ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ದುರ್ವಾಸನೆ; ವಾಂತಿ, ಭೇದಿಯಿಂದ ತಲ್ಲಣ

ಮಲ್ಲಾಪುರ ಕೆರೆ ಸ್ವಚ್ಛತೆಗೆ ಮಹಾತ್ಮಗಾಂಧಿ ಕೆರೆ ಬಳಕೆದಾರರ ಸಂಘದಿಂದ ಒತ್ತಾಯ
Last Updated 9 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಹೊಂದಿಕೊಂಡಿರುವ ‘ಮಲ್ಲಾಪುರ ಕೆರೆ’ಯೂ ಅನೇಕ ವರ್ಷಗಳಿಂದಲೂ ತ್ಯಾಜ್ಯ ತುಂಬಿಕೊಂಡು ಗಬ್ಬು ನಾರುತ್ತಿದ್ದು, ಈ ದುರ್ವಾಸನೆಗೆ ಮಲ್ಲಾಪುರ ಗ್ರಾಮದ ಐದಾರು ಮಂದಿಗೆ ಈಚೆಯಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಕೆರೆ ಪಕ್ಕದಲ್ಲಿ ಓಡಾಡಿದರೆ ಸಾಕು ಚರಂಡಿಗಳಿಂದ ಹೊರಸೂಸುವ ದುರ್ವಾಸನೆಯಂತೆ ಗಬ್ಬು ನಾರುತ್ತದೆ. ಗಾಳಿ ಜೋರಾಗಿ ಬೀಸಿದಾಗ ಸಹಿಸಿಕೊಳ್ಳಲಾಗದಷ್ಟು ಸಂಕಟವೂ ಕೆಲವರಿಗೆ ಉಂಟಾಗುತ್ತಿದೆ. ಒಂದು ವಾರದೊಳಗೆ ಒಬ್ಬರ ನಂತರ ಮತ್ತೊಬ್ಬರಂತೆ ಐದಾರು ಮಂದಿ ವಾಂತಿ, ಭೇದಿಗೆ ತುತ್ತಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪಿಳ್ಳೇಕೆರೆನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡಿಗೆ ಕೆರೆ ಹೊಂದಿಕೊಂಡಿದೆ. ಇದು ಚಳಿಗಾಲವಾದ್ದರಿಂದ ಗಾಳಿಯ ರಭಸಕ್ಕೆ ಕೆರೆಯಿಂದ ಹೊರಸೂಸುವ ದುರ್ವಾಸನೆಯನ್ನು ವಿದ್ಯಾರ್ಥಿಗಳು, ಶಿಕ್ಷಕರು ಸಹಿಸಿಕೊಳ್ಳುವ ದುಸ್ಥಿತಿಯೂ ನಿರ್ಮಾಣವಾಗಿದೆ. ಅಲ್ಲದೇ, ವಿಪರೀತ ಸೊಳ್ಳೆಗಳಿಂದ ಕಚ್ಚಿಸಿಕೊಂಡೇ ಮಕ್ಕಳು ಪಾಠ ಕೇಳುತ್ತಿದ್ದು, ಹೈರಾಣಾಗಿದ್ದಾರೆ.

ಕಣ್ಣು ಹಾಯಿಸಿದಷ್ಟೂ ದೂರ ಪ್ಲಾಸ್ಟಿಕ್ ಬಾಟಲಿ, ಕವರ್, ಡಬ್ಬಿ, ಕಡ್ಡಿ ಹೀಗೆ ಕಸದ ರಾಶಿಯೇ ರಾಚುತ್ತದೆ. ನಗರದ ಒಳ ಚರಂಡಿಗಳಿಂದ ಹರಿಯುವ ಮಲ, ಮೂತ್ರ ಎಲ್ಲವೂ ಸೇರಿ ಇಡೀ ವಾತಾವರಣ ಕೊಳೆಚೆ ಗಟಾರದಂತಾಗಿದೆ. ರಾತ್ರಿ ಹೊತ್ತು ಮದ್ಯದ ಬಾಟಲಿಗಳ ಸದ್ದು. ಖಾಲಿಯಾದ ನಂತರ ಸೀಸೆಗಳು ಚೂರು ಚೂರಾಗಿ ಕೆರೆಯ ಒಡಲು ಸೇರುತ್ತಿವೆ.

ವಿದ್ಯಾನಗರ, ಬಸವೇಶ್ವರ ನಗರ ಸೇರಿ ನಗರದ ಯಾವುದೇ ಮೂಲೆಗಳಿಂದಲೂ ಕೆರೆಗೆ ಚರಂಡಿ ನೀರು ಹರಿಯದಂತೆ ನಗರಸಭೆ, ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು. ಹೂಳು ತೆಗೆಸುವ ಮೂಲಕ ಸಂಪೂರ್ಣ ಸ್ವಚ್ಛಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಮಹಾತ್ಮಗಾಂಧಿ ಕೆರೆ ಬಳಕೆದಾರರ ಸಂಘದ ಸಿದ್ಧಪ್ಪ, ಎಂ. ಬಸವರಾಜು, ಗುರುಲಿಂಗಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT