ಬುಧವಾರ, ನವೆಂಬರ್ 25, 2020
18 °C
ಕೊರೊನಾ ವಾರಿಯರ್‌ಗಳಲ್ಲಿ ಪೊಲೀಸರಿಗೆ ಹೆಚ್ಚಾಗಿ ತಗುಲಿದ ಸೋಂಕು

ಚಿತ್ರದುರ್ಗ: ಪೊಲೀಸ್ ಇಲಾಖೆಗೆ ಕೋವಿಡ್‌ ಬಾಧೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕೊರೊನಾ ಸೋಂಕು ನಿರ್ಮೂಲನೆಗೆ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ವಾರಿಯರ್‌ಗಳ ಪೈಕಿ ಪೊಲೀಸರಿಗೆ ಹೆಚ್ಚಾಗಿ ಕೋವಿಡ್‌ ಬಾಧಿಸಿದೆ. ಸೋಂಕಿನಿಂದ ದೂರವಿರಲು ಪೊಲೀಸರು ಕಾರ್ಯವೈಖರಿ ಬದಲಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಪೊಲೀಸ್‌ ಇಲಾಖೆಯ 267 ಸಿಬ್ಬಂದಿಗೆ ಸೋಂಕು ತಗುಲಿದ್ದು, ಒಬ್ಬ ಎಎಸ್‌ಐ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ 96 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವೈದ್ಯ, ಇಬ್ಬರು ಶುಶ್ರೂಷಕಿಯರು ಹಾಗೂ ಔಷಧ ವಿತರಕರೊಬ್ಬರು ಮೃತಪಟ್ಟಿದ್ದಾರೆ. ಮುಂಚೂಣಿಯಲ್ಲಿದ್ದು ಕೆಲಸ ಮಾಡಿದವರಲ್ಲಿ ಪೊಲೀಸರಿಗೆ ಸೋಂಕು ಬಾಧಿಸಲು ಕಾರ್ಯವೈಖರಿ ಕಾರಣವಾಗಿದೆ.


ಜಿ.ರಾಧಿಕಾ

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದಾಗ ಅತಿ ಹೆಚ್ಚು ಕೆಲಸ ಮಾಡಿದವರು ಪೊಲೀಸರು. ಜನರು ಮನೆಯಿಂದ ಹೊರಗೆ ಬಾರದಂತೆ ಎಚ್ಚರವಹಿಸಿದರು. ವಾಹನ ಸಂಚಾರ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮನೆಯಿಂದ ಹೊರಗೆ ಉಳಿಯುವುದು ಪೊಲೀಸರಿಗೆ ಅನಿವಾರ್ಯವೂ ಆಗಿತ್ತು. ಲಾಕ್‌ಡೌನ್‌ ನಿಯಮ ಸಡಿಲಗೊಂಡ ಬಳಿಕ ಆರಂಭವಾದ ಜನಸಂಚಾರ ಪೊಲೀಸರಿಗೆ ಸಮಸ್ಯೆ ಸೃಷ್ಟಿಸಿತು.

‘ಪೊಲೀಸರು ಜನಸಂದಣಿಯ ನಡುವೆ ಕೆಲಸ ಮಾಡುತ್ತಾರೆ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸೋಂಕು ನುಸುಳಿದ ನಿದರ್ಶನಗಳಿವೆ. ಬಂದೋಬಸ್ತ್‌, ಪ್ರತಿಭಟನೆ, ವಾಹನ ಸಂಚಾರ ನಿಯಂತ್ರಣದಂತಹ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂವಹನ ಏರ್ಪಡುತ್ತದೆ. ಹೀಗಾಗಿ, ಪೊಲೀಸರಿಗೆ ಸುಲಭವಾಗಿ ಸೋಂಕು ಅಂಟಿದ ಸಾಧ್ಯತೆ ಇದೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ.

ಜಿಲ್ಲೆಯಲ್ಲಿ ಸುಮಾರು 1,600 ಪೊಲೀಸರಿದ್ದಾರೆ. ಇವರಲ್ಲಿ 267 ಜನರಿಗೆ ಸೋಂಕು ಬಾಧಿಸಿದೆ ಎಂಬುದು ಗಮನಾರ್ಹ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯ ಸಂಚಾರಕ್ಕೆ ಅವಕಾಶ ಸಿಕ್ಕ ಬಳಿಕ ಪೊಲೀಸರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಸೋಂಕು ಕಾಣಿಸಿಕೊಂಡ ಮರುದಿನವೇ ಎಎಸ್‌ಐ ಮೃತಪಟ್ಟಿದ್ದು, ಇಲಾಖೆಯನ್ನು ತಲ್ಲಣಗೊಳಿಸಿತ್ತು. ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಪೊಲೀಸರಲ್ಲಿ ಧೈರ್ಯ ತುಂಬಿತು.

‘ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರ ಚಿಕಿತ್ಸೆಗೆ ತೆರಳುವಾಗ ಮುನ್ನೆಚ್ಚರಿಕೆ ಕೈಗೊಳ್ಳುತ್ತಾರೆ. ಸಮಾಜದಲ್ಲಿ ಜನರ ನಡುವೆ ಕೆಲಸ ಮಾಡುವ ಪೊಲೀಸರು, ವೈದ್ಯರಂತೆ ವೈಯಕ್ತಿಕ ಸುರಕ್ಷತಾ ಸಾಧನ ಬಳಸಲು ಸಾಧ್ಯವಿಲ್ಲ. ಯಾರಲ್ಲಿ ಸೋಂಕು ಇದೆ ಎಂಬುದನ್ನು ಅರಿಯದೇ ಕೆಲಸ ಮಾಡಬೇಕಾದ ಅನಿವಾರ್ಯತೆ ಪೊಲೀಸರಿಗೆ ಇದೆ’ ಎನ್ನುತ್ತಾರೆ ಎಸ್‌ಪಿ ರಾಧಿಕಾ.

ಸೋಂಕು ಹೆಚ್ಚಿದಂತೆ ಪೊಲೀಸರು ಮುನ್ನೆಚ್ಚರಿಕೆಗೆ ಆದ್ಯತೆ ನೀಡಿದ್ದಾರೆ. ಸೋಂಕು ಕಾಣಿಸಿಕೊಂಡ ಠಾಣೆಯನ್ನು ಸೀಲ್‌ಡೌನ್‌ ಮಾಡಿ, 55 ವರ್ಷ ಮೇಲ್ಪಟ್ಟವರಿಗೆ ಕಡಿಮೆ ಜವಾಬ್ದಾರಿ ನೀಡಿದ್ದಾರೆ. ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು ಹಾಗೂ ಫೇಸ್‌ ಶೀಲ್ಡ್‌ ನೀಡಿ ಎಚ್ಚರಿಕೆಯಿಂದ ಇರುವಂತೆ ಸಿಬ್ಬಂದಿಗೆ ತಿಳಿ ಹೇಳಲಾಗಿದೆ. ಸೋಂಕಿನ ಬಗೆಗೆ ಅರಿವು ಹೆಚ್ಚಾದಂತೆ ಕೋವಿಡ್‌ ಪ್ರಮಾಣ ಕಡಿಮೆ ಆಗಿದೆ. ಸದ್ಯ ಪೊಲೀಸ್‌ ಇಲಾಖೆಯ ಹತ್ತು ಸಿಬ್ಬಂದಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 

ವಾರಿಯರ್ಸ್‌ಗೆ ಸಿಕ್ಕಿಲ್ಲ ಪರಿಹಾರ

ಕೋವಿಡ್‌ನಿಂದ ಜಿಲ್ಲೆಯಲ್ಲಿ ಆರು ಜನ ವಾರಿಯರ್ಸ್‌ ಮೃತಪಟ್ಟಿದ್ದಾರೆ. ಇವರಲ್ಲಿ ಯಾರೊಬ್ಬರಿಗೂ ಸರ್ಕಾರ ಘೋಷಣೆ ಮಾಡಿದ ಪರಿಹಾರ ಸಿಕ್ಕಿಲ್ಲ.

ವೈದ್ಯರಿಗೆ ₹50 ಲಕ್ಷ ಹಾಗೂ ಶುಶ್ರೂಷಕರು, ಪೊಲೀಸರು ಸೇರಿದಂತೆ ಇತರ ಕೊರೊನಾ ವಾರಿಯರ್‌ಗಳಿಗೆ ₹30 ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಮೃತರಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದವರು ಇದ್ದಾರೆ. ಪರಿಹಾರಕ್ಕೆ ಸಂಬಂಧಿಸಿದ ಪತ್ರವ್ಯವಹಾರ ನಡೆದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

---

ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡೆವು. ಕುದಿಯುವ ನೀರಿನ ಹಬೆಯನ್ನು ನಿತ್ಯ ಎರಡು ಬಾರಿ ತೆಗೆದುಕೊಳ್ಳುವ ಅಭಿಯಾನ ಮಾಡಿದೆವು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ನೀಡಿದೆವು.

ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು