ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ

ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ
Last Updated 30 ಸೆಪ್ಟೆಂಬರ್ 2020, 4:09 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಯಥೇಚ್ಛವಾಗಿದೆ. ಇದರಿಂದ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದೆ. ಸೋಂಕು ಇರುವ ಹಾಗೂ ಸೋಂಕು ಇದ್ದರೂ ಯಾವುದೇ ಲಕ್ಷಣಗಳು ಇಲ್ಲದೇ ಇರುವ ಮತ್ತು 50 ವರ್ಷ ಮೇಲ್ಪಟ್ಟ ಸೋಂಕಿತರು ಸೇರಿದಂತೆ ಕೊರನಾಗೆ ಸಂಬಂಧಿಸಿದ ಎಲ್ಲ ತರಹದ ಸೋಂಕಿತರನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಗಳಲ್ಲಿ (ಡಿಸಿಎಚ್) ಚಿಕಿತ್ಸೆ ನೀಡಬೇಕು. ಅದಕ್ಕಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಸೋಂಕು ಹರಡದಂತೆ ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಕೊರೊನಾ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳು, ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್‌ಗಳ ಜತೆ ಲಸಿಕೆಗಳು, ಮಾತ್ರೆ, ಉಸಿರಾಟದ ಸಮಸ್ಯೆ ಇರುವ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ, ಆಂಬುಲೆನ್ಸ್ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ನಾಯಕನಹಟ್ಟಿ ಕೋವಿಡ್‌–19 ಆಸ್ಪತ್ರೆಯಲ್ಲಿ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಅದಕ್ಕಾಗಿ ವೈದ್ಯರು ಮತ್ತು ಶುಷ್ರೂಷಕರು, ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಸೇರಿ ಎಲ್ಲ ಹಂತದ ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಿರಬೇಕು ಎಂದು ಸೂಚಿಸಿದರು.

ಕರ್ತವ್ಯನಿರತ ವೈದ್ಯರು ನಿತ್ಯ ಮೂರು ಬಾರಿ ಸೋಂಕಿತರ ಬಳಿ ತೆರಳಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು ಹಾಗೂ ದಿನದ 24 ಗಂಟೆಯೂ ಪಾಳಿ ಮಾದರಿಯಲ್ಲಿ ಕರ್ತವ್ಯದಲ್ಲಿರಬೇಕು ಎಂದು ಸೂಚಿಸಿದರು. ಆರೋಗ್ಯ ಸಿಬ್ಬಂದಿ ಅಫ್ರೋಜ್‌ ಬಾಷಾ, ಶೈಲಜಾ, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT