ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ‘ಚಿಕಿತ್ಸೆ ಪಡೆದಿದ್ದೇ ಗೊತ್ತಾಗಲಿಲ್ಲ. ಆಟ ಆಡ್ಕೊಂಡಿದ್ವಿ’

ಕೋವಿಡ್ ಗೆದ್ದು ಅಜ್ಜಿಯೊಂದಿಗೆ ಬಿಡುಗಡೆಯಾದ ಇಬ್ಬರು ಮಕ್ಕಳು
Last Updated 8 ಜೂನ್ 2021, 5:33 IST
ಅಕ್ಷರ ಗಾತ್ರ

ಹಿರಿಯೂರು: ‘ಕೊರೊನಾ ಅಂದ್ರೆ ಏನು ಅಂತಾ ಕೇಳಿ ಗೊತ್ತಿತ್ತು. ಆದ್ರೆ ನಮ್ಗೆ ಭಯ ಆಗ್ಲಿಲ್ಲ. ನನ್ನ ಜೊತೆ ಒಂದೇ ಕೊಠಡಿಯಲ್ಲಿ ಅಜ್ಜಿ ಮತ್ತು ಅಣ್ಣ ಇದ್ದ ಕಾರಣಕ್ಕೆ ಆರಾಮವಾಗಿ ಆಟ ಆಡ್ಕೊಂಡು ದಿನ ಕಳೀತಿದ್ದೆ. ಒಮ್ಮೆ ತಿಂಡಿ, ಎರಡು ಬಾರಿ ಊಟ, ಕಾಫಿ ಎಲ್ಲ ಕೊಡ್ತಿದ್ದರು. ತುಂಬ ರುಚಿಯಾಗಿರ್ತಿತ್ತು. ಐದಾರು ದಿನ ಹೋಗಿದ್ದೇ ತಿಳೀಲಿಲ್ಲ...’

ನಗರದ ಮೋಕ್ಷಗುಂಡಂ ಶಿಕ್ಷಣ ಸಂಸ್ಥೆಯ ಕೋವಿಡ್ ಆರೈಕೆ ಕೇಂದ್ರದಿಂದ ಸೋಮವಾರ 50 ವರ್ಷದ ಅಜ್ಜಿ ಸಾವಿತ್ರಮ್ಮ ಮತ್ತು 11 ವರ್ಷದ ಅಣ್ಣ ಶರತ್ ಅವರೊಂದಿಗೆ ಬಿಡುಗಡೆ ಹೊಂದಿದ 6 ವರ್ಷದ ಆರ್ಯನ ಮಾತುಗಳಿವು.

ಬೆಂಗಳೂರಿನ ಸೇಂಟ್ ಮಾರ್ಥಾಸ್ ಶಾಲೆಯಲ್ಲಿ 6 ನೇ ತರಗತಿ ಓದುತ್ತಿರುವ ಶರತ್, ಯುಕೆಜಿಯ ಆರ್ಯ ಅವರ ತಂದೆ ವಸಂತಕುಮಾರ್ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ತಾಯಿ ಕವಿತಾ ಗೃಹಿಣಿ. ಲಾಕ್‌ಡೌನ್ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದ ಅಜ್ಜಿ, ಅಪ್ಪ–ಅಮ್ಮನೊಂದಿಗೆ ಕೋವಿಡ್ ಮಾದರಿ ಕೊಟ್ಟು, ಯಲ್ಲದಕೆರೆ ಗ್ರಾಮದ ಅಜ್ಜಿಯ ಮನೆಗೆ ಬಂದಿದ್ದರು. ಮನೆ ತಲುಪುವ ವೇಳೆಗೆ ಕವಿತಾ ಅವರನ್ನು ಹೊರತುಪಡಿಸಿ ಎಲ್ಲರಿಗೂ ಪಾಸಿಟಿವ್
ಬಂದಿತ್ತು.

ಕೊರೊನಾ ಸ್ಕೂಲ್: ‘ಕೊರೊನಾ ಮೂರನೇ ಅಲೆ ಮಕ್ಕಳಿಗೆ ಬರುತ್ತಂತೆ, ಹುಷಾರಾಗಿರಬೇಕು ಅಂತ ಅಪ್ಪ ಹೇಳ್ತಾ ಇದ್ದರು. ಆದರೆ, ನಮ್ಗೆ ಈಗಲೇ ಏಕೆ ಬಂತು ಎಂದು ತಿಳಿಯಲಿಲ್ಲ. ಸೋಂಕು ಹೇಗೆ ತಗುಲಿತು ಎಂಬುದು ಕೂಡ ಅರ್ಥ ಆಗಲಿಲ್ಲ. ನನ್ನ ತಮ್ಮನಿಗೆ ಕೊರೊನಾ ಬಗ್ಗೆ ಏನೂ ಗೊತ್ತಿರಲಿಲ್ಲ. ಹೀಗಾಗಿ ಆರಾಮವಾಗಿ ಇದ್ದ. ನಾವು ಚಿಕ್ಕವರು ಎಂಬ ಕಾರಣಕ್ಕೆ ವೈದ್ಯರು, ನರ್ಸ್‌ಗಳು, ಸೋಂಕಿತರು, ಆರೈಕೆ ಕೇಂದ್ರದವರು ವಿಶೇಷ ಆಸಕ್ತಿಯಿಂದ ನೋಡಿಕೊಂಡರು. ಇದೊಂದು ರೀತಿಯಲ್ಲಿ ಕೊರೊನಾ ಸ್ಕೂಲ್‌ನಂತೆ ಕಾಣುತ್ತಿತ್ತು’ ಎಂದು ಶರತ್ ವಿವರಿಸಿದ.

ಅಪ್ಪನದ್ದೇ ಚಿಂತೆ: ‘ನಮ್ಮ ಅಪ್ಪನನ್ನು ಬೇರೆ ಆಸ್ಪತ್ರೆಗೆ ಸೇರಿಸಿದ್ದರಿಂದ ಅವರು ಹೇಗಿದ್ದಾರೋ ಎಂಬ ಚಿಂತೆ ಕಾಡುತ್ತಿತ್ತು. ಇವತ್ತೇ ಅಪ್ಪನೂ ಬಿಡುಗಡೆ ಹೊಂದಿದ್ದರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇರುತ್ತಿರಲಿಲ್ಲ. ಕೊರೊನಾಗೆ ಹೆದರಬೇಕಿಲ್ಲ. ಏಕೆಂದರೆ ನಾವೆಲ್ಲ ಗುಣಮುಖರಾಗಿ ಬಂದಿದ್ದೇವಲ್ಲ. ಇಷ್ಟೇ ಸಾಕಲ್ಲವೇ’ ಎಂದು ಶರತ್ ಮರು ಪ್ರಶ್ನೆ ಹಾಕಿದ.

‘ಆರೈಕೆ ಕೇಂದ್ರದವರು ಮನೆಗೆ ಬಂದ ಅತಿಥಿಗಳಿಗಿಂತಲೂ ಹೆಚ್ಚಾಗಿ ನೋಡಿಕೊಂಡರು. ಆ ರೀತಿ ನೋಡಿಕೊಂಡಿದ್ದರಿಂದಲೇ ಬೇಗ ಗುಣಮುಖರಾಗಿದ್ದೇವೆ ಎಂದು ಅನಿಸುತ್ತದೆ’ ಎನ್ನುತ್ತಾರೆ ಸಾವಿತ್ರಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT