ಸೋಮವಾರ, ಜೂನ್ 21, 2021
29 °C

ಅಂತರ ಜಿಲ್ಲೆ ಸಂಚಾರಕ್ಕೆ ನಿರ್ಬಂಧ: ಡಿಸಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮೇ 10ರಿಂದ 24ರವರೆಗೆ ಲಾಕ್‌ಡೌನ್‌ ಘೋಷಣೆ ಮಾಡಿದ್ದು, ಜನರ ಅನಗತ್ಯ ಸಂಚಾರವನ್ನು ನಿರ್ಬಂಧಿಸಲು ಜಿಲ್ಲಾಡಳಿತ ಮುಂದಾಗಿದೆ. ಅಂತರ ಜಿಲ್ಲಾ ಸಂಚಾರವನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.

ಈವರೆಗೂ ಇದ್ದ ಮಾರ್ಗಸೂಚಿಯನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮಗಳನ್ನು ಇನ್ನಷ್ಟು ಕಠಿಣ ಮಾಡಲಾಗಿದೆ. ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

36 ಚೆಕ್‌ಪೋಸ್ಟ್‌: ‘ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಸಂಚಾರವನ್ನು ನಿರ್ಬಂಧಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ 36 ಚೆಕ್‌ಪೋಸ್ಟ್‌ ತೆರೆಯಲಾಗುತ್ತಿದೆ. ಆಂಧ್ರಪ್ರದೇಶದ ಗಡಿ ಹಾಗೂ ನೆರೆಯ ಜಿಲ್ಲೆಯನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಚೆಕ್‌ಪೋಸ್ಟ್‌ ಕಾರ್ಯನಿರ್ವಹಿಸಲಿವೆ. ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ತುರ್ತು ಕಾರಣ ಮತ್ತು ಅಗತ್ಯ ಸೇವೆ ಒದಗಿಸುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘1,500 ಪೊಲೀಸರು, 225 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಿಸಲಿದ್ದಾರೆ. ಲಸಿಕಾ ಕೇಂದ್ರ ಮತ್ತು ಆರ್‌ಟಿಪಿಸಿಆರ್‌ ಪ್ರಯೋಗಾಲಯದ ಎದುರು ಜನಜಂಗುಳಿ ಸೃಷ್ಟಿಯಾಗುತ್ತಿದೆ. ಇಲ್ಲಿಗೆ ಹೆಚ್ಚುವರಿಯಾಗಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ಬ್ಯಾರಿಕೇಡ್‌ ಅಳವಡಿಕೆ: ‘ಅಗತ್ಯ ವಸ್ತುಗಳ ಖರೀದಿಯ ಸಮಯವನ್ನು ಬೆಳಿಗ್ಗೆ 6ರಿಂದ 10ಕ್ಕೆ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ಮಾತ್ರ ಜನರು ಮನೆಯಿಂದ ಹೊರಗೆ ಬರಲು ಅವಕಾಶವಿದೆ. ಜನರ ಅನಗತ್ಯ ಸಂಚಾರವನ್ನು ನಿರ್ಬಂಧಿಸಲು ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಹಿರಿಯೂರು ಮತ್ತು ಚಳ್ಳಕೆರೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ’ ಎಂದು ವಿವರಿಸಿದರು.

‘ಚಿತ್ರದುರ್ಗ ನಗರದ ಸಂಚಾರ ದಟ್ಟಣೆ ಕಾಣಿಸುವ ರಸ್ತೆಗಳನ್ನು ಗುರುತಿಸಲಾಗುತ್ತಿದೆ. ಕಳೆದ ವರ್ಷದಂತೆ ಶಾಶ್ವತವಾಗಿ ಸಂಚಾರ ನಿರ್ಬಂಧಿಸಲಾಗುತ್ತದೆ. ವಿನಾ ಕಾರಣ ಹೊರಗೆ ಬರುವವರ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ 250ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದ್ದು, 500 ಜನರನ್ನು ಬಂಧಿಸಲಾಗಿದೆ’ ಎಂದರು.

ಮದುವೆಗೆ ಅವಕಾಶ: ‘ನಿಗದಿಯಾಗಿರುವ ವಿವಾಹ ನೆರವೇರಿಸಲು ಅವಕಾಶ ನೀಡಲಾಗಿದೆ. ಗರಿಷ್ಠ 50 ಜನರಿಗೆ ಅವಕಾಶ ನೀಡಲಾಗಿದೆ. ತಹಶೀಲ್ದಾರ್‌ ಬಳಿ ಪಾಸ್‌ ಪಡೆದು ಮದುವೆ ಮಾಡಬಹುದು. ಶವಸಂಸ್ಕಾರದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಐದಕ್ಕೆ ಮಿತಿಗೊಳಿಸಲಾಗಿದೆ. ಕಾರ್ಯನಿಮಿತ್ತ ಹೊರಗೆ ಸಂಚರಿಸುವವರು ಗುರುತಿನ ಚೀಟಿಯನ್ನು ತೋರಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಆಟೊ, ಟ್ಯಾಕ್ಸಿ, ಬಸ್‌ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ತುರ್ತು ಅಗತ್ಯಕ್ಕೆ ಮಾತ್ರ ಆಟೊ ಹಾಗೂ ಟ್ಯಾಕ್ಸಿ ಸೇವೆ ಒದಗಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಪಾಸ್‌ ಪಡೆಯಬೇಕು. ಉಳಿದಂತೆ ಯಾವುದೇ ವಿಚಾರಕ್ಕೂ ಪಾಸ್‌ ವಿತರಣೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

***

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅನಗತ್ಯವಾಗಿ ಸಂಚರಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸೋಂಕು ತಡೆಗಟ್ಟುಲು ಎಲ್ಲರೂ ಸಹಕರಿಸಬೇಕು.

-ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾಧಿಕಾರಿ

***

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುತ್ತದೆ. ವಾಹನ ಜಪ್ತಿ ಮಾಡಿ ಜೈಲಿಗೆ ಕಳುಹಿಸಲು ಅವಕಾಶವಿದೆ. ಎಚ್ಚರಿಕೆಯಿಂದ ವರ್ತಿಸುವ ಅಗತ್ಯವಿದೆ.

-ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ಯಾವ ಸೇವೆ ಲಭ್ಯ

* ಆಸ್ಪತ್ರೆ, ಔಷಧ ಅಂಗಡಿ, ವೈದ್ಯಕೀಯ ಸೌಲಭ್ಯ ಮಳಿಗೆ

* ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು ಮಳಿಗೆ

* ಮದ್ಯದಂಗಡಿ, ಹೋಟೆಲ್‌ನಲ್ಲಿ ಪಾರ್ಸಲ್‌ ಮಾತ್ರ

* ಹಾಪ್‌ಕಾಮ್ಸ್‌, ಹಾಲಿನ ಬೂತ್‌ ಸೇವೆ ಸಂಜೆ 6ರವರೆಗೆ

* ಬ್ಯಾಂಕ್, ಎಟಿಎಂ ಹಾಗೂ ಇ–ಕಾಮರ್ಸ್‌ ಸೇವೆ ಲಭ್ಯ

* ಬೀಜ, ರಸಗೊಬ್ಬರ, ಕೀಟನಾಶಕ ಅಂಗಡಿ, ಎಪಿಎಂಸಿ ಬೆಳಿಗ್ಗೆ 10ರವರೆಗೆ

* ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗಳಿಗೆ ಅವಕಾಶ

* ಅಗತ್ಯ ವಸ್ತುಗಳ ತಯಾರಿಕಾ ಘಟಕಗಳ ಕಾರ್ಯನಿರ್ವಹಣೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು