ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ತವ್ಯ ಸಿಕ್ಕಿದ್ದೆ ಸುವರ್ಣವಕಾಶ

ಅಭಿಪ್ರಾಯ ಹಂಚಿಕೊಂಡ ಕಿರಿಯ ಆರೋಗ್ಯ ಸಹಾಯಕ ಟಿ.ಜಿ. ರಂಗಾರೆಡ್ಡಿ
Last Updated 16 ಜೂನ್ 2020, 18:00 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಹೊರ ರಾಜ್ಯಗಳಿಂದಜಿಲ್ಲೆಗೆ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಇದರಲ್ಲಿ ಆರೋಗ್ಯ ಸಹಾಯಕ-ಸಹಾಯಕಿಯರ ಶ್ರಮವೂ ಹೆಚ್ಚಿದೆ. ಕೋವಿಡ್ ವಿರುದ್ಧ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೆ ಸುವರ್ಣವಕಾಶ...’

‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್’ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕ, ಕೋವಿಡ್ ಕುಂದುಕೊರತೆ ವಿಭಾಗದ ಟಿ.ಜಿ. ರಂಗಾರೆಡ್ಡಿ ಅವರ ಮಾತಿದು. ‘ಆರೋಗ್ಯ ಸಹಾಯಕರ’ ಕಾರ್ಯವೈಖರಿ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

‘ಎಲ್ಲೆಲ್ಲಿ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತೊ ಆ ಸ್ಥಳಗಳಲ್ಲಿ ಹೊರ ರಾಜ್ಯಗಳಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಿದ್ದೇವೆ. ಅವರಿಗೆ ನಮ್ಮ ದೂರವಾಣಿ ನಂಬರ್ ನೀಡಿ ಸಮಸ್ಯೆಯಾದಲ್ಲಿ ಕರೆ ಮಾಡಲು ಹೇಳಿದ್ದೇವೆ. ರಕ್ತದೊತ್ತಡ, ಮಧುಮೇಹ ಸೇರಿ ಇತರೆ ರೋಗಗಳಿಂದ ಬಳಲುವವರಿಗೆ ಔಷಧ ಕೊಟ್ಟಿದ್ದೇವೆ. ಪಿಪಿಇ ಕಿಟ್ ಧರಿಸಿದ್ದ ನೌಕರರು ಸಂಬಂಧಿಸಿದವರಿಗೆ ತಲುಪಿಸಿದ್ದಾರೆ’ ಎಂದು ತಿಳಿಸಿದರು.

‘ಗುಜರಾತಿನ ಅಹಮದಾಬಾದ್, ಸೂರತ್‌, ಮಹಾರಾಷ್ಟ್ರ, ಮೀರಜ್, ರಾಜಸ್ಥಾನ, ಬಿಹಾರ ಹೀಗೆ ವಿವಿಧ ರಾಜ್ಯಗಳಿಂದ ಅನೇಕ ಮಂದಿ ಲಾಕ್‌ಡೌನ್ ನಂತರ ಬಂದರು. ಅವರೆಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಸಮುದಾಯಕ್ಕೆ ಹರಡದಂತೆ ನೋಡಿಕೊಂಡಿದ್ದೇವೆ. ದೆಹಲಿಯಿಂದ ಮೃತದೇಹವೊಂದು ಬಂದಿತ್ತು. ಸಮಸ್ಯೆಯಾಗದಂತೆ ಸಮರ್ಪಕವಾಗಿ ಜವಾಬ್ದಾರಿ ನಿಭಾಯಿಸಿದ್ದೇವೆ’ ಎಂದು ಕಾರ್ಯವೈಖರಿಯನ್ನು ವಿವರಿಸಿದರು.

‘ಲಾಕ್‌ಡೌನ್‌ ವೇಳೆ ಅನಾರೋಗ್ಯಕ್ಕೀಡಾದವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದೇವೆ. ಹಗಲು-ರಾತ್ರಿ ಎನ್ನದೇ ಶ್ರಮಿಸಿದ್ದೇವೆ. ನಡುರಾತ್ರಿ ಕರೆ ಮಾಡಿದರೂ ಶರವೇಗದಲ್ಲಿ ಸ್ಪಂದಿಸಿದ್ದೇವೆ. ಚೆಕ್‌ಪೋಸ್ಟ್‌ ಕರ್ತವ್ಯ ನಿರತ ಪೊಲೀಸರು, ಅಧಿಕಾರಿಗಳು ಕರೆ ಮಾಡಿ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ತೆರಳಿದ್ದೇವೆ. ಕೋವಿಡ್ ಸಮಯದಲ್ಲಿ ಸೇವೆ ಮಾಡುವ ಭಾಗ್ಯ ದೊರೆತಿದ್ದು ಪುಣ್ಯ’ ಎಂದು ಹೇಳಿದರು.

‘ಕ್ವಾರಂಟೈನ್‌ಗೆ ದಾಖಲಾದ ಶಂಕಿತರು ಹಾಗೂ ಸೋಂಕಿತರು ಗುಣಮುಖರಾದ ಬಳಿಕ ನಮ್ಮನ್ನು ಸ್ಮರಿಸಿದ್ದಾರೆ. ಈ ಅವಧಿಯಲ್ಲಿ ಕೆಲಸ ಮಾಡಿದ್ದನ್ನುಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ನಿಗದಿತ ಸಮಯಕ್ಕಿಂತಲೂ ಹೆಚ್ಚು ಸಮಯ ದುಡಿದಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT