಳು, ಅಂಕೆಗಳನ್ನು ಪರಿಚಯಿಸುವುದು, ಸರಳ ಪ್ರಶ್ನಾವಳಿಗಳಿಗೆ ಉತ್ತರಿಸುವ ಚಟುವಟಿಕೆ ನೀಡಲಾಗಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ತಿಪ್ಪೇಸ್ವಾಮಿ ಸಲಹೆ ನೀಡಿದ್ದಾರೆ.

‘4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ವ್ಯಾಕರಣಾಂಶಗಳು, ಸಂಖ್ಯೆಗಳು, ಕುಟುಂಬದ ಸಂಬಂಧಗಳು, ನೀರಿನ ಮೂಲಗಳು, ದೇಹದ ಭಾಗಗಳನ್ನು ಪರಿಚಯಿಸುವ ಚಟುವಟಿಕೆ ನೀಡಲಾಗಿದೆ. 6 ಮತ್ತು 7ನೇ ತರಗತಿಗೆ ಕನ್ನಡ ವರ್ಣಮಾಲೆಯ ವಿಭಾಗಗಳು, ಗುಣಿತಾಕ್ಷರಗಳು, ಒತ್ತಕ್ಷರ, ಗಾದೆ ಸೇರಿದಂತೆ ವಿವಿಧ ವ್ಯಾಕರಣಾಂಶಗಳು, ಸಂಖ್ಯೆಗಳ ಪರಿಕಲ್ಪನೆ, ಗಣಿತದ ಮೂಲಕ್ರಿಯೆಗಳು, ರೇಖಾಗಣಿತದ ಕಲ್ಪನೆ, ಜೀವಿಗಳು, ನಿರ್ಜೀವಿಗಳು, ನೈಸರ್ಗಿಕ ಸಂಪನ್ಮೂಲಗಳು, ಇತಿಹಾಸದಅರ್ಥ, ಜಿಲ್ಲೆಗಳ ಪರಿಚಯ, ಭೂಪಟ
ದಲ್ಲಿ ಸ್ಥಳ ಗುರುತಿಸುವ ಚಟುವಟಿಕೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT