ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು ಕೋವಿಡ್ ಕೇಂದ್ರದಲ್ಲಿ ಆಮ್ಲಜನಕ ಸೌಲಭ್ಯ ಮರೀಚಿಕೆ

ರಾಂಪುರ: ಆರೋಗ್ಯ ಇಲಾಖೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ
Last Updated 5 ಮೇ 2021, 5:50 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆಗೆ ಆಮ್ಲಜನಕ ವ್ಯವಸ್ಥೆ ಮಾಡುವಲ್ಲಿ
ತೀವ್ರ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಂಪುರ ಆಸ್ಪತ್ರೆಯು ಮೊಳಕಾಲ್ಮುರು, ಸಂಡೂರು, ಕೂಡ್ಲಿಗಿ ತಾಲ್ಲೂಕುಗಳ 40ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಕೇಂದ್ರ ಸ್ಥಳವಾಗಿದೆ. ತಾಲ್ಲೂಕಿನಲ್ಲಿ ಪ್ರಸ್ತುತ ಮೊಳಕಾಲ್ಮುರು ಮತ್ತು ರಾಂಪುರದಲ್ಲಿ ಕೋವಿಡ್ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.

ಸೋಂಕಿನ 2ನೇ ಅಲೆ ಹೆಚ್ಚಳವಾಗುತ್ತಿರುವ ಜತೆಗೆ ರೋಗಿಗಳು ಪ್ರಮುಖವಾಗಿ ಆಮ್ಲಜನಕ ಕೊರತೆಯಿಂದಾಗಿ ಸಾಯುತ್ತಿರುವುದು ಆತಂಕದ ಸಂಗತಿಯಾಗಿದೆ. ಇದರ ಅರಿವಿದ್ದರೂ ರಾಂಪುರ ಕೋವಿಡ್ ಸೆಂಟರ್‌ನಲ್ಲಿ ಸ್ಥಾಪಿಸಿರುವ ಆಕ್ಸಿಜನ್ ಕೇಂದ್ರವನ್ನು ಇನ್ನೂ ಸೇವೆಗೆ ನೀಡದಿರುವುದು ಹಾಸ್ಯಾಸ್ಪದ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ ವರ್ಷ ಪ್ರಥಮ ಅಲೆ ವೇಳೆ ಈ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಈವರೆಗೂ ಸೇವೆಗೆ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವಕೀಲ ಅಶೋಕ್ ಹೇಳಿದರು.

ಈ ಬಗ್ಗೆ ಕೇಂದ್ರದ ವೈದ್ಯರನ್ನು ಪ್ರಶ್ನೆ ಮಾಡಿದರೆ, ‘ಆರು ತಿಂಗಳ ಹಿಂದೆ ಘಟಕ ಅಳವಡಿಸಲಾಗಿದೆ. ಕೇಂದ್ರದಲ್ಲಿರುವ 30 ಬೆಡ್‌ಗಳಿಗೆ ಆಮ್ಲಜನಕ ವ್ಯವಸ್ಥೆ ಇದರಿಂದ ದೊರೆಯಲಿದೆ. ಬೆಂಗಳೂರು ಮೂಲದ ಗುತ್ತಿಗೆದಾರರು ಘಟಕ ಸ್ಥಾಪನೆ ಮಾಡಿದ್ದಾರೆ. 30 ಬೆಡ್‌
ಗಳಲ್ಲಿ 15 ಕೋವಿಡ್ ರೋಗಿಗಳಿಗೆ, 15 ಬೆಡ್ ಅಸ್ತಮಾ, ಉಸಿರಾಟ ತೊಂದರೆ ರೋಗಿಗಳಿಗೆ ಮೀಸಲಿಡಲಾಗುವುದು. ನಿತ್ಯ ಕೋವಿಡ್ ರೋಗಿಗಳು ಬರುತ್ತಾರೆ. ಆದರೆ ಉಸಿರಾಟ ಸಮಸ್ಯೆ ಇರುವವರನ್ನು ಮೊಳಕಾಲ್ಮುರಿನ ಆಸ್ಪತ್ರೆಗೆ ಕಳಿಸಲಾಗುತ್ತಿದೆ. ಈ ಕೇಂದ್ರ ವ್ಯಾಪ್ತಿಯ ಮೂರು ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ’ ಎಂದು ಹೇಳಿದರು.

ಮೊಳಕಾಲ್ಮುರು ಕೋವಿಡ್ ಸೆಂಟರ್‌ಗೆ ಹೆಚ್ಚು ರೋಗಿಗಳು ದಾಖಲಾಗುತ್ತಿದ್ದಾರೆ. ಇಲ್ಲಿಯೂ ನಿತ್ಯ 4 ಆಮ್ಲಜನಕ ಸಿಲಿಂಡರ್ ಅಗತ್ಯವಿದೆ. ಸಿಲಿಂಡರ್ ಪೂರೈಕೆ ಒಂದು ದಿನ ವಿಳಂಬವಾದರೂ ಸಾವು ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಕೂಡಲೇ ರಾಂಪುರ ಕೇಂದ್ರದಲ್ಲಿ ಆಮ್ಲಜನಕ ವ್ಯವಸ್ಥೆ ಆರಂಭಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT