ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಮನೆ ಮಾಲೀಕರ ಒತ್ತಡಕ್ಕೆ ವಾಸ್ತವ್ಯ ಬದಲು

ವಿದೇಶದಿಂದ ಮರಳಿ ಪೇಚಿಗೆ ಸಿಲುಕಿದ ವ್ಯಕ್ತಿ, ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಪೂರ್ಣ
Last Updated 22 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿದೇಶದಿಂದ ಮರಳಿ ‘ಕೋವಿಡ್‌–19’ ಪರೀಕ್ಷೆಗೆ ಒಳಗಾಗಿದ್ದ ಧವಳಗಿರಿ ಬಡಾವಣೆಯ ವ್ಯಕ್ತಿಯೊಬ್ಬರು ಮನೆ ಮಾಲೀಕರ ಕಿರುಕುಳಕ್ಕೆ ಬೇಸತ್ತು ವಾಸ್ತವ್ಯ ಬದಲಿಸಿದ್ದಾರೆ. ಕೊರೊನಾ ಸೋಂಕು ಪತ್ತೆಯಾಗದಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಲೀಕರು ಅವಕಾಶ ನೀಡಿಲ್ಲ.

ಕೊರೊನಾ ಸೋಂಕು ಪತ್ತೆಗೆ ನಡೆಸುವ ಪರೀಕ್ಷೆಗೆ ಒಳಗಾದವರು, ಹೊರ ರಾಜ್ಯ ಹಾಗೂ ವಿದೇಶದಿಂದ ಬಂದವರು ಮನೆ ಮಾಲೀಕರಿಂದ ಇಂತಹ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿ ಮನೋವೈದ್ಯರ ಬಳಿ ಕೌನ್ಸೆಲಿಂಗ್‌ ಪಡೆಯುತ್ತಿದ್ದಾರೆ. ಕೆಮ್ಮು, ಶೀಥ, ಜ್ವರದಿಂದ ಬಳಲುತ್ತಿರುವವರನ್ನು ಸೋಂಕು ಶಂಕಿತರೆಂದು ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ.

ಧವಳಗಿರಿ ಬಡಾವಣೆಯ ಬಾಡಿಗೆ ಮನೆಯಲ್ಲಿ ನೆಲೆಸಿದ ವ್ಯಕ್ತಿಯೊಬ್ಬರು ಮಾರ್ಚ್‌ ತಿಂಗಳಲ್ಲಿ ಫ್ರಾನ್ಸ್‌ ದೇಶದಿಂದ ಮರಳಿದ್ದರು. ಕೊರೊನಾ ಸೋಂಕು ಪತ್ತೆಗೆ ಇವರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು, ಗೃಹ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಇದರಿಂದ ಭೀತಿಗೊಂಡ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದರು. ಇದರಿಂದ ಬೇಸತ್ತ ವ್ಯಕ್ತಿ ಹಲವು ದಿನ ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

‘ಮಾದರಿಯ ಪರೀಕ್ಷಾ ವರದಿ ಬರುವವರೆಗೂ ಅವರು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಆಗಿದ್ದರು. ಸೋಂಕು ಇಲ್ಲ ಎಂಬುದು ದೃಢಪಟ್ಟ ಬಳಿಕ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಯಿತು. ಆದರೆ, ಮನೆಯ ಮಾಲೀಕರ ಕಿರಿಕಿರಿಗೆ ಬೇಸತ್ತ ಅವರು ತಾತ್ಕಾಲಿಕವಾಗಿ ವಾಸ್ತವ್ಯವನ್ನು ಬದಲಿಸಿದರು. ಇಂತಹ ಸಮಸ್ಯೆ ಎದುರಿಸಿದ ಹಲವರಿಗೆ ಆಪ್ತ ಸಮಾಲೋಚನೆ ನೀಡಲಾಗಿದೆ’ ಎಂದು ಮನೋವೈದ್ಯ ಡಾ.ಆರ್‌.ಮಂಜುನಾಥ್‌ ತಿಳಿಸಿದ್ದಾರೆ.

ಚಳ್ಳಕೆರೆಯ ಬಡಾವಣೆಯೊಂದರಲ್ಲಿ ವಾಸವಿದ್ದ ವ್ಯಕ್ತಿ ಹೊರ ರಾಜ್ಯದಿಂದ ಮರಳಿದ್ದರು. ಕ್ವಾರಂಟೈನ್‌ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡುತ್ತಿದ್ದಂತೆ ಮನೆಯ ಮಾಲೀಕರು ಕಿರುಕುಳ ನೀಡಲಾರಂಭಿಸಿದರು. ಮಾಲೀಕರು ಸಂಬಂಧಿಕರಾಗಿದ್ದರೂ ವಿನಾಯಿತಿ ಮಾತ್ರ ಸಿಗಲಿಲ್ಲ. ಇದರಿಂದ ಮನನೊಂದ ಅವರು ಸೋಂಕು ಇಲ್ಲವೆಂಬ ವರದಿ ಕೈಸೇರಿದ ಬಳಿಕ ಸ್ವಗ್ರಾಮ ಸೇರಿದರು.

‘ಸೋಂಕು ಪತ್ತೆಗೆ ಹೊರ ರಾಜ್ಯ, ವಿದೇಶದಿಂದ ಮರಳಿದವರ ಮೇಲೆ ನಿಗಾ ಇಡಲಾಗಿದೆ. ಇದರಿಂದ ಭೀತಿಗೊಂಡ ನೆರೆಹೊರೆಯವರು ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾರೆ. ಬೆಂಗಳೂರಿನಿಂದ ಹಳ್ಳಿಗೆ ಮರಳಿದವರಲ್ಲಿ ಕೆಮ್ಮು, ಶೀತ ಕಾಣಿಸಿಕೊಂಡರೂ ಅಕ್ಕ–ಪಕ್ಕದ ಮನೆಯವರು ದೂರವಾಣಿ ಕರೆ ಮಾಡಿ ದೂರು ನೀಡುತ್ತಿದ್ದಾರೆ. ನೆರೆ–ಹೊರೆಯವರನ್ನೂ ಅನುಮಾನಿಸುವ ಈ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ವಿವರಿಸಿದರು.

ಸೋಂಕು ಇಲ್ಲದಿದ್ದರೂ ಆತಂಕ:ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಆತಂಕಕ್ಕೆ ಒಳಗಾಗಿ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯೋಗಾಲಯದಿಂದ ಬಂದಿರುವ ಎರಡು ವರದಿ ‘ನೆಗೆಟಿವ್‌’ ಎಂದಿದ್ದರೂ ಇವರ ಭಯವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

‘ಇವರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಯಿತು. ಇದರಿಂದ ಖಿನ್ನತೆಗೆ ಒಳಗಾದ ವ್ಯಕ್ತಿಯಲ್ಲಿ ಆತಂಕ ಹೆಚ್ಚಾಗತೊಡಗಿತು. ಅವರ ಭಯವನ್ನು ಹೋಗಲಾಡಿಸಲು ಮತ್ತೊಮ್ಮೆ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಯಿತು. ದಿನ ಕಳೆದಂತೆ ಅವರಲ್ಲಿ ಭೀತಿ ಹೆಚ್ಚಾಗುತ್ತಿದೆ. ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಇಂತಹ ಭೀತಿಗೆ ಕಾರಣವಾಗುತ್ತಿವೆ’ ಎಂದು ಡಾ.ಮಂಜುನಾಥ್‌ ವಿವರಿಸಿದರು.

ಕ್ವಾರಂಟೈನ್‌ನಲ್ಲಿ ಇರುವವರು ಹಾಗೂ ಪರೀಕ್ಷೆಗೆ ಒಳಗಾದವರಲ್ಲಿ ‘ಸನ್‌ ಡೌನ್‌’ ಸಿಂಡ್ರೋಮ್‌ ಕಾಣಿಸಿಕೊಳ್ಳುತ್ತಿದೆ. ಕತ್ತಲು ಆವರಿಸುತ್ತಿದ್ದಂತೆ ಭಯ, ಎದೆ ಬಡಿತ ಹೆಚ್ಚಾಗುತ್ತಿದೆ. ಇದರಿಂದ ಗಂಟಲು ಒಣಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇನ್ನಷ್ಟು ಭೀತಿಗೊಳ್ಳುವ ಅನೇಕರು ಸೋಂಕಿನ ಲಕ್ಷಣವಿರಬಹುದು ಎಂಬ ತಪ್ಪು ಗ್ರಹಿಕೆಗೆ ಒಳಗಾಗುತ್ತಿರುವುದು ಗೊತ್ತಾಗಿದೆ.

ವೈದ್ಯರ ಮೇಲೆ ಹೆಚ್ಚಿದ ಒತ್ತಡ:ಕೊರೊನಾ ಸೋಂಕಿನ ಪರಿಣಾಮ ಮನೋವೈದ್ಯರ ಮೇಲೆ ಒತ್ತಡ ಹೆಚ್ಚಾಗಿದೆ. ಲಾಕ್‌ಡೌನ್‌ ವಿಸ್ತರಣೆಯಾದಂತೆ ವೈದ್ಯರ ಮೇಲಿನ ಒತ್ತಡ ಇನ್ನಷ್ಟು ಅಧಿಕವಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಡಾ.ಆರ್‌.ಮಂಜುನಾಥ್‌ ಮತ್ತು ಡಾ.ಶೋಭಾ ಎಂಬ ಇಬ್ಬರು ಮನೋವೈದ್ಯರಿದ್ದಾರೆ. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಇಬ್ಬರು ಮನೋವೈದ್ಯರು ಖಾಸಗಿ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಮನೋರೋಗಿಗಳಿಗೆ ಬೆರಳೆಣಿಕೆಯ ವೈದ್ಯರು ಚಿಕಿತ್ಸೆ ನೀಡುವುದು, ಆಪ್ತ ಸಮಾಲೋಚನೆ ನಡೆಸುವುದು ಕಷ್ಟಸಾಧ್ಯವಾಗಿದೆ.

ಸರ್ಕಾರಿ ವೈದ್ಯರು ಪ್ರತಿ ದಿನ ಒಂದು ತಾಲ್ಲೂಕಿನಲ್ಲಿ ಮನೋಚಿಕಿತ್ಸಾ ಶಿಬಿರ ನಡೆಸುತ್ತಿದ್ದರು. ಕೊರೊನಾ ಸೋಂಕು ಆತಂಕ ಸೃಷ್ಟಿಸಿದ ಬಳಿಕ ಶಿಬಿರ ಸ್ಥಗಿತಗೊಳಿಸಲಾಯಿತು. ಕ್ವಾರಂಟೈನ್‌ನಲ್ಲಿ ಇರುವವರು, ಶಂಕಿತರ ಸಮಾಲೋಚನೆ ಶುರುವಾಯಿಗಿದೆ. ಹೀಗಾಗಿ, ಮನೋವೈದ್ಯರು ಎಡೆಬಿಡದೇ ಕಾರ್ಯನಿರ್ವಹಿಸುವಂತಾಗಿದೆ.

ಔಷಧ ಅಭಾವ ಸಾಧ್ಯತೆ
ಲಾಕ್‌ಡೌನ್‌ ಅವಧಿ ಮುಂದುವರಿದರೆ ಮನೋ ಚಿಕಿತ್ಸೆಗೆ ನೀಡುವ ಔಷಧದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೇ 3ರವರೆಗೆ ಮಾತ್ರ ಔಷಧ ನೀಡಲಾಗುತ್ತಿದೆ. ಇದು ಮನೋ ರೋಗಿಗಳಲ್ಲಿ ಆತಂಕ ಮೂಡಿಸಿದೆ.

ಚಿತ್ರದುರ್ಗದ ಬಹುತೇಕ ರೋಗಿಗಳು ಬೆಂಗಳೂರಿನ ನಿಮ್ಹಾನ್ಸ್‌, ಶಿವಮೊಗ್ಗ ಹಾಗೂ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್‌ಡೌನ್ ಘೋಷಣೆಯಾದ ಬಳಿಕ ಆಯಾ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ನಿಮ್ಹಾನ್ಸ್‌ ಸೂಚನೆ ನೀಡಿತು. ಖಾಸಗಿ ಆಸ್ಪತ್ರೆಯ ರೋಗಿಗಳು ಜಿಲ್ಲಾ ಆಸ್ಪತ್ರೆಯ ಬಾಗಿಲು ಪಡೆಯುತ್ತಿದ್ದಾರೆ. ಇದರಿಂದ ಔಷಧಗಳಿಗೆ ಬೇಡಿಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT