ಶುಕ್ರವಾರ, ಮೇ 14, 2021
32 °C
ಮಕ್ಕಳು, ಹಿರಿಯರಿಂದ ಈಗಲೂ ದೂರವಿದ್ದೇವೆ ಎಂದ ಶುಶ್ರೂಷಕಿಯರು

ಭಯವಿಲ್ಲ: ವಾರಿಯರ್‌ ಪದದಿಂದಲೇ ಉತ್ತೇಜನ

ಕೆ.ಎಸ್. ಪ್ರಣವಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಆರಂಭದಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡಲು ನಿಯೋಜಿಸಿದಾಗ ತುಂಬಾ ಭಯವಿತ್ತು. ಎಂಟತ್ತು ತಿಂಗಳು ಕೆಲಸ ಮಾಡಿದ್ದರಿಂದ ಭಯವಾಗಲಿ, ಆತಂಕವಾಗಲಿ ಈಗ ಇಲ್ಲ. ಕೊರೊನಾ ವಾರಿಯರ್ ಎಂಬ ಪದವೇ ನಮ್ಮನ್ನು ಉತ್ತೇಜಿಸುತ್ತಿದೆ. ಸೋಂಕಿತರನ್ನು ಗುಣಪಡಿಸಲು, ಇನ್ನಷ್ಟು ಸೇವೆಯಲ್ಲಿ ತೊಡಗಲು ಪ್ರೇರೇಪಿಸುತ್ತಿದೆ...’

ಕೋವಿಡ್ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರದ ‘ಕೋವಿಡ್‌ ಕೇರ್‌ ಸೆಂಟರ್‌’ನ ಸ್ಟಾಫ್‌ ನರ್ಸ್‌ಗಳಾದ ಮಂಜುಳಾ ಮತ್ತು ಆರ್‌.ರೋಷನಾರಾ ಅವರ ಮಾತಿದು. ಶುಶ್ರೂಷಕರ ಕಾರ್ಯವೈಖರಿ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಈ ಹಿಂದೆ ಪ್ರಾಣ ಭಯದೊಂದಿಗೆ ಕೆಲಸ ಮಾಡಿದ್ದೇವು. ಆದರೀಗ ಅದರ ಕುರಿತು ಯೋಚನೆ ಕೂಡ ಮಾಡುತ್ತಿಲ್ಲ. ಸೋಂಕಿತರನ್ನು ಗುಣಪಡಿಸುವುದು ನಮಗೆ ಸಿಕ್ಕ ಸೌಭಾಗ್ಯ ಎಂದು ಭಾವಿಸಿದ್ದೇವೆ. ಇಲ್ಲಿ ಕರ್ತವ್ಯ ನಿರ್ವಹಿಸಲು ತುಂಬಾ ಸಂತೋಷವಾಗುತ್ತಿದೆ’ ಎನ್ನುತ್ತಾರೆ ಇಬ್ಬರೂ ನರ್ಸ್‌ಗಳು.

‘ಹಿಂದಿನಂತೆಯೇ ಬೆಳಿಗ್ಗೆ 8ರಿಂದ ಮಧ್ಯಾಹ್ನ 2, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೂ 6 ಗಂಟೆ ಹಾಗೂ ರಾತ್ರಿ 8ರಿಂದ ಬೆಳಿಗ್ಗೆ 8ರವರೆಗಿನ 12 ಗಂಟೆಗಳ ಕೆಲಸವನ್ನು ಪಾಳಿವಾರು ಮಾಡುತ್ತಿದ್ದೇವೆ. ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯರ ಜತೆ ಶುಶ್ರೂಷಕಿಯರೂ ಶ್ರಮಿಸುತ್ತಿದ್ದಾರೆ. ಹೀಗಾಗಿ ದಾದಿಯರು ವಾರಿಯರ್‌ಗಳಾಗಿ ಹೊರಹೊಮ್ಮಿದ್ದಾರೆ’ ಎನ್ನುತ್ತಾರೆ ಮಂಜುಳಾ.

ವರ್ಷವಾದರೂ ಮಕ್ಕಳನ್ನು ನೋಡಿಲ್ಲ: ‘ನನಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಹಿಂದಿನ ವರ್ಷ ಕ್ವಾರಂಟೈನ್‌ ಅವಧಿ ಮುಗಿದರೂ ಅವರನ್ನು ಮುಟ್ಟುತ್ತಿರಲಿಲ್ಲ. ಈಗ ಮುನ್ನೆಚ್ಚರಿಕೆ ವಹಿಸುತ್ತಿರುವ ಕಾರಣ ಕ್ವಾರಂಟೈನ್‌ ಆಗುತ್ತಿಲ್ಲ. ಆದರೆ, ಕೋವಿಡ್ ಕರ್ತವ್ಯದಲ್ಲಿ ಇರುವ ಕಾರಣ ಚಿಕ್ಕಮಗಳೂರು, ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಸಂಬಂಧಿಕರ ಮನೆಯಲ್ಲಿ ಮಕ್ಕಳನ್ನು ಪ್ರತ್ಯೇಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇನೆ’ ಎನ್ನುತ್ತಾರೆ ಅವರು.

ಹಿರಿಯರಿಗಾಗಿ ಪ್ರತ್ಯೇಕ ಕೋಣೆ: ‘ಮನೆಯಲ್ಲಿ ಹಿರಿಯರು ಇರುವ ಕಾರಣ ಪ್ರತ್ಯೇಕ ಕೋಣೆಯಲ್ಲಿ ವಾಸವಿದ್ದೇನೆ. ಉಳಿದ ನರ್ಸ್‌ಗಳೂ ಇದನ್ನು ಅನುಸರಿಸುತ್ತಿದ್ದಾರೆ. ಸೋಂಕಿತರನ್ನು ಮುಟ್ಟಲು ಭಯವಿಲ್ಲ. ಪಿಪಿಐ ಕಿಟ್‌ ಸರಿಯಾಗಿ ಧರಿಸಿದರೆ, ಸೋಂಕು ಯಾವ ಕಾರಣಕ್ಕೂ ತಗುಲುವುದಿಲ್ಲ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ’ ಎನ್ನುತ್ತಾರೆ ಆರ್‌. ರೋಷನಾರಾ.

‘ನಿತ್ಯ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಪಿಪಿಐ ಕಿಟ್‌ ಧರಿಸಿ ಕೆಲಸ ಮಾಡುವುದು ಸುಲಭದ ಮಾತಲ್ಲ. ನಮಗೂ ಒಂದೊಂದು ಸಲ ಉಸಿರು ಕಟ್ಟಿದಂತಾಗುತ್ತದೆ. ಆದರೆ, ಕರ್ತವ್ಯ ಪಾಲನೆ ಮುಖ್ಯ. ಹೀಗಾಗಿ ಎಷ್ಟೇ ಬೆವೆತರೂ ಸಹಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು