ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ತಲುಪಲಿದೆ ಭ್ರಷ್ಟಾಚಾರದ ದಾಖಲೆ: ಜಿ.ರಘು ಆಚಾರ್‌

ವಿಧಾನಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಹೇಳಿಕೆ
Last Updated 28 ಜನವರಿ 2023, 11:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ಕೈಗೆತ್ತಿಕೊಳ್ಳದೇ ಇದ್ದರೆ ದಾಖಲೆಗಳನ್ನು ಮತದಾರರ ಮನೆಬಾಗಿಲಿಗೆ ಕಾಂಗ್ರೆಸ್‌ ತಲುಪಿಸಲಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಜಿ.ರಘು ಆಚಾರ್‌ ತಿಳಿಸಿದರು.

‘ಅಭಿವೃದ್ಧಿ ಕಾಮಗಾರಿಯಲ್ಲಿ ಕಮಿಷನ್‌ ಪಡೆದಿರುವ ಬಗ್ಗೆ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ. ಶಾಸಕರನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಇದರಿಂದ ಅವಮಾನವಾಗಿದೆ. ತಿಪ್ಪಾರೆಡ್ಡಿ ಅವರು ಪ್ರಾಮಾಣಿಕರೇ ಆಗಿದ್ದರೆ ಸ್ವಯಂಪ್ರೇರಿತವಾಗಿ ತನಿಖೆಗೆ ಒಳಪಡಬೇಕು. ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಐತಿಹಾಸಿಕ ಸ್ಥಳಗಳ ನೂರು ಮೀಟರ್‌ ಸುತ್ತ ಬಹುಮಹಡಿ ಕಟ್ಟಡ ನಿರ್ಮಿಸಬಾರದು ಎಂಬುದಾಗಿ ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ನಿಯಮ ರೂಪಿಸಿದೆ. ಚಿತ್ರದುರ್ಗದ ಪ್ರಮುಖ ಪ್ರವಾಸಿತಾಣ ಕಲ್ಲಿನ ಕೋಟೆಯ ಮುಂಭಾಗ ನಗರಸಭೆಯ ಸದಸ್ಯರೊಬ್ಬರು ಬಹುಮಹಡಿ ಕಟ್ಟಡ ಕಟ್ಟಿದ್ದಾರೆ. ಇದಕ್ಕೆ ಶಾಸಕರ ಕುಮ್ಮಕ್ಕು ಇರುವಂತೆ ತೋರುತ್ತಿದೆ’ ಎಂದು ಆರೋಪಿಸಿದರು.

‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ವರ್ಷಗಳಿಂದ ಸರ್ಕಾರದ ಪ್ರಯೋಜನ ಪಡೆದವರು ಭ್ರಷ್ಟಾಚಾರದ ಸಂತ್ರಸ್ತರಾಗಿದ್ದಾರೆ. ಯಾವ ಯೋಜನೆಗೆ ಎಷ್ಟು ಹಣವನ್ನು ಜನಪ್ರತಿನಿಧಿ ಪಡೆದಿದ್ದಾರೆ ಎಂಬುದನ್ನು ಫಲಾನುಭವಿಗಳೇ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ, ಕಮಿಷನ್‌ ದಂಧೆಗೆ ಇದಕ್ಕಿಂತ ಸಾಕ್ಷ್ಯ ಬೇಕೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ‘ಶಾಸಕರ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಬಿಜೆಪಿ ಈವರೆಗೆ ಸ್ಪಷ್ಟನೆ ನೀಡಿಲ್ಲ. ಆರೋಪವನ್ನು ತಳ್ಳಿಹಾಕುವ ಪ್ರಯತ್ನವನ್ನೂ ಮಾಡಿಲ್ಲ. ಶಾಸಕರ ಮೇಲಿನ ದೂರಿನಲ್ಲಿ ಸತ್ಯ ಇದೆ ಎಂಬುದು ಬಿಜೆಪಿಯ ಮೌನದಿಂದ ಅರ್ಥವಾಗುತ್ತಿದೆ’ ಎಂದು ಕುಟುಕಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್‌, ಮುಖಂಡ ಓ.ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT