ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಲಾಕ್‌ಡೌನ್‌ ಸಡಿಲು ಎದುರಾದ ಸವಾಲು

* ಮುನ್ನೆಚ್ಚರಿಕೆ ಮರೆತ ಜನ * ಸೋಂಕು ನುಸುಳುವ ಆತಂಕ
Last Updated 6 ಮೇ 2020, 3:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಘೋಷಣೆ ಮಾಡಿದ ಲಾಕ್‌ಡೌನ್‌ ನಿಯಮಾವಳಿ ಸಡಿಲಗೊಂಡ ಬಳಿಕ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಇದು ಸೋಂಕು ತರುವ ಆತಂಕವನ್ನೂ ಹೆಚ್ಚಿಸಿದ್ದು, ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲು ಎದುರಾಗಿದೆ.

ಸೋಂಕು ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿ ಮನೆಯಲ್ಲೇ ಇರುವಂತೆ ಜನರಿಗೆ ಸೂಚನೆ ನೀಡಿತ್ತು. ಒಂದೂವರೆ ತಿಂಗಳ ಕಾಲ ಮನೆಯಲ್ಲೇ ಇದ್ದವರು ಹೊರಬರಲು ಹಾತೊರೆಯುತ್ತಿದ್ದರು. ಮೇ 4ರ ಬಳಿಕ ಅನುಷ್ಠಾನಗೊಂಡ ಮೂರನೇ ಸುತ್ತಿನ ಲಾಕ್‌ಡೌನ್‌ನಲ್ಲಿ ಹಲವು ನಿಯಮಾವಳಿ ಬದಲಾದವು. ಸೋಂಕಿನ ಭೀತಿ ಇಲ್ಲದೇ ಎಲ್ಲರೂ ಬೀದಿಗೆ ಇಳಿದಿದ್ದಾರೆ.

ಚಿತ್ರದುರ್ಗ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ. ಮಾರ್ಚ್‌ 24ರ ಬಳಿಕ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ವಿದೇಶದಿಂದ ಬಂದು ಸೋಂಕಿನಿಂದ ಬಳಲುತ್ತಿದ್ದ ಭೀಮಸಮುದ್ರದ ಮಹಿಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನೇರ ಹಾಗೂ ಎರಡನೇ ಸಂಪರ್ಕ ಹೊಂದಿದವರಿಗೂ ಸೋಂಕು ಅಂಟಿಲ್ಲ. ಕೆಂಪುವಲಯದಲ್ಲಿದ್ದ ಭೀಮಸಮುದ್ರ ಈಗ ನಿರಾಳವಾಗಿದೆ.

ಪಾಲನೆ ಆಗದ ನಿಯಮ:ಜಿಲ್ಲೆಯ ಎಲ್ಲ ವಾಣಿಜ್ಯ ವ್ಯವಹಾರಗಳಿಗೂ ಅವಕಾಶ ಸಿಕ್ಕಿದೆ. ಗಣಿ, ಗಾರ್ಮೆಂಟ್ಸ್‌ ಸೇರಿ ಸಣ್ಣ ಕೈಗಾರಿಕೆಗಳು ಕೂಡ ಪುನರಾರಂಭಗೊಳ್ಳುತ್ತಿವೆ. ನಗರ ಹಾಗೂ ಪಟ್ಟಣ ಪ್ರದೇಶದ ಅಂಗಡಿಗಳು ಬಾಗಿಲು ತೆರೆದಿವೆ. ಸಾರಿಗೆ ಸಂಚಾರವೂ ಶುರುವಾಗಿದೆ. ಇಷ್ಟು ದಿನ ಮನೆಯಲ್ಲಿ ಇರುತ್ತಿದ್ದ ಜನರು ಈಗ ನಿರಾತಂಕವಾಗಿ ಸಂಚರಿಸುತ್ತಿದ್ದಾರೆ. ಇವರಲ್ಲಿ ಒಬ್ಬರು ಸೋಂಕಿತರು ಕಂಡುಬಂದರೂ ಪರಿಸ್ಥಿತಿ ಕೈಮೀರುವುದು ನಿಶ್ಚಿತ.

ದ್ವಿಚಕ್ರ ವಾಹನದಲ್ಲಿ ಒಬ್ಬರು, ಕಾರುಗಳಲ್ಲಿ ಇಬ್ಬರು ಅಥವಾ ಮೂರು ಜನರ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಆದರೆ, ಜಿಲ್ಲೆಯ ಯಾವ ಸ್ಥಳದಲ್ಲಿಯೂ ಇದು ಪಾಲನೆ ಆಗುತ್ತಿರುವಂತೆ ಕಾಣುತ್ತಿಲ್ಲ. ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಹಾಗೂ ಅದಕ್ಕಿಂತ ಹೆಚ್ಚು ಜನರು ಸಂಚರಿಸುವುದು ಸಾಮಾನ್ಯವಾಗಿದೆ. ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಕರ್ಫ್ಯೂ ಮಾದರಿಯ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ, ಎಲ್ಲ ಸಮಯದಲ್ಲಿಯೂ ಜನ ಸಂಚಾರವಿದೆ. ವಾಹನ ಹಾಗೂ ಜನದಟ್ಟಣೆ ದಿನದಿನಕ್ಕೂ ಹೆಚ್ಚಾಗುತ್ತಿದೆ.

ಅರ್ಥ ಕಳೆದುಕೊಂಡ ‘ಅಂತರ’:ಸೋಂಕು ಹರಡದಂತೆ ತಡೆಯುವಲ್ಲಿ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯ ಮುನ್ನೆಚ್ಚರಿಕೆ. ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ. ಮದುವೆ, ಅಂತ್ಯಕ್ರಿಯೆಗಳಿಗೆ ಸೇರುವ ಜನರ ಸಂಖ್ಯೆಗೂ ಮಿತಿ ಹೇರಲಾಗಿದೆ. ಎರಡು ದಿನಗಳಿಂದ ಈ ನಿಯಮಗಳನ್ನು ಜನರು ಪಾಲನೆ ಮಾಡುತ್ತಿರುವಂತೆ ಕಾಣುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿದರೆ ಇದು ದಿಟವಾಗುತ್ತದೆ.

ಬ್ಯಾಂಕು, ಸರ್ಕಾರಿ ಕಚೇರಿಗಳ ಸಮೀಪವೇ ಜನಜಂಗುಳಿ ನಿರ್ಮಾಣವಾಗುತ್ತಿದೆ. ಹೊರ ಜಿಲ್ಲೆಗೆ ಸಂಚರಿಸಲು ನೀಡುವ ಪಾಸ್‌ ವಿತರಣೆ ವ್ಯವಸ್ಥೆಯನ್ನು ಆನ್‌ಲೈನ್ ಮಾಡಿದರೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ತಾಲ್ಲೂಕು ಕಚೇರಿಗಳಿಗೆ ನಿತ್ಯ ನೂರಾರು ಜನ ಭೇಟಿ ನೀಡುತ್ತಿದ್ದಾರೆ. ವಾಣಿಜ್ಯ ಮಳಿಗೆಗಳ ಎದುರು ಬೆಳಿಗ್ಗೆ ಹಾಗೂ ಸಂಜೆ ಹೆಚ್ಚು ಗ್ರಾಹಕರು ಸೇರುತ್ತಿದ್ದಾರೆ. ಬಡಾವಣೆ, ಹಳ್ಳಿಗಳಲ್ಲಿ ಹರಟೆಕಟ್ಟೆಗಳು ಮರು ಚಾಲನೆ ಪಡೆದಿವೆ. ಮದ್ಯ ಮಾರಾಟ ಆರಂಭವಾದ ಬಳಿಕ ಸಂತೋಷಕೂಟಗಳು ಹೆಚ್ಚಾಗುತ್ತಿವೆ.

ಸೆರಗಿನಲ್ಲೇ ಇದೆ ಕೆಂಪುವಲಯ:ಚಿತ್ರದುರ್ಗ ಹಾಗೂ ದಾವಣಗೆರೆ ಹಲವು ದಶಕಗಳ ಹಿಂದೆ ಅವಿಭಜಿತ ಜಿಲ್ಲೆಯಾಗಿದ್ದವು. ಚಿತ್ರದುರ್ಗದ ಭಾಗವಾಗಿದ್ದ ದಾವಣಗೆರೆ ಅವಳಿ ಜಿಲ್ಲೆಯಂತೆ ಇವೆ. 60 ಕಿ.ಮೀ ದೂರದ ಈ ಜಿಲ್ಲಾ ಕೇಂದ್ರಗಳ ನಡುವೆ ಹಲವು ಬಗೆಯ ಸಂಬಂಧಗಳು ಬೆಸೆದುಕೊಂಡಿವೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕೆಂಪುವಲಯಕ್ಕೆ ಜಾರಿದ ಬಳಿಕ ಕೋಟೆನಾಡಿನ ಆತಂಕ ಹೆಚ್ಚಾಗಿದೆ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅವಳಿ ಜಿಲ್ಲೆಯನ್ನು ಬೆಸೆದಿದೆ. ದಾವಣಗೆರೆಯಲ್ಲಿ ಸೋಂಕು ಉಲ್ಬಣಗೊಂಡ ಬಳಿಕ ಜಿಲ್ಲಾ ಗಡಿಯ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚು ನಿಗಾ ಇಡಲಾಗಿದೆ. ಆದರೆ, ಸಿರಿಗೆರೆ, ಭರಮಸಾಗರ, ಸಾಸಲು ಹಾಗೂ ಜಗಳೂರು ಮಾರ್ಗವಾಗಿ ಮುಕ್ತ ಸಂಚಾರವಿದೆ. ಸೋಂಕು ಕಾಣಿಸಿಕೊಂಡ ಹಲವರು ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಆತಂಕವೂ ಕಾಡುತ್ತಿದೆ.

ಆಂಧ್ರಪ್ರದೇಶ ಗಡಿ ‘ನಿರಾತಂಕ’:ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿ ಜನ ಹಾಗೂ ವಾಹನ ಸಂಚಾರ ನಿರಾತಂಕವಾಗಿದೆ. ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದ್ದರೂ ಗ್ರಾಮೀಣ ಪ್ರದೇಶ ಮಾರ್ಗಗಳು ಬಂದ್‌ ಆಗಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ಎರಡೂ ರಾಜ್ಯಗಳ ನಡುವೆ ಜನ ಓಡಾಡುತ್ತಿದ್ದಾರೆ.

ಆಂಧ್ರಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ, ಮಡಕಶಿರಾ ವ್ಯಾಪ್ತಿಯ ಹಲವೆಡೆ ಸೋಂಕು ಉಲ್ಬಣವಾಗಿದೆ. ಆ ರಾಜ್ಯದ ಕೆಂಪು ವಲಯದಲ್ಲಿ ಗುರುತಿಸಿಕೊಂಡ ಪ್ರದೇಶಗಳು ಗಡಿಗೆ ಹೊಂದಿಕೊಂಡಿವೆ. ಲಾಕ್‌ಡೌನ್‌ ನಿಯಮ ಸಡಿಲಗೊಂಡ ಬಳಿಕ ಅನೇಕರು ಹೋಗಿ–ಬರುತ್ತಿದ್ದಾರೆ. ಮದ್ಯ ಖರೀದಿಗೆ ಆಂಧ್ರಪ್ರದೇಶದ ಜನರು ಕರ್ನಾಟಕಕ್ಕೆ ಬರುತ್ತಿದ್ದಾರೆ.

ಗೂಡ್ಸ್‌ ವಾಹನದಲ್ಲಿ ಪ್ರಯಾಣ:ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಬಸ್‌ ಸಂಚಾರಕ್ಕೆ ಹಲವು ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ನಗರದ ಹೊರವಲಯದಲ್ಲಿ ಸಂಚರಿಸುವ ಗೂಡ್ಸ್‌ ವಾಹನ ಹಾಗೂ ಆಟೊಗಳಲ್ಲಿ ಈ ಯಾವ ನಿಯಮಗಳು ಪಾಲನೆ ಆಗುತ್ತಿಲ್ಲ.

ಗ್ರಾಮೀಣ ಪ್ರದೇಶಗಳಿಗೆ ದೊಡ್ಡ ಆಟೊ ಹಾಗೂ ಗೂಡ್ಸ್‌ ವಾಹನಗಳು ಸಂಚಾರ ಆರಂಭಿಸಿವೆ. ತುರುವನೂರು ಗೇಟ್‌, ಚಳ್ಳಕೆರೆ ಗೇಟ್‌ ಸೇರಿ ನಗರದ ಹೊರವಲಯದಿಂದ ಸೇವೆ ಒದಗಿಸುತ್ತಿವೆ. ಆಸನದ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಲಾಗುತ್ತಿದೆ. ಅಂತರ ಕಾಪಾಡಿಕೊಳ್ಳುವುದಕ್ಕೆ ಇಲ್ಲಿ ಅರ್ಥವೇ ಇಲ್ಲದಂತಾಗಿದೆ. ಎರಡು ದಿನಗಳಿಂದ ಇವುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT