ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಜಾತ್ರೆ ಸಂಭ್ರಮಕ್ಕೆ ಕೊರೊನಾ ಅಡ್ಡಿ

ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವ ನಾಳೆಯಿಂದ
Last Updated 31 ಅಕ್ಟೋಬರ್ 2020, 4:48 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಆವರಣದಲ್ಲಿ ಪ್ರತಿವರ್ಷ ನವೆಂಬರ್‌ ಮೊದಲನೇ ವಾರ ನಡೆಯುತ್ತಿದ್ದ ರಂಗ ಜಾತ್ರೆಯ ಸಂಭ್ರಮಕ್ಕೆ ಈ ಬಾರಿ ಕೊರೊನಾ ಸೋಂಕು ಅಡ್ಡಿಯಾಗಿದೆ.

ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ರಂಗಭೂಮಿ ಮೂಲಕ ಜನರಲ್ಲಿ ಧರ್ಮಜಾಗೃತಿ ಮೂಡಿಸಿದ್ದರು. ಅವರ ಸೇವಾ ಚಟುವಟಿಕೆಯಿಂದ ಸ್ಫೂರ್ತಿ ಪಡೆದ ಪಂಡಿತಾರಾಧ್ಯ ಸ್ವಾಮೀಜಿ ಸಮಾಜಮುಖಿ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. 1987ರಲ್ಲಿ ಸ್ಥಾಪಿತವಾದ ಶಿವಕುಮಾರ ಕಲಾ ಸಂಘ ಪ್ರತಿವರ್ಷ ವೈವಿಧ್ಯಮಯ ನಾಟಕಗಳನ್ನು ಪ್ರದರ್ಶಿಸುತ್ತಿದೆ.

1997ರಲ್ಲಿ ಅಸ್ತಿತ್ವಕ್ಕೆ ಬಂದ ‘ಶಿವಸಂಚಾರ’ ಕಲಾವಿದರ ರಂಗ ಚಟುವಟಿಕೆ ವ್ಯಾಪ್ತಿ ವಿಸ್ತಾರವಾಗಿದೆ. 2003ರಲ್ಲಿ ಗ್ರೀಕ್‌ ಮಾದರಿಯ ಶಿವಕುಮಾರ ಬಯಲು ರಂಗ ಮಂದಿರ ನಿರ್ಮಿಸಲಾಗಿದೆ. 2004ರಿಂದ ರಂಗಕರ್ಮಿಗಳಿಗೆ ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 2007ರಿಂದ ರಂಗಸಂಚಾರ ಆರಂಭಗೊಂಡಿತ್ತು. 2008ರಲ್ಲಿ ಶಿವಕುಮಾರ ರಂಗಪ್ರಯೋಗ ಶಾಲೆ ಆರಂಭವಾಗಿದ್ದರಿಂದ ಒಂದು ವರ್ಷ ತರಬೇತಿ ಪಡೆದ ಕಲಾವಿದರನ್ನು ಮರುವರ್ಷದ ಶಿವಸಂಚಾರಕ್ಕೆ ಬಳಸಿ ಕೊಳ್ಳಲಾಗುತ್ತಿದೆ. ಶಿವಸಂಚಾರ ಕಲಾವಿದರ ನಾಟಕ ಮೊದಲು ನವೆಂಬರ್‌ನಲ್ಲಿ ಇಲ್ಲಿ ಪ್ರದರ್ಶನಗೊಂಡ ನಂತರ ದೇಶದ ಎಲ್ಲೆಡೆ ಪ್ರದರ್ಶನದ ಸಂಚಾರ ಪ್ರಾರಂಭವಾಗುತ್ತಿತ್ತು.

ಪ್ರತಿವರ್ಷ ಇಲ್ಲಿನ ಗ್ರೀಕ್‌ ಮಾದರಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ನಾಟಕೋತ್ಸವಕ್ಕೆ ಎರಡು ದಿನ ಮುಂಚಿತವಾಗಿಯೇ ಇಲ್ಲಿನ ಮಠದ ಕಟ್ಟಡ, ಶಾಲೆ–ಕಾಲೇಜು ಸೇರಿ ಇನ್ನಿತರ ಕಟ್ಟಡ, ಬೀದಿಗಳು ವಿದ್ಯುತ್‌ ದೀಪ, ತಳಿರು ತೋರಣಗಳಿಂದ ಜಗಮಗಿಸುತ್ತಿದ್ದವು. ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ರಾಜ್ಯದ ಎಲ್ಲೆಡೆಯಿಂದ ರಂಗ ತಂಡಗಳು, ನೃತ್ಯ ಕಲಾವಿದರು, ರಂಗಾಸಕ್ತರು, ವಿದ್ವಾಂಸರು, ಸಾಹಿತಿಗಳು, ಚಿಂತಕರು, ಮಠಾಧೀಶರು, ರಾಜಕಾರಣಿಗಳು ಬರುತ್ತಿದ್ದರು. ಬೆಳಿಗ್ಗೆಯಿಂದ ರಾತ್ರಿವರೆಗೂ ವಿಭಿನ್ನ ಕಾರ್ಯಕ್ರಮಗಳು ಜರುಗುತ್ತಿದ್ದವು. ಏಳು ದಿನವೂ ಹಬ್ಬದ ವಾತಾವರಣ ಆವರಿಸುತ್ತಿತ್ತು.

7 ದಿನ ನಡೆಯುವ ಕಾರ್ಯಕ್ರಮ ವವನ್ನು www.shivasanchara.org, ಶಿವಸಂಚಾರ–ಸಾಣೇಹಳ್ಳಿ ಫೇಸ್‌ಬುಕ್ ಗ್ರೂಪ್‌, ಮತ್ತೆ ಕಲ್ಯಾಣ ಫೇಸ್‌ಬುಕ್ ಪೇಜ್, shivasanchara ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರಿಂದ ಸಾಣೇಹಳ್ಳಿಯಲ್ಲಿ ನಡೆಯುತ್ತಿದ್ದ ಬಾಹ್ಯ ಅಲಂಕಾರ ಸ್ಥಗಿತವಾಗಿದೆ. ಹೆಚ್ಚು ಜನರು ಸೇರಲಿಕ್ಕೆ ಅವಕಾಶ ಇಲ್ಲದಂತಾಗಿದೆ.

***

ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವ ಆಯೋಜಿಸಲಾಗಿದೆ. ಈ ಬಾರಿ ಅಂತರ್ಜಾಲದಲ್ಲಿ ಹೆಚ್ಚಿನ ಜನರು ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT