ಗುರುವಾರ , ಮೇ 13, 2021
40 °C
ಆಕ್ಸಿಜನ್‌ ಹಾಸಿಗೆ ಖಾಲಿ ಇಲ್ಲ ಎಂಬ ಫಲಕ ನೋಡಿ ಗಾಬರಿಗೊಳಗಾದ ಸಾರ್ವಜನಿಕರು

ಹಾಸಿಗೆ ನೀಡಲು ನಿರ್ಲಕ್ಷ್ಯ: ಸೋಂಕಿತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ನಿತ್ಯ ಏರಿಕೆ ಕಾಣುತ್ತಿದೆ. ಆದರೆ, ‘ಜೀವರಕ್ಷಕ ಆಕ್ಸಿಜನ್‌’ ಸೌಲಭ್ಯವುಳ್ಳ ಹಾಸಿಗೆ ಭರ್ತಿಯಾಗಿದ್ದು, ಖಾಲಿ ಇಲ್ಲ ಎಂಬುದಾಗಿ ಕೆಲ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ನಾಮಫಲಕ ಅಳವಡಿಸಲಾಗಿದೆ. ಇದರಿಂದಾಗಿ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಕೋವಿಡ್‌ ಆಸ್ಪತ್ರೆ ಮುಂಭಾಗ ಶುಕ್ರವಾರ ಉಸಿರಾಟದ ಸಮಸ್ಯೆಯಿಂದಾಗಿ ನಾಲ್ಕೈದು ರೋಗಿಗಳು ಪರದಾಡಿದ್ದಾರೆ. ಎರಡು ತಾಸು ಕಾಯ್ದರೂ ಅವರನ್ನು ಆಸ್ಪತ್ರೆಯೊಳಗೆ ದಾಖಲಿಸಿಕೊಂಡಿಲ್ಲ. ಇದರಿಂದಾಗಿ ಆಂಬುಲೆನ್ಸ್‌ನೊಳಗೆ ಆಕ್ಸಿಜನ್‌ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆಯೂ ಒಂದಿಬ್ಬರು ಇದೇ ರೀತಿ ಪರದಾಡಿದ್ದಾರೆ. ಆಂಬುಲೆನ್ಸ್‌ನೊಳಗೆ ಆಕ್ಸಿಜನ್ ಖಾಲಿಯಾಗಿದ್ದರೆ, ಅವರ ಜೀವ ಉಳಿಯುವುದು ಕಷ್ಟಕರವಾಗುತ್ತಿತ್ತು. ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಕೊನೆಗೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿತ್ಯ ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಜೀವರಕ್ಷಕ ಆಕ್ಸಿಜನ್‌, ಹಾಸಿಗೆ ಕೊರತೆ ಕಾಡುತ್ತಿದೆ. ಜೀವ ಉಳಿಸಿಕೊಳ್ಳಲು ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ, ಚಿಕಿತ್ಸೆಗೆ ಪರದಾಡುವ ಸ್ಥಿತಿಯನ್ನು ಈಗಾಗಲೇ ಕೆಲವರು ಅನುಭವಿಸುತ್ತಿದ್ದಾರೆ.

‘ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು ನಮ್ಮ ತಾಲ್ಲೂಕುಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಳವಾದರೆ, ತೊಂದರೆಯಾಗಲಿದೆ’ ಎಂದು ಗಮನ ಸೆಳೆದಿದ್ದರು. ‘ಆಕ್ಸಿಜನ್‌ಗೆ ತೊಂದರೆ ಇಲ್ಲ. ಆದರೆ, ಸಿಲಿಂಡರ್‌ಗಳ ಸಮಸ್ಯೆ ಇದ್ದು, ಸರಬರಾಜು ಮಾಡಲು ತೊಂದರೆ ಆಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದರು.

ಚಿತ್ರದುರ್ಗ ತಾಲ್ಲೂಕಿನ ರೋಗಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಉಂಟಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕರೆತರಲಾಯಿತು. ಆಕ್ಸಿಜನೇಟೆಡ್‌ ಹಾಸಿಗೆ, ವೆಂಟಿಲೇಟರ್‌ ಅಲಭ್ಯತೆಯ ಕಾರಣ ನೀಡಿ ರೋಗಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ. ಹಾಸಿಗೆ ಇದ್ದರು ನಮಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬ ಆರೋಪ ಕೂಡ ರೋಗಿಗಳ ಸಂಬಂಧಿಕರಿಂದ ಕೇಳಿಬರುತ್ತಿದೆ.

ಬಹುಹೊತ್ತು ಆಸ್ಪತ್ರೆಯ ಹೊರಗೆ ಪರದಾಡುತ್ತಿದ್ದ ರೋಗಿಯ ಸಂಬಂಧಿಕರು ಹಾಸಿಗೆ ಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸುವ ಪರಿಸ್ಥಿತಿ ಎದುರಾಗಿದೆ. ತೀವ್ರ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಉಸಿರಾಟದ ಸಮಸ್ಯೆ ಇರುವವರನ್ನು ಕೂಡಲೇ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.