ಬುಧವಾರ, ನವೆಂಬರ್ 25, 2020
24 °C
ಅಂಗಡಿ ತೆರೆಯಲು ವ್ಯಾಪಾರಸ್ಥರ ಹಿಂದೇಟು l ನಿರೀಕ್ಷಿತ ವಹಿವಾಟು ಅನುಮಾನ

ಚಿತ್ರದುರ್ಗ: ಪಟಾಕಿ ಉದ್ಯಮಕ್ಕೂ ಕೋವಿಡ್ ಆತಂಕ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್ ಕಾರಣಕ್ಕೆ ಈಗಾಗಲೇ ಅನೇಕ ಉದ್ಯಮಗಳು ನೆಲಕಚ್ಚಿವೆ. ಈಗಷ್ಟೇ ನಿಧಾನವಾಗಿ ಮೊದಲಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ನಡುವೆ ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಈ ವೇಳೆಯ ಪಟಾಕಿ ಉದ್ಯಮವೂ ಕೋವಿಡ್ ಆತಂಕಕ್ಕೆ ಒಳಗಾಗಿದೆ.

ದೀಪಾವಳಿ ವೇಳೆ ಪಟಾಕಿ ಉದ್ಯಮದಲ್ಲಿ ತೊಡಗುವವರು ಸಾಮಾನ್ಯವಾಗಿ ಎರಡು ತಿಂಗಳು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ, ಈ ಬಾರಿ ಹಬ್ಬಕ್ಕೆ ಹಿಂದಿನ ವರ್ಷದಂತೆ ತಯಾರಿ ನಡೆಸಲು ವ್ಯಾಪಾರಸ್ಥರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಹಬ್ಬಕ್ಕೆ ಎರಡು ವಾರ ಮಾತ್ರ ಬಾಕಿ ಇದ್ದರೂ ಜಿಲ್ಲಾಧಿಕಾರಿ ಕಚೇರಿಗೆ ಪರವಾನಗಿಗೆ ಅರ್ಜಿ ಸಲ್ಲಿಸಿದವರು ವಿರಳ.

ಅಂಗಡಿ ಇಡಬೇಕೆ? ಬೇಡವೇ ಎಂಬ ಕುರಿತು ಕೆಲ ವ್ಯಾಪಾರಸ್ಥರಲ್ಲಿ ಗೊಂದಲವಿದೆ. ನಿರೀಕ್ಷೆಯಂತೆ ವ್ಯಾಪಾರ ಆಗುತ್ತದೆಯೇ ಎಂಬ ಅನುಮಾನ ಕೆಲವರಲ್ಲಿದೆ. 2019ರಲ್ಲೇ ಹೇಳಿಕೊಳ್ಳುವಂಥ ವ್ಯಾಪಾರ ಆಗಿರಲಿಲ್ಲ. ಕೊರೊನಾ ಕಾರಣಕ್ಕೆ ಈ ಬಾರಿ ಹೇಗೆ ವಹಿವಾಟು ನಡೆದೀತೋ ಎಂಬ ಭೀತಿ ವ್ಯಾಪಾರಸ್ಥರನ್ನು ಕಾಡತೊಡಗಿದೆ.

ಚಿತ್ರದುರ್ಗ ನಗರದಲ್ಲಿ ಒಂದಿಷ್ಟು ವ್ಯಾಪಾರಸ್ಥರು ಅರ್ಜಿ ಸಲ್ಲಿಸಿದ್ದಾರೆ. ಚಳ್ಳಕೆರೆ, ಹಿರಿಯೂರು, ಹೊಸದುರ್ಗದಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ ವಿರಳ. ಈವರೆಗೂ ಹೊಳಲ್ಕೆರೆಯಿಂದ ಒಬ್ಬರೂ ಅರ್ಜಿ ಸಲ್ಲಿಸಿಲ್ಲ. ಮೊಳಕಾಲ್ಮುರು ಭಾಗದಿಂದ ಒಂದು ಅರ್ಜಿ ಸಲ್ಲಿಕೆಯಾಗಿದೆ.

‘ಅಂಗಡಿ ತೆರೆಯಬೇಕೆ ಬೇಡವೇ ಎಂಬ ಕುರಿತು ಇನ್ನೂ ತೀರ್ಮಾನಿಸಿಲ್ಲ. ಕೋವಿಡ್ ಕಾರಣಕ್ಕೆ ಅಂಗಡಿ ತೆರೆಯುವುದು ಬೇಡ ಎಂಬುದು ಮಕ್ಕಳ ಒತ್ತಾಯ. ಒಂದು ವಾರ ಕಾದು ನಂತರ ನಿರ್ಧರಿಸುತ್ತೇವೆ’ ಎನ್ನುತ್ತಾರೆ ಚಿತ್ರದುರ್ಗದ ಪಟಾಕಿ ವ್ಯಾಪಾರಿ ಕೊಟ್ರೇಶ್.

‘ಅನೇಕ ವರ್ಷಗಳಿಂದ ಪಟಾಕಿ ಮಾರಾಟ ಮಾಡುತ್ತಿದ್ದೇವೆ. ಪರವಾನಗಿಗೆ ಅರ್ಜಿ ಸಲ್ಲಿಸಿದ್ದೇವೆ. ಕೋವಿಡ್ ಮಾರ್ಗಸೂಚಿ ಅನುಸರಿಸಬೇಕಾದ ಕಾರಣ ಬಿಡಿ ಬಿಡಿ ಪಟಾಕಿ ಮಾರಾಟ ಮಾಡದಿರಲು ನಿರ್ಧರಿಸಿದ್ದೇವೆ. ಗಿಫ್ಟ್ ಹಾಗೂ ಬಾಕ್ಸ್ ಪಟಾಕಿ ಮಾರಾಟಕ್ಕೆ ಆದ್ಯತೆ ನೀಡಲಾಗುವುದು’ ಎನ್ನುತ್ತಾರೆ ಇಲ್ಲಿನ ಪಟಾಕಿ ವ್ಯಾಪಾರಿ ರವಿ.

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರೆ ಮತ್ತು ಮಾಲಿನ್ಯದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಅರಿವಿನಿಂದಾಗಿ ಪಟಾಕಿ ವ್ಯಾಪಾರ ಕುಸಿಯುತ್ತಿದೆ. ಈ ವರ್ಷ ಕೊರೊನಾ ಸೋಂಕು ಉದ್ಯಮಕ್ಕೆ ಹೊಡೆತ ನೀಡಿದೆ. ಹೀಗಾಗಿ ಮೊದಲಿನಂತೆ ವ್ಯಾಪಾರ ನಿರೀಕ್ಷಿಸುವುದು ಕಷ್ಟ’ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ್.

ಪಟಾಕಿಗಳ ದರ ಶೇ 30ರಷ್ಟು ಹೆಚ್ಚಿದೆ. ಹೀಗಾಗಿ, ಪಟಾಕಿ ಖರೀದಿಸುವವರ ಸಂಖ್ಯೆ ಪ್ರತಿ ವರ್ಷವೂ ಕಡಿಮೆ ಆಗುತ್ತಿದೆ. ಕೋವಿಡ್, ಅತಿವೃಷ್ಟಿಯಿಂದಾಗಿಯೂ ವ್ಯಾಪಾರದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಎಂದು ಕೆಲ ಪಟಾಕಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರಕ್ಕೆ ಸರ್ಕಾರದ ಮಾರ್ಗಸೂಚಿ

ಹಬ್ಬದ ಅಂಗವಾಗಿ ತಾತ್ಕಾಲಿಕವಾಗಿ ನಿರ್ಮಾಣವಾಗುವ ಪಟಾಕಿ ಮಳಿಗೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಅಂಗಡಿಗಳ ನಡುವೆ ಕನಿಷ್ಠ 6 ಮೀಟರ್ ಅಂತರಬೇಕು. ಪರವಾನಗಿ ಪಡೆದವರಿಗೆ ನ. 17ರವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಇದೆ.

ನಿತ್ಯ ಅಂಗಡಿ ಸುತ್ತ ಸ್ಯಾನಿಟೈಸ್ ಮಾಡಬೇಕು. ಗ್ರಾಹಕರಿಗೆ ಸ್ಯಾನಿಟೈಸರ್‌ ನೀಡುವುದರ ಜತೆಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 6 ಅಡಿ ಅಂತರ ಕಾಯ್ದುಕೊಳ್ಳಬೇಕು. ತಪ್ಪದೇ ಮುಖಗವಸು ಧರಿಸಿರಬೇಕು. ಜನದಟ್ಟಣೆ ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

ಸರ್ಕಾರದ ಮಾರ್ಗಸೂಚಿ ಪ್ರಕಾರ ವಿಶಾಲವಾದ ಪ್ರದೇಶದಲ್ಲಿ ತಾತ್ಕಾಲಿಕ ಮಳಿಗೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ. ಈ ಸಂಬಂಧ ಚಿತ್ರದುರ್ಗ ನಗರಸಭೆಗೆ ಈವರೆಗೂ ಒಂದು ಅರ್ಜಿಯೂ ಬಂದಿಲ್ಲ.

-ಜೆ.ಟಿ.ಹನುಮಂತರಾಜು, ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು