ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ನಷ್ಟದಲ್ಲೂ ಸಂಚರಿಸುತ್ತಿವೆ ಕೆಎಸ್‌ಆರ್‌ಟಿಸಿ ಬಸ್

ನಿತ್ಯ ಕೇವಲ ₹ 40 ಸಾವಿರ ಸಂಗ್ರಹ * ಸರ್ಕಾರ, ಸಂಸ್ಥೆಗೆ ಸಂಚಾರದಿಂದ ಲಾಭವಿಲ್ಲ
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಒಂದು ವಾರದಿಂದ ಸಂಚಾರ ಆರಂಭಿಸಿವೆ. ಆದರೆ, ಸರ್ಕಾರಕ್ಕಾಗಲಿ, ಸಂಸ್ಥೆಗಾಗಲಿ ಯಾವುದೇ ರೀತಿಯಲ್ಲೂ ಲಾಭ ಆಗುತ್ತಿಲ್ಲ.

ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದಿಂದ 30 ಬಸ್‌ಗಳು ಸಂಚಾರ ನಡೆಸುತ್ತಿವೆ. ಮೇ 4ರಂದು ಈ ಪ್ರಕ್ರಿಯೆ ಆರಂಭವಾಗಿದ್ದು, ಪ್ರಯಾಣಿಕರು ಸಂಚಾರ ನಡೆಸಿದ ಪರಿಣಾಮ ಮೊದಲ ದಿನ ₹ 40 ಸಾವಿರ ಸಂಗ್ರಹವಾಗಿದೆ. ನಿತ್ಯವೂ ಇದೇ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದೆ. ಒಂದೊಂದು ದಿನ ₹ 35 ಸಾವಿರ ಸಂಗ್ರಹವಾಗುತ್ತಿದೆ.

ನಿಗದಿತ ಅವಧಿಯಲ್ಲಿ ಸಂಚರಿಸಿದರೂ ₹ 40 ಸಾವಿರಕ್ಕಿಂತ ಹೆಚ್ಚು ಸಂಗ್ರಹ ಆಗುತ್ತಿಲ್ಲ. ಇಂಧನ, ನಿಲ್ದಾಣ ಹಾಗೂ ಬಸ್‌ಗಳ ಶುಚಿತ್ವಕ್ಕೆ ತಗಲುವ ವೆಚ್ಚ ಎಲ್ಲಾ ಲೆಕ್ಕ ಹಾಕಿದರೂ ಲಾಭ ಇಲ್ಲದೇ ನಷ್ಟ ಅನುಭವಿಸುತ್ತಿದೆ. ಇದೇ ಕಾರಣಕ್ಕೆ ಸಂಸ್ಥೆಗೆ ಇನ್ನಷ್ಟೂ ಹೆಚ್ಚಿನ ಹೊರೆ ಆಗಬಾರದು ಎಂಬ ಉದ್ದೇಶಕ್ಕಾಗಿ 25 ಪ್ರಯಾಣಿಕರು ತುಂಬಿದ ನಂತರವೇ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ.

ಜಿಲ್ಲೆಯೊಳಗೆ ಸಂಚರಿಸುತ್ತಿರುವ ಇದೇ 30 ಬಸ್‌ಗಳಿಂದ ಲಾಕ್‌ಡೌನ್‌ ಆಗುವುದಕ್ಕೂ ಮೊದಲು ನಿತ್ಯ ₹ 1.5 ಲಕ್ಷ ಸಂಗ್ರಹವಾಗುತ್ತಿತ್ತು. ಪ್ರಯಾಣಿಕರ ಓಡಾಟವೂ ಹೆಚ್ಚಿತ್ತು. ಸಂಸ್ಥೆಗೆ ಲಾಭವೂ ಆಗುತ್ತಿತ್ತು. ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೂ 8ರಿಂದ 10 ಟ್ರಿಪ್‌ ಹೋಗುತ್ತಿದ್ದ ಬಸ್‌ಗಳು ಈಗ ಕೇವಲ ಎರಡರಿಂದ ಮೂರು ಟ್ರಿಪ್ ಮಾತ್ರ ಸಂಚರಿಸುತ್ತಿವೆ. ಜತೆಗೆ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಈಗಿರುವ ಸೀಟು‌ಗಳಲ್ಲೇ ಶೇ 50ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆ ಮಾಡಿ ಸಂಚರಿಸುತ್ತಿರುವ ಕಾರಣ ಸಂಗ್ರಹ ಮೊತ್ತ ಕಡಿಮೆ ಆಗಿದೆ.

ಬಸ್‌ಗಳು ಚಿತ್ರದುರ್ಗ ಮಾರ್ಗದಿಂದ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಹೀಗೆ ಎಲ್ಲಾ ತಾಲ್ಲೂಕುಗಳಿಗೂ ಸಂಚರಿಸುತ್ತಿವೆ. ತಲಾ 30 ಜನ ಚಾಲಕರು, ನಿರ್ವಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಯಂ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಹೆಚ್ಚಾಗಿ ಚಳ್ಳಕೆರೆಗೆ ಬಸ್‌ಗಳು ಸಂಚರಿಸುತ್ತಿವೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ತಾಲ್ಲೂಕಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈವರೆಗೂ ಮೊದಲ ಸ್ಥಾನದಲ್ಲಿದೆ. ಆನಂತರ ಹೊಸದುರ್ಗ, ಹಿರಿಯೂರು ಕ್ರಮವಾಗಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಹೊಳಲ್ಕೆರೆ, ಮೊಳಕಾಲ್ಮುರು ಭಾಗದ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಲು ಹೆಚ್ಚು ಒಲವು ತೋರದೇ ಇರುವುದೂ ಕಂಡು ಬಂದಿದೆ.

ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಬೈಕ್‌ಗಳಲ್ಲೇ ಅನೇಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಹೆಚ್ಚಿನ ಸ್ಪಂದನ ದೊರೆಯದ ಕಾರಣ ಬಸ್‌ಗಳ ಸಂಖ್ಯೆ ಹೆಚ್ಚಿಸದಿರಲು ವಿಭಾಗ ನಿರ್ಧರಿಸಿದೆ. ಸಂಖ್ಯೆ ಹೆಚ್ಚಳವಾದಲ್ಲಿ ಮಾತ್ರ ಇನ್ನಷ್ಟು ಬಸ್‌ಗಳು ರಸ್ತೆಗೆ ಇಳಿಯಲಿವೆ.

ಬಸ್‌ಗಳ ಸ್ವಚ್ಛತೆಗೆ ಆದ್ಯತೆ
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ನಿತ್ಯವೂ ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಬಸ್‌ಗಳು ಸಂಚರಿಸಿ ಡಿಪೊಗೆ ಹಿಂದಿರುಗಿದ ನಂತರ ಸ್ಯಾನಿಟೈಸರ್‌ ಸ್ಪ್ರೇ ಮೂಲಕ ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ. ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದಾರೆ.

*
ಲಾಕ್‌ಡೌನ್‌ ಕಾರಣಕ್ಕೆ ಒಂದೂವರೆ ತಿಂಗಳು ಬಸ್‌ಗಳು ರಸ್ತೆಗೆ ಇಳಿಯದೇ ಸಂಸ್ಥೆ ನಷ್ಟ ಅನುಭವಿಸಿದೆ. ಸಂಸ್ಥೆಯ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೌಕರರಿಗೆ ಏಪ್ರಿಲ್ ತಿಂಗಳ ಸಂಪೂರ್ಣ ವೇತನ ನೀಡುವ ಭರವಸೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಚಿತ್ರದುರ್ಗ ವಿಭಾಗದ ನೌಕರರ ವೇತನ ಕೈಸೇರುವ ಸಾಧ್ಯತೆ ಇದೆ.
-ವಿಜಯಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT