ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವರಕ್ಷಕ ಆಕ್ಸಿಜನ್‌, ಹಾಸಿಗೆಗೆ ಪರದಾಟ: ರೆಮ್‌ಡಿಸಿವಿರ್‌ಗೂ ಕೊರತೆ

ಜಿಲ್ಲಾಡಳಿತದ ಮಾಹಿತಿಗೂ ವಾಸ್ತವಕ್ಕೂ ತಾಳೆ ಆಗುತ್ತಿಲ್ಲ, ರೆಮ್‌ಡಿಸಿವಿರ್‌ಗೂ ಕೊರತೆ
Last Updated 28 ಏಪ್ರಿಲ್ 2021, 12:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನೂ ಸಾವಿರ ದಾಟಿಲ್ಲ. ಆಗಲೇ ಜೀವರಕ್ಷಕ ಆಕ್ಸಿಜನ್‌, ಹಾಸಿಗೆ ಹಾಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ಕಾಡುತ್ತಿದೆ. ಜೀವ ಉಳಿಸಿಕೊಳ್ಳಲು ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ, ಚಿಕಿತ್ಸೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಡಳಿತ ಮಾತ್ರ ಇದನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಿದೆ. ಐಸಿಯು, ಆಕ್ಸಿನೇಟೆಡ್‌ ಹಾಸಿಗೆ, ರೆಮ್‌ಡಿಸಿವಿರ್‌ ಚುಚ್ಚುಮದ್ದು ಹಾಗೂ ಕೋವಿಡ್‌ ಲಸಿಕೆಗೆ ಕೊರತೆ ಇಲ್ಲವೆಂದು ಹೇಳುತ್ತಿದೆ. ವಾಸ್ತವ ಪರಿಸ್ಥಿತಿಗೂ ಮತ್ತು ಜಿಲ್ಲಾಡಳಿತ ನೀಡುವ ಅಂಕಿ–ಅಂಶಗಳಿಗೂ ತಾಳೆ ಆಗುತ್ತಿಲ್ಲ.

ಹಾಸಿಗೆಗೆ ಅಲೆದಾಟ:ಹೊಸದುರ್ಗ ತಾಲ್ಲೂಕಿನ ರೋಗಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಉಂಟಾಗಿತ್ತು. ಖಾಸಗಿ ಆಸ್ಪತ್ರೆಯ ಸಲಹೆ ಮೇರೆಗೆ ಅವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕರೆತರಲಾಯಿತು. ಆಕ್ಸಿಜನೇಟೆಡ್‌ ಹಾಸಿಗೆ, ವೆಂಟಿಲೇಟರ್‌ ಅಲಭ್ಯತೆಯ ಕಾರಣ ನೀಡಿ ರೋಗಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ. ಬಹುಹೊತ್ತು ಆಸ್ಪತ್ರೆಯ ಹೊರಗೆ ಪರದಾಡುತ್ತಿದ್ದ ರೋಗಿಯ ಸಂಬಂಧಿಕರು, ಹಿರಿಯ ಅಧಿಕಾರಿಗಳು ಸಂಪರ್ಕಿ ಹಾಸಿಗೆ ಪಡೆಯಬೇಕಾಯಿತು.

ಕೋವಿಡ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ರೋಗಿಗಳಿಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ಲಭ್ಯವಾಗಿಲ್ಲ. ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಗೊಳಿಸಲು ರೋಗಿಗಳ ಕುಟುಂಬದ ಸದಸ್ಯರು ಮುಂದಾಗಿದ್ದರು. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗಲಿಲ್ಲ. ರೆಮ್‌ಡಿಸಿವಿರ್‌ ಚುಚ್ಚುಮದ್ದು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೋಗಿಗಳು ಇನ್ನೂ ಖಾಸಗಿ ಆಸ್ಪತ್ರೆಯಲ್ಲೇ ಕಾಯುತ್ತಿದ್ದಾರೆ.

‘ಸರ್ಕಾರಿ ಆಸ್ಪತ್ರೆಯಲ್ಲಿ 1,379 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 306 ಹಾಸಿಗೆಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.123 ಐಸಿಯು ಹಾಸಿಗೆಗಳಿದ್ದು, 12 ಜನರು ಆಕ್ಸಿಜನ್‌ ಹಾಸಿಗೆಯಲ್ಲಿ ಹಾಗೂ ಇಬ್ಬರು ಮಾತ್ರ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸಿಗೆ, ಆಕ್ಸಿಜನ್‌ ಸೇರಿ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಪ್ರತಿಕ್ರಿಯೆ.

ಐದು ಖಾಸಗಿ ಆಸ್ಪತ್ರೆ:ಜಿಲ್ಲೆಯ ಐದು ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಕೋವಿಡ್‌ ಚಿಕಿತ್ಸೆಗೆ ಅವಕಾಶ ಸಿಕ್ಕಿದೆ. ಇನ್ನೂ ಆರು ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಇದು ಇನ್ನೂ ಪರಿಶೀಲನೆಯ ಹಂತದಲ್ಲಿದೆ. ಆದರೆ, ಅನುಮತಿ ಸಿಗುವ ಮೊದಲೇ ಈ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.

ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ, ಬಸಪ್ಪ ಆಸ್ಪತ್ರೆ, ಅಕ್ಷಯ ಆಸ್ಪತ್ರೆ, ಅರ್ಜುನ್‌ ಡಯೋಗ್ನಸ್ಟಿಕ್‌ ಸೆಂಟರ್‌ ಹಾಗೂ ಕೃಷ್ಣ ನರ್ಸಿಂಗ್‌ ಹೋಮ್‌ಗೆ ಮಾತ್ರ ಕೋವಿಡ್‌ ಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಇಲ್ಲಿಗೆ ಅಗತ್ಯವಿರುವ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸೇರಿ ಅಗತ್ಯ ಔಷಧವನ್ನು ಜಿಲ್ಲಾಡಳಿತ ಪೂರೈಕೆ ಮಾಡುತ್ತಿದೆ. ಅನುಮತಿ ಪಡೆಯದೇ ಇರುವ ಆಸ್ಪತ್ರೆಗೆ ಔಷಧ ಹೇಗೆ ಲಭ್ಯವಾಗುತ್ತಿದೆ ಎಂಬ ಅನುಮಾನಕ್ಕೆ ಆರೋಗ್ಯ ಇಲಾಖೆಯ ಬಳಿ ಉತ್ತರವಿಲ್ಲ.

‘ಕೋವಿಡ್‌ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಅನುಮತಿ ಪಡೆಯುವುದು ಕಡ್ಡಾಯ. ಹಾಸಿಗೆ ಲಭ್ಯತೆ, ಸಿಬ್ಬಂದಿ ಸೇರಿ ಇತರ ಸೌಲಭ್ಯಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಕೆಪಿಎಂಇ ಕಾಯ್ದೆಯಡಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ’ ಎನ್ನುತ್ತಾರೆ ಡಾ.ಸಿ.ಎಲ್‌.ಫಾಲಾಕ್ಷ.

ಆಕ್ಸಿಜನ್‌ ವ್ಯತ್ಯಯ:ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ನಸುಕಿನ 4 ಗಂಟೆಯಲ್ಲಿ ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದವರು ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆಗೆ ಸಿಲುಕಿದ್ದರು. ಆಕ್ಸಿಜನ್‌ ಪೂರೈಕೆ ಏಕಾಏಕಿ ಸ್ಥಗಿತಗೊಂಡಿದ್ದರಿಂದ ವೈದ್ಯಕೀಯ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು. ರೋಗಿಗಳು ಹಾಗೂ ಸಂಬಂಧಿಕರು ದೂರವಾಣಿ ಕರೆ ಮಾಡಿ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನವೂ ವಿಫಲವಾಯಿತು.

‘ನಸುಕಿನ 4 ಗಂಟೆಯಲ್ಲಿ ಆಕ್ಸಿಜನ್‌ ಟ್ಯಾಂಕರ್‌ ಖಾಲಿ ಆಗಿತ್ತು. ಮತ್ತೊಂದು ಟ್ಯಾಂಕರ್‌ಗೆ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಕೊಂಚ ವಿಳಂಬವಾಗಿತ್ತು. ಇದರಿಂದ ಯಾವುದೇ ತೊಂದರೆ ಉಂಟಾಗಿಲ್ಲ. ವಿನಾ ಕಾರಣ ರೋಗಿಗಳು ಆತಂಕಗೊಂಡಿದ್ದರು’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್.

100 ವಯಲ್‌ ರೆಮ್‌ಡಿಸಿವಿರ್‌ ಅಗತ್ಯ:ಕೋವಿಡ್ ರೋಗಿಗಳ ಚಿಕಿತ್ಸೆಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ರೋಗಿ ಗುಣಮುಖರಾಗದಿದ್ದರೆ ಚುಚ್ಚುಮದ್ದು ಅನಿವಾರ್ಯ. ಖಾಸಗಿ ಆಸ್ಪತ್ರೆಗೆ ಅಗತ್ಯ ಇರುವಷ್ಟು ಚುಚ್ಚುಮದ್ದನ್ನು ಜಿಲ್ಲಾ ಔಷಧ ನಿಯಂತ್ರಕರು ಪೂರೈಕೆ ಮಾಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ರೆಮ್‌ಡಿಸಿವಿರ್‌ ಕೊರತೆ ಕಾಡುತ್ತಿದೆ.

‘ಜಿಲ್ಲೆಗೆ ನಿತ್ಯವೂ 100 ವಯಲ್‌ ರೆಮ್‌ಡಿಸಿವಿರ್ ಚುಚ್ಚುಮದ್ದಿನ ಅಗತ್ಯವಿದ್ದು, ಅಷ್ಟೇ ಪೂರೈಕೆಯೂ ಆಗುತ್ತಿದೆ. ಚುಚ್ಚುಮದ್ದು ಸರಬರಾಜಿನಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್‌.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳ ನೀಡುವ ಚಿಕಿತ್ಸೆಗೆ ಸರ್ಕಾರ ಈ ಹಿಂದೆ ಬೆಲೆ ನಿಗದಿ ಮಾಡಿತ್ತು. ಆದರೆ, ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಅಂತಹ ಆದೇಶ ಬಂದಿಲ್ಲ.

–ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT