ಮಂಗಳವಾರ, ಜೂನ್ 22, 2021
29 °C
45 ಜನರಲ್ಲಿ ಸೋಂಕು, 82 ಸೋಂಕಿತರು ಗುಣಮುಖ

ಚಿತ್ರದುರ್ಗದಲ್ಲಿ ಗುಣಮುಖರಾಗುವ ಸೋಂಕಿತರ ಸಂಖ್ಯೆ ದ್ವಿಗುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಗುಣಮುಖರಾಗುವವರ ಸಂಖ್ಯೆ ದ್ವಿಗುಣವಾಗುತ್ತಿದೆ. ಮಂಗಳವಾರ 45 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 82 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೋಂಕಿತರ ಸಂಖ್ಯೆ ಒಂದೂವರೆ ಸಾವಿರ ಗಡಿ ದಾಟಿದ್ದರಿಂದ ಕೋವಿಡ್‌ ಕೇರ್‌ ಸೆಂಟರ್‌ಗಳು ಹೆಚ್ಚಾಗಿವೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಗಣನೀಯ ಪ್ರಮಾಣದ ರೋಗಿಗಳು ಗುಣಮುಖರಾಗುತ್ತಿದ್ದಾರೆ.

ಮಂಗಳವಾರ 812 ಜನರ ಗಂಟಲು ಮತ್ತು ಮೂಗು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 45 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತರ ಸಂಖ್ಯೆ 1,596ಕ್ಕೆ ಏರಿಕೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನಲ್ಲಿ 14, ಹಿರಿಯೂರು ತಾಲ್ಲೂಕಿನಲ್ಲಿ 15, ಹೊಸದುರ್ಗದಲ್ಲಿ 9, ಮೊಳಕಾಲ್ಮುರು 4, ಚಳ್ಳಕೆರೆಯಲ್ಲಿ 2 ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದೆ. ಸೋಂಕಿತರ ಪೈಕಿ 1,146 ಜನರು ಗುಣಮುಖರಾಗಿದ್ದು, 22 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 430 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ 507 ಕಂಟೈನ್‌ಮೆಂಟ್‌ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ 11,117 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಈವರೆಗೆ 30,880 ಜನರ ಮಾದರಿ ಸಂಗ್ರಹಿಸಲಾಗಿದ್ದು, 23,3252 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 5,620 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.